ಬುಧವಾರ, ಜುಲೈ 6, 2022
22 °C

ಚಿತ್ರದುರ್ಗ: ಮಲ್ಲಾಪುರ ಕೆರೆಗೆ ಕಂಟಕವಾದ ಹೆದ್ದಾರಿ, ಅಪಾಯದ ಮುನ್ಸೂಚನೆ

ಕೆ.ಪಿ.ಓಂಕಾರಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸೊಲ್ಲಾಪುರ–ಮಂಗಳೂರು ಹೆದ್ದಾರಿ ನಿರ್ಮಾಣದ ವೇಳೆ ಆದ ಎಡವಟ್ಟಿನಿಂದ ನಗರದ ಹೊರವಲಯದ ಮಲ್ಲಾಪುರ ಕೆರೆಗೆ ಕಂಟಕ ಎದುರಾಗಿದೆ. ವಾಹನ ಸವಾರರು, ಗ್ರಾಮಸ್ಥರಲ್ಲಿ ಆತಂಕ ಗೂಡು ಕಟ್ಟಿದೆ.

ಜಿಲ್ಲೆಯ ಪ್ರಮುಖ ಕೆರೆಗಳಲ್ಲಿ ಒಂದಾದ ಮಲ್ಲಾಪುರ ಕೆರೆ ಕಳೆದ ವರ್ಷ ಸುರಿದ ಮಳೆಗೆ ನಾಲ್ಕೈದು ಬಾರಿ ನಿರಂತರವಾಗಿ ಕೋಡಿ ಬಿದ್ದಿತ್ತು. ಈ ಕೆರೆ ಸುತ್ತಲಿನ ಪ್ರದೇಶಗಳ ಕೃಷಿಕರ ಜೀವಸೆಲೆಯಾಗಿದೆ.

ಬೆಂಗಳೂರು-ಸೊಲ್ಲಾಪುರ ಸಂಪರ್ಕಿಸುವ ಹೊಸಪೇಟೆ-ಚಿತ್ರದುರ್ಗ ಮಧ್ಯೆ 134 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಕೆರೆಯ ಏರಿಯವರೆಗೂ ರಸ್ತೆ ವಿಸ್ತರಣೆ ಮಾಡಲಾಗಿದೆ. ಬಾಪೂಜಿ ವಿದ್ಯಾಸಂಸ್ಥೆಯಿಂದ ಮಲ್ಲಾಪುರ ಗ್ರಾಮದವರೆಗೆ ಸರ್ವಿಸ್‌ ರಸ್ತೆ ನಿರ್ಮಿಸಲಾಗಿದೆ. ಈ ವೇಳೆ ಏರಿಯ ಒಂದು ಭಾಗದ ಮೇಲೆಯೇ ಡಾಂಬರ್‌ ಹಾಕಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದರಿಂದ ಏರಿಯು ಒಂದಷ್ಟು ಒತ್ತುವರಿಯಾಗಿದೆ.

228 ಎಕರೆಯ ಕೆರೆಯಲ್ಲಿ 200 ಎಕರೆಯಷ್ಟು ನೀರು ಸಂಗ್ರಹವಾಗಿದೆ. ಬೇಸಿಗೆ ಸಮಯದಲ್ಲಿ ಕೆರೆಯ ಏರಿಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಮಲ್ಲಾಪುರ ಕೆರೆಯಲ್ಲಿನ ಬಿರುಕು ಹಲವು ಅನುಮಾನಗಳಿಗೆ ಎಡೆಮಾಡಿದೆ.

‘ವಿಶಾಲವಾದ ಈ ಕೆರೆಗೆ ರಂಗನಹಳ್ಳಿಯ ಮಲ್ಲಾಪುರದ ಹಳ್ಳ, ಪಿಳ್ಳೇಕೆರೆನಹಳ್ಳಿ ಹಳ್ಳ ಹಾಗೂ ಮೇದೆಹಳ್ಳಿಯ ಹಳ್ಳದ ನೀರು ಹರಿದು ಬರುತ್ತದೆ. ರಸ್ತೆ ಕಾಮಗಾರಿ ವೇಳೆ ಏರಿ ಸಮೀಪ ನಿರಂತರವಾಗಿ ಬೃಹತ್‌ ಯಂತ್ರಗಳು ಸಂಚಾರ ನಡೆಸಿದ್ದರಿಂದ ಏರಿ ಪಕ್ಕದಲ್ಲಿದ್ದ ಕಲ್ಲುಗಳು ಕಳಚಿ ಬಿದ್ದು ಹೋಗಿವೆ. ಒಂದು ಕಿ.ಮೀ.ನಷ್ಟಿರುವ ಏರಿಯ ಮಧ್ಯ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಜತೆಗೆ ಬಳ್ಳಾರಿ ಜಾಲಿಗಿಡಗಳು ಬೆಳೆದಿವೆ. ಒಬ್ಬ ವ್ಯಕ್ತಿ ಮಾತ್ರ ಸಂಚರಿಸುವಷ್ಟು ಮಾರ್ಗ ಕಿರಿದಾಗಿದೆ’ ಎನ್ನುತ್ತಾರೆ ಮಹಾತ್ಮಗಾಂಧಿ ಕೆರೆ ಬಳಕೆದಾರರ ಸಂಘದವರು.

ರಸ್ತೆ ಕಾಮಗಾರಿ ವೇಳೆ ಕೆರೆಯ ಎರಡು ನಾಲೆಗಳನ್ನು ಕಿತ್ತು ಹಾಕಲಾಗಿದೆ. ಕೆರೆಯ ತೂಬುಗಳಿಂದ ನಾಲೆಗೆ ನೀರು ಹಾಯಿಸಿದರೆ ರಸ್ತೆಗಳು ಜಲಾವೃತವಾಗುತ್ತವೆ. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

‘ಕೆರೆಯಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣದಲ್ಲಿ ಇಂತಿಷ್ಟು ಪ್ರಮಾಣದ ನೀರು ಹೊರ ಹೋಗದಿದ್ದರೆ ಕೆರೆಗೆ ಅಪಾಯ’ ಎನ್ನುತ್ತಾರೆ ತಜ್ಞರು.

‘ಹೆದ್ದಾರಿ ನಿರ್ಮಾಣದ ವೇಳೆ ಕೆರೆ ಏರಿ ಎಲ್ಲಿ ಏನಾಗುತ್ತದೆಯೋ ಎಂಬ ಆತಂಕ ಎದುರಾಗಿತ್ತು. ಏರಿ ಪಕ್ಕದಲ್ಲೇ ಟ್ರಂಚ್‌ ಹೊಡೆಯಲಾಗಿದೆ. ಶಾಲೆ ಪಕ್ಕದಲ್ಲಿ ಏರಿಯೇ ಕಾಣೆಯಾಗಿದೆ. ಇದರಿಂದ ನೀರನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಶತಮಾನದ ಕೆರೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ’ ಎನ್ನುತ್ತಾರೆ ಕೆರೆ ಬಳಕೆದಾರರ ಸಂಘದ ಕಾರ್ಯದರ್ಶಿ ಬಸವರಾಜಪ್ಪ.

*
ಹೆದ್ದಾರಿ ಕಾಮಗಾರಿಯಿಂದ ಕೆರೆಗೆ ಸಮಸ್ಯೆಯಾಗಿದೆ. ಈಗಾಗಲೇ ಕೆರೆ ಏರಿ ಮೇಲೆ ಚಿಕ್ಕದಾಗಿ ಬಿರುಕು ಕಾಣಿಸಿಕೊಂಡಿದೆ. ಒಂದು ಭಾಗದ ಏರಿಯ ಮೇಲೆ ಸರ್ವೀಸ್‌ ರಸ್ತೆ ನಿರ್ಮಿಸಿದ್ದಾರೆ.
-ಸಿದ್ದಪ್ಪ ಪಿಳ್ಳೇಕೆರೆನಹಳ್ಳಿ, ಖಜಾಂಚಿ ಮಹಾತ್ಮಗಾಂಧಿ ಕೆರೆ ಬಳಕೆದಾರರ ಸಂಘ

*
ಮಲ್ಲಾಪುರ ಕೆರೆಯ ಸಮಸ್ಯೆ ಗಮನಕ್ಕೆ ಬಂದಿದ್ದು, ಶಾಸಕರ ಸೂಚನೆಯಂತೆ ₹ 6 ಲಕ್ಷ ಅನುದಾನದಲ್ಲಿ ಕೆರೆ ಅಭಿವೃದ್ಧಿಗೊಳಿಸಲು ಶೀಘ್ರ ಚಾಲನೆ ನೀಡಲಾಗುವುದು.
-ಎಂ.ಎನ್‌. ನವೀನ್‌, ಎಇ, ಸಣ್ಣ ನೀರಾವರಿ ಇಲಾಖೆ

*
ಕೆರೆಯ ಏರಿಗೆ ಬಳ್ಳಾರಿ ಜಾಲಿಗಿಡಗಳು ಕಂಟಕ. ಬೇಸಿಗೆ ಪ್ರಾರಂಭದಲ್ಲೇ ಇವುಗಳನ್ನು ಜೆಸಿಬಿ ಬಳಸದೇ ತೆರವುಗೊಳಿಸಬೇಕು. ಏರಿಯನ್ನು ಅಚ್ಚುಕಟ್ಟುಗೊಳಿಸದಿದ್ದರೆ ಅಪಾಯ ಖಚಿತ.
-ಎನ್‌.ದೇವರಾಜರೆಡ್ಡಿ, ಜಲತಜ್ಞ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು