ಮಂಗಳವಾರ, ನವೆಂಬರ್ 12, 2019
28 °C

ಮ್ಯಾನ್‌ಹೋಲ್‌ಗೆ ಮಹಿಳೆ ಇಳಿಸಿ ಶುಚಿ: ವಾಚ್‌ಮನ್‌ ವಿರುದ್ಧ ಎಫ್‌ಐಆರ್‌

Published:
Updated:

ಚಿತ್ರದುರ್ಗ: ಇಲ್ಲಿನ ಲಕ್ಷ್ಮಿ ಬಜಾರಿನ ಜೈನ ದೇಗುಲ ಮುಂಭಾಗದ ಮ್ಯಾನ್‌ಹೋಲ್‌ಗೆ ಮಹಿಳೆಯನ್ನು ಇಳಿಸಿ ಶುಚಿಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅಶೋಕ (42) ಎಂಬಾತನ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಾಗಿದೆ.

ಜೈನ ದೇಗುಲದಲ್ಲಿ ಅಶೋಕ ವಾಚ್‌ಮನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಮ್ಯಾನ್‌ಹೋಲ್‌ಗೆ ಇಳಿದ ಮಹಿಳೆಯನ್ನು ಕಾಮನಬಾವಿ ನಿವಾಸಿ ಪಾರಮ್ಮ (63) ಎಂದು ಗುರುತಿಸಲಾಗಿದೆ. ಇವರು ಅದೇ ದೇಗುಲದಲ್ಲಿ ಸ್ವಚ್ಛತೆ ಕೆಲಸ ಮಾಡಿಕೊಂಡಿದ್ದಾರೆ. ಪೌರಾಯುಕ್ತರು ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮ್ಯಾನ್‌ಹೋಲ್‌ ಶುಚಿಗೊಳಿಸಲು ಮಹಿಳೆ ಸಜ್ಜಾಗಿ ಕುಳಿತಿದ್ದ ದೃಶ್ಯ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದನ್ನು ಗಮನಿಸಿದ ನಗರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವಿಡಿಯೊದಲ್ಲಿದ್ದ ಅಶೋಕನನ್ನು ವಿಚಾರಣೆಗೆ ಒಳಪಡಿಸಿದ್ದರು. ಕೃತ್ಯ ನಡೆದಿದ್ದು ಖಚಿತವಾಗಿದ್ದರಿಂದ ಪ್ರಕರಣ ದಾಖಲಿಸಲಾಗಿದೆ. ವಿಡಿಯೊ ದೃಶ್ಯದಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಪ್ರತಿಕ್ರಿಯಿಸಿ (+)