ಮಂಗಳವಾರ, ಮೇ 26, 2020
27 °C
ಬೆಳಿಗ್ಗೆ 6ರಿಂದ 9ರವರೆಗೆ ಖರೀದಿಗೆ ಅವಕಾಶ

ತರಕಾರಿ ಮಾರುಕಟ್ಟೆ ಕ್ರೀಡಾಂಗಣಕ್ಕೆ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ತರಕಾರಿ ಮಾರುಕಟ್ಟೆಯನ್ನು ಸಂತೆ ಮೈದಾನದಿಂದ ವಿಜ್ಞಾನ ಕಾಲೇಜು ಆವರಣದಲ್ಲಿರುವ ಮುರುಘರಾಜೇಂದ್ರ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲು ನಗರಸಭೆ ನಿರ್ಧರಿಸಿದೆ. ಶನಿವಾರದಿಂದಲೇ ಇದು ಜಾರಿಗೆ ಬರಲಿದೆ.

ನಿತ್ಯ ಬೆಳಿಗ್ಗೆ 6ರಿಂದ 9ರವರೆಗೆ ಮೂರು ಗಂಟೆ ತರಕಾರಿ ಖರೀದಿ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೀದಿ ಸುತ್ತಿ ತರಕಾರಿ ಮಾರಾಟ ಮಾಡುವ ತಳ್ಳುವ ಗಾಡಿಯವರು ಕೂಡ ಇದೇ ಮಾರುಕಟ್ಟೆಯಲ್ಲಿ ಖರೀದಿಸುವಂತೆ ಸೂಚನೆ ನೀಡಲಾಗಿದೆ.

ಸಂತೆಹೊಂಡದ ಸಮೀಪದ ರಸ್ತೆಯಲ್ಲಿ ನಡೆಯುತ್ತಿದ್ದ ತರಕಾರಿ ಮಾರುಕಟ್ಟೆ ಕಿರಿದಾಗಿದೆ. ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇಲ್ಲಿ ಸಾಧ್ಯವಿಲ್ಲ. ಖರೀದಿಗೆ ಜನರು ಮುಗಿಬೀಳುತ್ತಿದ್ದಂತೆ ಪೊಲೀಸರು ಅಂಗಡಿಗಳನ್ನು ತೆರವುಗೊಳಿಸುತ್ತಿದ್ದರು. ಜನದಟ್ಟಣೆಯನ್ನು ನಿಯಂತ್ರಿಸಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಕ್ರೀಡಾಂಗಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಕ್ರೀಡಾಂಗಣದಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸುವ ನಗರಸಭೆಯ ಪ್ರಸ್ತಾವಕ್ಕೆ ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಅನುಮೊದನೆ ನೀಡಿದ್ದಾರೆ. ತರಕಾರಿ ಮಾರುಕಟ್ಟೆ ಬದಲಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಯತ್ನ ಶುಕ್ರವಾರ ನಡೆಯಿತು. ಬಡಾವಣೆಗಳಲ್ಲಿ ಸಂಚರಿಸಿದ ನಗರಸಭೆ ವಾಹನಗಳು ಧ್ವನಿವರ್ಧಕದಲ್ಲಿ ಈ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಿದವು.

‘ಸಂತೆ ಹೊಂಡದ ಸಮೀಪ ಕಿರಿದಾದ ಮಾರುಕಟ್ಟೆ ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಮುರುಘರಾಜೇಂದ್ರ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗುತ್ತಿದೆ. ವ್ಯಾಪಾರಸ್ಥರು ಕೂರುವ ಹಾಗೂ ಗ್ರಾಹಕರು ಸರತಿಯಲ್ಲಿ ಸಾಗಲು ಅನುಕೂಲವಾಗುವಂತೆ ಗೆರೆಗಳನ್ನು ಹಾಕಲಾಗಿದೆ. ಜನರು ಹಾಗೂ ವ್ಯಾಪಾರಸ್ಥರ ಸಲಹೆಗಳನ್ನು ಪಡೆದು ಬದಲಾವಣೆ ಮಾಡುತ್ತೇವೆ’ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದ್ದಾರೆ.

ದೂರು ನೀಡಲು ಅವಕಾಶ:

‘ಕೋವಿಡ್‌–19’ ನಿಯಂತ್ರಣಕ್ಕೆ ದೇಶದಾಂತ್ಯದ ಲಾಕ್‌ಡೌನ್‌ ಘೋಷಣೆ ಮಾಡಲಾಗಿದ್ದು, ಅಗತ್ಯ ವಸ್ತುಗಳ ಖರೀದಿಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಹವಾಲು ಸಲ್ಲಿಸಲು ನಗರಸಭೆ ಅವಕಾಶ ಕಲ್ಪಿಸಿದೆ. ದಿನಸಿ, ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ಹಾಗೂ ಪರಿಹಾರ ಒದಗಿಸಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

ಕುಡಿಯುವ ನೀರು ಪೂರೈಕೆ: ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮನೋಹರ್ – 9741539676, ಕಿರಿಯ ಎಂಜಿನಿಯರ್‌ ಎಸ್.ಆರ್.ಕಿರಣ್‍ಕುಮಾರ್ – 9886787899 ಸಂಪರ್ಕಿಸಬಹುದು.

ಸ್ವಚ್ಛತೆಗೆ: ಪರಿಸರ ಎಂಜಿನಿಯರ್‌– ಜಾಫರ್ ಸಾಬ್– 9620804061, ಹಿರಿಯ ಆರೋಗ್ಯ ನಿರೀಕ್ಷಕ ಎ.ಬಾಬುರೆಡ್ಡಿ– 7259341919, ಆರೋಗ್ಯ ನಿರೀಕ್ಷಕಿಯರಾದ ಸಿ.ಸರಳ– 9901124232, ರುಕ್ಮೀಣಿ– 8310684884, ಕೆ.ಎಸ್.ಭಾರತಿ– 8105311730, ನಾಗರಾಜ– 8496088111, ಬಸವರಾಜ– 9740642719 ಹಾಗೂ ಸಹಾಯವಾಣಿ – 08194-222401ಸಂಪರ್ಕಿಸಬಹುದು.

ಅಗತ್ಯ ವಸ್ತುಗಳ ಕೊರತೆ, ದುಬಾರಿ ಬೆಲೆಗೆ ಮಾರಾಟ ಸೇರಿದಂತೆ ಇತರ ಸಮಸ್ಯೆಗಳಿಗೆ ವಾರ್ಡ್‌ ಸದಸ್ಯರನ್ನು ಸಂಪರ್ಕಿಸಬಹುದು ಎಂದು ನಗರಸಭೆ ಮಾಹಿತಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು