ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ಮತಿ ಇದ್ದರೆ ಪ್ರಗತಿ ಸಾಧ್ಯ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಮತ
Last Updated 5 ಏಪ್ರಿಲ್ 2022, 13:24 IST
ಅಕ್ಷರ ಗಾತ್ರ

ಚಿತ್ರದುರ್ಗ: ಸನ್ಮತಿ ಮತ್ತು ಗತಿ ಪ್ರತಿಯೊಬ್ಬರನ್ನೂ ಪ್ರಗತಿಯತ್ತ ಕೊಂಡೊಯ್ಯುತ್ತದೆ. ದುರ್ಮತಿ ಅಧೋಗತಿಯ ಕಡೆಗೆ ಕರೆದೊಯ್ಯುತ್ತದೆ ಎಂದು ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಷನ್‌ ವತಿಯಿಂದ ಮಂಗಳವಾರ ಏರ್ಪಡಿಸಿದ್ದ 32ನೇ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಬ್ರಹ್ಮಾಂಡದಲ್ಲಿ ಲಕ್ಷೊಪಲಕ್ಷ ಜೀವರಾಶಿಗಳಿವೆ. ಇವುಗಳ ಬುದ್ದಿ ಸೀಮಿತವಾಗಿದೆ. ಮಾನವನ ಮತಿ ಮಾತ್ರ ಶ್ರೇಷ್ಠವಾಗಿದೆ. ಒಳ್ಳೆಯ ಮತಿ ಸನ್ಮತಿ ಕಡೆಗೆ ಕರೆದೊಯ್ಯುತ್ತದೆ. ಇದು ಬದುಕನ್ನು ಉದ್ದರಿಸುತ್ತದೆ. ನಾವು ಯಾವುದೇ ಹಂತದಲ್ಲಿ ಮತಿಯನ್ನು ಕಳೆದುಕೊಳ್ಳಬಾರದು’ ಎಂದು ಸಲಹೆ ನೀಡಿದರು.

‘ಸನ್ಮತಿ ಮತ್ತು ದುರ್ಮತಿಗಳ ನಡುವೆ ಸಂಘರ್ಷ ನಡೆಯುತ್ತದೆ. ಇದಕ್ಕೆ ಯಾರೂ ಹೊರತಾಗಿಲ್ಲ. ಸನ್ಮತಿ ಜೀವನಕ್ಕೆ ಗತಿ ತೋರಿಸುತ್ತದೆ. ಆಗ ನಾವು ಪ್ರಗತಿಯತ್ತ ಸಾಗಲು ಸಾಧ್ಯವಾಗಬಹುದು. ದುರ್ಮತಿ ಅಧೋಗತಿಗೆ ತಳ್ಳುತ್ತದೆ. ಅನಾರೋಗ್ಯಕರ ಬದುಕು ರೂಪಿಸುತ್ತದೆ. ಇಂತಹ ಮಾರ್ಗವನ್ನು ಯಾರೊಬ್ಬರೂ ಅನುಸರಿಸಬಾರದು. ಇದನ್ನೇ ಸಂತರು, ಮಹನೀಯರು ಸಮಾಜಕ್ಕೆ ಬೋಧಿಸಿದ್ದಾರೆ’ ಎಂದರು.

ಬನವಾಸಿಯ ಅಲ್ಲಮಪ್ರಭು ಹೊಳೆಮಠದ ನಾಗಭೂಷಣ ಸ್ವಾಮೀಜಿ ಮಾತನಾಡಿ, ‘12ನೇ ಶತಮಾನದ ಅನುಭವ ಮಂಟಪವನ್ನು ನಾವು ನೋಡಲು ಸಾಧ್ಯವಾಗಿಲ್ಲ. ಆದರೆ, ಇಂದಿನ ವೈಭವೋಪೇತ ಅನುಭವ ಮಂಟಪದಲ್ಲಿ ವಧು-ವರರು ವಿವಾಹವಾಗುತ್ತಿರುವುದು ಸಂತಸದ ಸಂಗತಿ’ ಎಂದರು.

‘ಬಸವಾದಿ ಶರಣರು ಸಂಸಾರಿಗಳಾಗಿದ್ದರೂ ಈ ಲೋಕದ ಜೀವನವನ್ನು ದೇವಲೋಕಕ್ಕೆ ಸಮೀಕರಿಸಿದರು. ತಮ್ಮ ನಡೆ ನುಡಿಯ ಮೂಲಕ ಹೇಗೆ ಬದುಕಬೇಕೆಂಬುದನ್ನು ತೋರಿಸಿಕೊಟ್ಟರು. ಜೇಡರ ದಾಸಿಮಯ್ಯನವರು ವಿವಾಹವಾಗಲು ಮಾಡಿದ ಕನ್ಯಾನ್ವೇಷಣೆಯೇ ಕುತೂಹಲಕಾರಿಯಾದುದು. ಸಂಸಾರ ಜೀವನ ಲೋಕದ ಪವಿತ್ರ ಜೀವನ ಎಂಬುದನ್ನು ತಿಳಿಸಿಕೊಟ್ಟವರು ಶರಣರು. ಸಂಸಾರ ಜೀವನ ನಿಸ್ಸಾರ ಜೀವನವಾಗಬಾರದು’ ಎಂದು ಕಿವಿಮಾತು ಹೇಳಿದರು.

ಏಳು ಜೋಡಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಮಠದ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್, ಎ.ಜೆ. ಪರಮಶಿವಯ್ಯ, ಸುರೇಶ್ ಬಾಫ್ನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT