ಬುಧವಾರ, ಜುಲೈ 28, 2021
23 °C
ಮುರುಘಾ ಮಠದಲ್ಲಿ ಸಾಮೂಹಿಕ ವಿವಾಹ, ಸತಿ–ಪತಿಯಾದ ಹತ್ತು ಜೋಡಿ

ಗ್ರಹಣದ ದಿನವೇ ಮುರುಘಾ ಮಠದಲ್ಲಿ ಸಾಮೂಹಿಕ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹದಲ್ಲಿ ಹತ್ತು ಜೋಡಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಂದ್ರಗ್ರಹದ ದಿನವೂ ವಚನ ಮಾಂಗಲ್ಯದ ಮೂಲಕ ಸತಿ–ಪತಿಯಾಗಿ ಹೊಸ ಬದುಕು ಆರಂಭಿಸಿದರು.

ಮುರುಘಾ ಮಠದ 30ನೇ ವರ್ಷದ ಆರನೇ ತಿಂಗಳ ಸಾಮೂಹಿಕ ವಿವಾಹ ಅನುಭವ ಮಂಟದಲ್ಲಿ ಸರಳವಾಗಿ ನಡೆಯಿತು. ಮಠದ ಆವರಣದಲ್ಲಿ ನವದಂಪತಿ ಸಸಿ ನೆಟ್ಟು ಪರಿಸರ ದಿನಾಚರಣೆ ಮಾಡಿದರು.

ಕೊರೊನಾ ಸೋಂಕಿನ ನಿಯಂತ್ರಣಕ್ಕೆ ರೂಪಿಸಿದ ನಿಯಮಗಳನ್ನು ಸಾಮೂಹಿಕ ವಿವಾಹದಲ್ಲಿ ಪಾಲನೆ ಮಾಡಲಾಯಿತು. ವಧು–ವರರು ಕೂಡ ಅಂತರ ಕಾಪಾಡಿಕೊಂಡು ವೇದಿಕೆಯ ಮೇಲೆ ಆಸೀನರಾಗಿದ್ದರು. ಮುಖಕ್ಕೆ ಮಾಸ್ಕ್‌ ಧರಿಸಿ, ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಂಡಿದ್ದರು. ನವದಂತಿಯನ್ನು ಹರಸಲು ಕುಟುಂಬದ ಕೆಲವೇ ಸದಸ್ಯರು ಆಗಮಿಸಿದ್ದರು. ವಿಶಾಲ ಸಭಾಂಗಣದಲ್ಲಿ ಅಂತರ ಕಾಪಾಡಿಕೊಂಡು ಕುಳಿತುಕೊಂಡಿದ್ದರು. ಶುಭ ಸಮಾರಂಭಕ್ಕೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್‌ ಕಡ್ಡಾಯಗೊಳಿಸಲಾಗಿತ್ತು.

ವಧು–ವರರು ವಿಭೂತಿ, ರುದ್ರಾಕ್ಷಿ ಧರಿಸಿದ ಬಳಿಕ ಮಾಂಗಲ್ಯ ಧಾರಣೆ ನೆರವೇರಿತು. ವಿವಾಹಕ್ಕೆ ಅನುಗುಣವಾದ ವಚನಗಳು ಶುಶ್ರಾವ್ಯವಾಗಿ ಧ್ವನಿಸುತ್ತಿದ್ದವು. ದಾಂಪತ್ಯ, ಮಾಂಗಲ್ಯ, ವಿಭೂತಿ ಹಾಗೂ ರುದ್ರಾಕ್ಷಿಯ ಮಹತ್ವವನ್ನು ಸಾರಿದವು. ಶಿವಮೂರ್ತಿ ಮುರುಘಾ ಶರಣರು ನವದಂಪತಿಗಳನ್ನು ಹರಸಿದರು. ಅಂತರ್ಜಾತಿ ವಿವಾಹವಾದ ಜೋಡಿಯನ್ನು ಶರಣರು ಅಭಿನಂದಿಸಿದರು.

‘ಗ್ರಹಣದ ದಿನ ಶುಭ ಸಮಾರಂಭ ಹಮ್ಮಿಕೊಳ್ಳಲು ಅನೇಕರು ಹಿಂಜರಿಯುತ್ತಾರೆ. ಗ್ರಹಣದ ದಿನವೇ ಮದುವೆ ಮಾಡಿ ಮೌಢ್ಯ ತೊಡೆದುಹಾಕುವ ಪ್ರಯತ್ನ ನಡೆದಿದೆ. ಚಂದ್ರಗ್ರಹಣದ ದಿನವೂ ಹತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಹರ್ಷ ಮೂಡಿಸಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡಿದರು.

‘ಕೊರೊನಾ ಎಂಬ ಕರಾಳ ಸೋಂಕಿನ ಕಬ್ಜದಲ್ಲಿ ಸಿಲುಕಿಕೊಂಡಿದ್ದೇವೆ. ಆರು ತಿಂಗಳಲ್ಲಿ ಇಡೀ ಜಗತ್ತು ಆವರಿಸಿದ ಈ ರೋಗ ಅಸಹಾಯಕತೆ ಸೃಷ್ಟಿಸಿದೆ. ಮಾನವನ ಬದುಕಿಗೆ ಆಗಾಗ ರೋಗಗಳು ಬಾಧಿಸುತ್ತವೆ. ಕೆಲವು ನೈಸರ್ಗಿಕವಾಗಿ ಬಂದರೆ, ಮತ್ತೆ ಹಲವು ಮಾನವ ನಿರ್ಮಿತ’ ಎಂದು ಅಭಿಪ್ರಾಯಪಟ್ಟರು.

‘ರೋಗ ಲಕ್ಷಣವೇ ಕಾಣಿಸದ ವಿಚಿತ್ರ ಕಾಯಿಲೆ ಕೊರೊನಾ. ಭಾರತೀಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಕಾರಣಕ್ಕೆ ದೇಶ ಉಸಿರಾಡುತ್ತಿದೆ. ಜೀವ ಉಳಿಸಿಕೊಳ್ಳುವುದು ಹಾಗೂ ಜೀವನ ಸಾಗಿಸುವುದು ಸವಾಲಾಗಿದೆ. ಹೋಟೆಲ್‌ ಹಾಗೂ ಪ್ರವಾಸಿತಾಣ ತೆರೆಯುವುದಕ್ಕೆ ಸಿದ್ಧತೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜನರು ಇನ್ನಷ್ಟು ಎಚ್ಚರದಿಂದ ಇರುವ ಅಗತ್ಯವಿದೆ’ ಎಂದು ಕಿವಿಮಾತು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು