ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಸಮಾಜಕ್ಕೆ ಮಾದರಿಯಾಗಿ ಬದುಕಲು ಸಂಸದ ಸಲಹೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ 15 ಜೋಡಿ

Published:
Updated:
Prajavani

ಚಿತ್ರದುರ್ಗ: ಮುರುಘಾ ಮಠದ ಆವರಣದಲ್ಲಿ ಗುರುವಾರ ಸಂಭ್ರಮ ಮನೆ ಮಾಡಿತ್ತು. ಹೊಸ ಬಟ್ಟೆ ತೊಟ್ಟು ಮದುವೆ ಸಾಕ್ಷಿಯಾಗಲು ಬಂದಿದ್ದ ಸಂಬಂಧಿಕರು ಲವಲವಿಕೆಯಿಂದ ಓಡಾಡುತ್ತಿದ್ದರು. ವಧು–ವರರು ಸತಿ–ಪತಿಗಳಾಗುತ್ತಿದ್ದಂತೆ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ಇಲ್ಲಿನ ಮುರುಘಾ ಮಠದಲ್ಲಿ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಷನ್‌ 29ನೇ ವರ್ಷದ 9ನೇ ತಿಂಗಳ ಸಾಮೂಹಿಕ ವಿವಾಹದಲ್ಲಿ 15 ಜೋಡಿಗಳು ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ವಿಧುರ ಮತ್ತು ವಿಧವೆ ಹೊಸ ಬದುಕಿಗೆ ಕಾಲಿಟ್ಟಿದ್ದು ಗಮನ ಸೆಳೆಯಿತು.

ಸಾಮೂಹಿಕ ವಿವಾಹ ಮಹೋತ್ಸವದ ಅಂಗವಾಗಿ ಮಠದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಧು–ವರರ ಸಂಬಂಧಿಕರು ಬೆಳಿಗ್ಗೆಯೇ ಮಠಕ್ಕೆ ಆಗಮಿಸಿದ್ದರು. ಸರಳ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ವಿವಾಹ ನೆರವೇರಿತು. ಗಣಪತಿ, ನಾಗರಪಂಚಮಿ ಹಬ್ಬಗಳ ನಡುವೆಯೂ ಹಲವರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ‘ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ಮಹತ್ವವಿದೆ. ಮಠಾಧೀಶರ ಆಶೀರ್ವಾದ ಸಿಕ್ಕಿರುವುದು ನೂತನ ದಂಪತಿಗಳ ಸುಯೋಗ. ಸಮಾಜಕ್ಕೆ ಮಾದರಿಯಾಗಿ ಬದುಕಿದರೆ ಎಲ್ಲರಿಗೂ ಒಳಿತಾಗುತ್ತದೆ’ ಎಂದು ಸಲಹೆ ನೀಡಿದರು.

‘ಶರಣ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸುವ ಕೆಲಸವನ್ನು ಮುರುಘಾ ಮಠ ಮಾಡುತ್ತಿದೆ. ಬಸವಣ್ಣನವರ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಶರಣರು ನಿರತರಾಗಿದ್ದಾರೆ. ಯುವ ಶಕ್ತಿಗೆ ಸಂಸ್ಕಾರ ನೀಡುವ ಕೆಲಸವನ್ನು ಮಠ ನೀಡುತ್ತಿರುವುದು ಶ್ಲಾಘನೀಯ. ಮಠಗಳು ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದರಿಂದ ಸಮಾಜಕ್ಕೆ ಒಳಿತಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಮಠದ ಆವರಣದಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಿಸಲಾಗುತ್ತಿದೆ. ಬರ ಪರಿಸ್ಥಿತಿಯ ನಡುವೆಯೂ ಇಂತಹ ಪ್ರತಿಮೆಯ ಅಗತ್ಯವಿತ್ತೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿತ್ತು. ಶರಣರ ತತ್ವಗಳ ಪ್ರಚಾರಕ್ಕೆ ಇದರ ಅಗತ್ಯವಿದೆ ಎಂಬುದು ಮನವರಿಕೆಯಾಗಿದೆ. ನಿಜಕ್ಕೂ ಇದೊಂದು ಉತ್ತಮ ಪ್ರಯತ್ನ’ ಎಂದು ಹೇಳಿದರು.

ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ಚಿತ್ರದುರ್ಗ ಹಾಗೂ ಗದಗ ಮಠಗಳ ಬೆಸುಗೆ ಹಿಂದಿನಿಂದಲೂ ಇದೆ. ಎರಡೂ ಮಠಗಳ ವಿಚಾರ ಹಾಗೂ ಸಿದ್ಧಾಂತ ಒಂದೇ’ ಎಂದರು.

‘ವಿದ್ಯಾರ್ಥಿಗಳು ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಮಾರ್ಗದರ್ಶನದಲ್ಲಿ ನಡೆಯಬೇಕು. ಶಿಕ್ಷಣ ಪಡೆದು ಉದ್ಯೋಗದಾತರಾಗಿ ಬೆಳೆಯಬೇಕು. ಸನ್ಮಾರ್ಗದಲ್ಲಿ ನಡೆದು ಮಾದರಿ ಪ್ರಜೆಗಳಾಗಬೇಕು’ ಎಂದು ಕಿವಿಮಾತು ಹೇಳಿದರು.

ಹಿರೇಮಲ್ಲನಕೆರೆ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಚಳ್ಳಕೆರೆಯ ಬಸವಕಿರಣ ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ತಹಶೀಲ್ದಾರ್ ವೆಂಕಟೇಶಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ಬಸವಂತಪ್ಪ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ ಇದ್ದರು.

Post Comments (+)