ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ಜೀವನಕ್ಕೆ ಶರಣರ ಸಲಹೆ

ಸಾಮೂಹಿಕ ವಿವಾಹದಲ್ಲಿ ಹೊಸ ಬದುಕಿಗೆ ಕಾಲಿಟ್ಟ 22 ಜೋಡಿ
Last Updated 5 ಡಿಸೆಂಬರ್ 2018, 17:25 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೊಸ ಸೀರೆ ತೊಟ್ಟು, ಮಲ್ಲಿಗೆ ಮುಡಿದ ಮದುಮಗಳ ಮೊಗ ಅರಳಿತ್ತು. ತುಸು ನಗುತ್ತಲೇ ಪಕ್ಕದಲ್ಲಿ ಆಸೀನನಾಗಿದ್ದ ಇನಿಯನತ್ತ ದೃಷ್ಟಿ ಹಾಯಿಸುತ್ತಿದ್ದವಳ ಕಣ್ಣುಗಳಲ್ಲಿ ಹೊಸ ಜೀವನದ ಬೆರಗು ಇಣುಕುತ್ತಿತ್ತು. ಆಡಂಬರವಿಲ್ಲದೆ ನಡೆದ ಸಾಮೂಹಿಕ ವಿವಾಹದಲ್ಲಿ 22 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮುರುಘಾ ಮಠದ ಅನುಭವ ಮಂಟಪದಲ್ಲಿ ಬುಧವಾರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. 28ನೇ ವರ್ಷದ 12ನೇ ತಿಂಗಳ ಸಾಮೂಹಿಕ ವಿವಾಹದಲ್ಲಿ ವಧು–ವರರನ್ನು ಹರಿಸಲು ಬಂದಿದ್ದ ಸಂಬಂಧಿಕರು ಸಂತಸದಲ್ಲಿದ್ದರು. ವೇದಿಕೆ ಮೇಲೆ ಕುಳಿತಿದ್ದ ನವ ದಂಪತಿಗಳಿಗೆ ಪುಷ್ಪಗಳನ್ನು ಹಾಕಿ ಹರಸಿದರು.

ಐದು ವರ್ಷದ ಬಾಲಕಿಯಾಗಿದ್ದಾಗಲೇ ಪೋಷಕರನ್ನು ಕಳೆದುಕೊಂಡು ಮಠದ ಆಶ್ರಯದಲ್ಲಿ ಬೆಳೆದ ಶ್ರೇಷ್ಠಾ ಎಂಬುವರನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ಬೆಂಗಳೂರು ಸೇಂಟ್‌ ಮಾರ್ಕ್‌ ರಸ್ತೆ ಶಾಖೆಯ ವ್ಯವಸ್ಥಾಪಕ ಶ್ರೀರಂಗಮೂರ್ತಿ ವರಿಸಿದರು. ಒಕ್ಕಲಿಗ ಸಮುದಾಯದ ಸಂತೋಷಕುಮಾರ್ ಅವರು ನಾಯಕ ಸಮುದಾಯದ ಭಾವನಾ ಅವರ ಕೈಹಿಡಿದರು.

ನವ ದಂ‍ಪತಿಯನ್ನು ಹರಸಿದ ಶಿವಮೂರ್ತಿ ಮುರುಘಾ ಶರಣರು, ‘ಆಡಂಬರದಿಂದ ಆಧುನಿಕ ಭಾರತ ಆದರ್ಶಗಳಿಂದ ದೂರ ಸರಿಯುತ್ತಿದೆ. ಸಂಪ್ರದಾಯ, ಮದುವೆಯ ನೆಪದಲ್ಲಿ ವರದಕ್ಷಿಣೆ ಎಂಬ ಪಿಡುಗನ್ನು ಬೆಳೆಸಿದ್ದಾರೆ. ಸಮಾಜದಲ್ಲಿ ಇದು ಮಾಮೂಲಿ ಎಂಬಂಥ ವಾತಾವರಣ ಸೃಷ್ಟಿಯಾಗಿರುವುದು ಆತಂಕಕಾರಿ ಸಂಗತಿ’ ಎಂದರು.

‘ಮರುಘಾ ಮಠದ ಪರಂಪರೆಗೆ ಮಾರು ಹೋಗಿ ಅನೇಕರು ಆದರ್ಶ ಜೀವನ ಕಟ್ಟಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಅಧಿಕಾರಿಗಳು ಕೂಡ ಸರಳ ವಿವಾಹವಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಪೋಷಕರು ಅಭಿನಂದನೆಗೆ ಅರ್ಹರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಂಪ್ರದಾಯಬದ್ಧ ವಿವಾಹ ವೈದಿಕ ಪ್ರಧಾನವಾಗಿ ನೆರವೇರುತ್ತದೆ. ಅಲ್ಲಿ ಸಂಸ್ಕೃತ ಶ್ಲೋಕಗಳು ಹೆಚ್ಚಿರುತ್ತವೆ. ಕೊಟ್ಟು–ತೆಗೆದುಕೊಳ್ಳುವ ವ್ಯವಹಾರ ನಡೆಯುತ್ತದೆ. ದೊಡ್ಡ ನಗರಗಳಲ್ಲಿ ಅದ್ದೂರಿ ಮದುವೆಗೆ ದುಂದು ವೆಚ್ಚ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅಥಣಿ ಗಚ್ಛಿನಮಠದ ಶಿವಬಸವ ಸ್ವಾಮೀಜಿ, ತಿಳುವಳ್ಳಿ ಕಲ್ಮಠದ ಬಸವ ನಿರಂಜನ ಸ್ವಾಮೀಜಿ, ನಾಗಗೊಂಡನಹಳ್ಳಿ ಚೆಲುಮೆರುದ್ರಸ್ವಾಮಿ ಮಠದ ಬಸವಕಿರಣ ಸ್ವಾಮೀಜಿ, ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ, ಬಸವ ಕುಂಬಾರ ತಿಪ್ಪೇಸ್ವಾಮಿ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಇಂದಿರೇಶ್, ತುಮಕೂರು ಡಿವೈಎಸ್ಪಿ ಶಾಂತವೀರಪ್ಪ, ಭಾವನಾ ಸಾಣಿಕೊಪ್ಪ ಮತ್ತು ಈಶ್ವರ ಎಂ.ಸಾಣಿಕೊಪ್ಪ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಪೈಲ್ವಾನ್ ತಿಪ್ಪೇಸ್ವಾಮಿ, ಕೆಇಬಿ ಷಣ್ಮುಖಪ್ಪ, ಎಂ.ಎನ್. ಬೊಮ್ಮಲಿಂಗಪ್ಪ ಇದ್ದರು.

*
ಮುರುಘಾ ಮಠ ವೈಚಾರಿಕ ದೃಷ್ಟಿಕೋನಗಳನ್ನಿಟ್ಟುಕೊಂಡು ಸಾಗುತ್ತಿದೆ. ಇಲ್ಲಿನ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಅಗತ್ಯವಿದೆ.
-ಚನ್ನಮಲ್ಲಿಕಾರ್ಜುನ ಸ್ವಾಮೀಜಿ,ಬ್ಯಾಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT