ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರಿಗೆ ಬಹುರೂಪಿ ಚೌಡಯ್ಯ ಕೊಡುಗೆ ಮಾದರಿ

‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
Last Updated 19 ಆಗಸ್ಟ್ 2021, 3:23 IST
ಅಕ್ಷರ ಗಾತ್ರ

ಸಾಣೇಹಳ್ಳಿ(ಹೊಸದುರ್ಗ): ‘ಪ್ರಸ್ತುತ ಕಲಾವಿದರಲ್ಲಿ ಬದ್ಧತೆ ಉಳಿದಿದೆ ಎಂದರೆ ಅದಕ್ಕೆ ನಿಜವಾದ ಮಾದರಿ 12ನೇ ಶತಮಾನದ ಶರಣ ಬಹುರೂಪಿ ಚೌಡಯ್ಯ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮದ 18ನೇ ದಿನವಾದ ಬುಧವಾರ ಸಂಜೆ ನಡೆದ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಜನಪದ ಕಲಾವಿದ ಬಹುರೂಪಿ ಚೌಡಯ್ಯನವರು ತಮ್ಮ ಹಾಗೂ ಜನರ ಆರೋಗ್ಯದ ಬಗೆಗೂ ಆಲೋಚಿಸಿ ಕೆಲವು ಸೂಚನೆಗಳನ್ನು ವಚನಗಳ ಮೂಲಕ ನೀಡಿದರು. ಅವರು ವಿವಿಧ ವೇಷಭೂಷಣ ಮತ್ತು ಚತುರ ಮಾತುಗಳ ಮೂಲಕವೇ ಜನರನ್ನು ರಂಜಿಸುತ್ತಿದ್ದವರು. ಅದನ್ನೇ ತಮ್ಮ ಬದುಕಿನ ಆದಾಯದ ಮೂಲವಾಗಿ ಮಾಡಿಕೊಂಡರು. ಅದೇ ಆದಾಯದಿಂದ ದಾಸೋಹ ಮಾಡುತ್ತಿದ್ದರು. ಬಸವಾದಿ ಶಿವಶರಣರ ತಾತ್ವಿಕ ಬದುಕಿನಿಂದ ಪ್ರೇರಣೆ ಪಡೆದ ಚೌಡಯ್ಯನವರು ಕಲ್ಯಾಣಕ್ಕೆ ಬಂದು ಶರಣರ ತತ್ವ ಸಿದ್ಧಾಂತಗಳನ್ನು ತಮ್ಮ ಹಾಡು, ಅಭಿನಯದ ಮೂಲಕ ಸಮಾಜದ ಜನರಿಗೆ ತಿಳಿಸುವ ಕಾಯಕ ಮಾಡುತ್ತಿದ್ದರು ಎನ್ನುವುದು ಗಮನಾರ್ಹ ಸಂಗತಿ’ ಎಂದು ವಿಶ್ಲೇಷಿಸಿದರು.

‘ಚೌಡಯ್ಯನವರ 66 ವಚನಗಳು ದೊರೆತಿದ್ದು, ಅವುಗಳಲ್ಲಿ ತಮ್ಮ ವೃತ್ತಿಯ ವಿವರ, ಶರಣರ ಬದುಕಿನ ಬಗ್ಗೆ ಗೌರವ, ಲಿಂಗಾಯತ ಧರ್ಮದ ತತ್ವಾದರ್ಶಗಳನ್ನು ಸರಳವಾಗಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಶರಣರ ಬದುಕಿನ ವಿಧಾನವನ್ನು ಜನರಿಗೆ ರಂಜನೆಯ ಮೂಲಕ ಪರಿಚಯಿಸಿ ಅವರನ್ನು ಪ್ರಾಜ್ಞರನ್ನಾಗಿಸುವುದೇ ನನ್ನ ಕಾಯಕ. ಶರಣರ ಸಾಧನೆಯನ್ನು ಸಮಾಜದ ಮುಂದಿಡುವುದೇ ನನ್ನ ಆಶಯ. ಮುಖವಾಡದಯ್ಯಗಳಂತೆ ನಾನು ವಿವಿಧ ಶರಣರ ಮುಖವಾಡ ಧರಿಸಿ ಅವರ ವ್ಯಕ್ತಿತ್ವವನ್ನು ಲೋಕದ ಮುಂದಿಡುವೆ ಎನ್ನುವ ಚೌಡಯ್ಯನವರು ಎಂತಹ ಹೃದಯವಂತ ಪ್ರೌಢಕಲಾವಿದರಾಗಿದ್ದರು ಎನ್ನುವುದನ್ನು ಗಮನಿಸಬೇಕು. ಕಲೆ ಆದರ್ಶ ಬದುಕು ಕಟ್ಟಿಕೊಡಲು ಎನ್ನುವ ಉದ್ದೇಶ ಬಹುರೂಪಿ ಚೌಡಯ್ಯನವರದು. ಇಂದಿನ ಕಲಾವಿದರು ಚೌಡಯ್ಯನವರ ಆಶಯವನ್ನರಿತು ಕಲೆಯ ಮೂಲಕ ಜನರ ಪರಿವರ್ತನೆಯನ್ನು ಸಕಾರಾತ್ಮಕವಾಗಿ ಮಾಡುವ ಸಂಕಲ್ಪ ತಳೆಯಬೇಕಾಗಿದೆ’ ಎಂದು ಸಲಹೆ ನೀಡಿದರು.

ಉಪನ್ಯಾಸ ಮಾಲಿಕೆಯಲ್ಲಿ ಬಹುರೂಪಿ ಚೌಡಯ್ಯ ವಿಷಯ ಕುರಿತು ಶಿಕ್ಷಕ ಕೆ.ವೆಂಕಟೇಶ್ವರ, ‘ಕಲ್ಯಾಣ ಎನ್ನುವುದು 12ನೇ ಶತಮಾನದಲ್ಲಿ ಬಸವಾದಿ ಶರಣರ ನೇತೃತ್ವದಲ್ಲಿ ನಡೆದ ಅದ್ಭುತವಾದ ಸಾಮಾಜಿಕ ಚಳವಳಿ. ಅಂದಿನ ಸಮಾಜದಲ್ಲಿದ್ದ ಮೂಢನಂಬಿಕೆ, ಅಂಧಕಾರ, ಜಾತಿ ವ್ಯವಸ್ಥೆ ಇಂತಹ ಎಲ್ಲ ಮೌಢ್ಯಗಳ ವಿರುದ್ಧ ಬಸವಣ್ಣನವರ ನೇತೃತ್ವದಲ್ಲಿ ದೊಡ್ಡ ಕ್ರಾಂತಿ ನಡೆಯಿತು. ಅಂದು ಎದುರಿಸುತ್ತಿರುವ ಸ್ವರೂಪ ಬೇರೆ ಇತ್ತು. ಇಂದು ನಾವೆಲ್ಲಾ ಎದುರಿಸುತ್ತಿರುವ ಸ್ವರೂಪವೇ ಬೇರೆ ಇದೆ. ಆದ್ದರಿಂದ 12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಬಗ್ಗೆ ನಾವೆಲ್ಲರೂ ಆಲೋಚಿಸುವ ಸುಸಂದರ್ಭವೇ ‘ಮತ್ತೆ ಕಲ್ಯಾಣ’. ಪಂಡಿತಾರಾಧ್ಯ ಶ್ರೀಗಳು ಬಸವಣ್ಣನವರ ನಿಜವಾದ ಪರಿಕಲ್ಪನೆಯನ್ನು ಇವತ್ತಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಆಯೋಜಿಸಿರುವ ಸುಂದರ ಕಾರ್ಯಕ್ರಮ ಇದಾಗಿದೆ’ ಎಂದು ವಿವರಿಸಿದರು.

ಕಡೂರಿನ ದೀಕ್ಷಾ ಶಾಲೆಯ ಶಿಕ್ಷಕಿ ಚೈತ್ರ ಸರ್ಜಿ ಸ್ವಾಗತಿಸಿದರು. ಶಿವಸಂಚಾರದ ಕೆ.ಜ್ಯೋತಿ, ಕೆ.ದಾಕ್ಷಾಯಣಿ, ಎಚ್.ಎಸ್.ನಾಗರಾಜ್ ಮತ್ತು ತಬಲಸಾಥಿ ಶರಣ್ ತಂಡ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ
ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT