ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮುಖಿಯಾದ ಮಠಕ್ಕೆ ಉಜ್ವಲ ಭವಿಷ್ಯ- ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು

Last Updated 13 ಏಪ್ರಿಲ್ 2022, 13:17 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಠಗಳು ಜನಾಂಗದೊಂದಿಗೆ ಸಾಗಬೇಕು. ಜನಮುಖಿಯಾದ ಮಠಗಳಿಗೆ ಮಾತ್ರ ಉಜ್ವಲವಾದ ಭವಿಷ್ಯವಿದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಇಲ್ಲಿನ ಹೊರವಲಯದ ಮೇದಾರ ಗುರುಪೀಠದ ಕೇತೇಶ್ವರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಸವಪ್ರಭು ಮೇದಾರ ಕೇತೇಶ್ವರ ಸ್ವಾಮೀಜಿ ಅವರ 8ನೇ ವರ್ಷದ ಪುಣ್ಯಸ್ಮರಣೆ ಹಾಗೂ ವಧು–ವರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮಠಾಧೀಶರು ಸಮುದಾಯದ ಅಭ್ಯುದಯಕ್ಕೆ ಮೀಸಲು. ಜನಾಂಗವನ್ನು ಸಂಸ್ಕಾರದ ಕಡೆಗೆ ಕೊಂಡೊಯ್ಯುವ ಜವಾಬ್ದಾರಿ ಮಠಾಧೀಶರ ಮೇಲಿದೆ. ಮೌಢ್ಯವನ್ನು ದೂರ ಮಾಡಿ ಶೋಷಣೆಯ ಯಾತನೆಯಿಂದ ಹೊರತರಬೇಕಾದ ಹೊಣೆಗಾರಿಕೆ ನಿರ್ವಹಿಸಬೇಕಿದೆ. ಸಮಾಜಕ್ಕಾಗಿ ಸಂಪೂರ್ಣ ಸಮರ್ಪಣೆ ಮಾಡಿಕೊಂಡಾಗ ಜನಾಂಗ ಅಭಿವೃದ್ಧಿಯಾಗಲು ಸಾಧ್ಯ’ ಎಂದು ಹೇಳಿದರು.

‘ಬಸವಪ್ರಭು ಸ್ವಾಮೀಜಿ ಪೂರ್ವಾಶ್ರಮದಲ್ಲಿ ಬಟ್ಟೆ ವ್ಯಾಪಾರಿಗಳಾಗಿದ್ದರು. ಅಲಕ್ಷಿತ ಸಮುದಾಯಗಳಿಗೆ ದೀಕ್ಷೆ ನೀಡಲು ಮುರುಘಾ ಮಠ ಮುಂದಾದಾಗ ಗೋಪಾಲ (ಪೂರ್ವಾಶ್ರಮದ ಹೆಸರು) ಕಣ್ಣಿಗೆ ಬಿದ್ದರು. ಮಠಾಧೀಶರನ್ನಾಗಿ ಮಾಡಲು ಅವರ ಕುಟುಂಬ ಸಮ್ಮತಿ ನೀಡಲಿಲ್ಲ. ಬಟ್ಟೆ ಅಂಗಡಿಗೆ ಮಾಡಿದ ಸಾಲವನ್ನು ಮುರುಘಾ ಮಠವೇ ತೀರಿಸಿ ಅವರಿಗೆ ದೀಕ್ಷೆ ನೀಡಿತು. ಮಠಕ್ಕೆ ಇರುವ ಕಾಳಜಿಗೆ ಇದೊಂದು ನಿದರ್ಶನ’ ಎಂದು ನೆನಪಿಸಿಕೊಂಡರು.

‘ಸಂಸಾರದಿಂದ ಸಂತತ್ವ ಹಾಗೂ ಶರಣತ್ವದ ಕಡೆಗೆ ಬಸವಪ್ರಭು ಸ್ವಾಮೀಜಿ ಪಯಣ ಮಾಡಿದರು. ಅವರ ಅಧ್ಯಾತ್ಮಿಕ ಯಾನ ರಾಜ್ಯದ ಎಲ್ಲೆಡೆ ನಡೆಯಿತು. ಭೋಗ ಜೀವನ ತ್ಯಗಿಸಿ ಸಮಾಜಕ್ಕಾಗಿ ಸಂಪೂರ್ಣ ಅರ್ಪಿಸಿಕೊಂಡರು. ಸಮಾಜ ಸಂಘಟಿಸುವ ಶಕ್ತಿ ಅವರಲ್ಲಿತ್ತು. ಮೇದಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಸೌಲಭ್ಯ ತಂದುಕೊಟ್ಟ ಕೀರ್ತಿ ಸ್ವಾಮೀಜಿ ಅವರಿಗೆ ಸಲ್ಲಬೇಕು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ‘ಸಮಾಜದಲ್ಲಿ ಅತಿ ಸೂಕ್ಷ್ಮ, ಸಣ್ಣ ಸಮುದಾಯಗಳಿವೆ. ಮೇದಾರ ಸಮಾಜ ದೇಶದ ಎಲ್ಲ ಮೂಲೆಯಲ್ಲಿ ಇದ್ದರೂ ಪ್ರಬಲವಾಗಿಲ್ಲ. ಇಂತಹ ಸಮುದಾಯಗಳಿಗೆ ಧ್ವನಿ ನೀಡಿದ್ದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು. ಪ್ರತಿ ಸಮುದಾಯದಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸಿದರು. ಶೈಕ್ಷಣಿಕ ಪ್ರಗತಿ ಸಾಧಿಸಲು ಹಲವು ಅನುಕೂಲಗಳನ್ನು ಮಾಡಿಕೊಟ್ಟರು’ ಎಂದು ಸ್ಮರಿಸಿದರು.

ಅನುದಾನಕ್ಕೆ ಕೋರಿಕೆ

ಮೇದಾರ ಕೇತೇಶ್ವರ ಗುರುಪೀಠಕ್ಕೆ 2020–21ನೇ ಆರ್ಥಿಕ ವರ್ಷದಲ್ಲಿ ₹ 3 ಕೋಟಿ ಅನುದಾನವನ್ನು ಸರ್ಕಾರ ನೀಡಿತ್ತು. ಇದರಲ್ಲಿ ಮೊದಲ ಕಂತು ₹ 1 ಕೋಟಿ ಬಿಡುಗಡೆಯಾಗಿದೆ. ಇನ್ನುಳಿದ ಕಂತು ಬಿಡುಗಡೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಅಖಿಲ ಕರ್ನಾಟಕ ಮೇದಾರ ಕೇತೇಶ್ವರ ಟ್ರಸ್ಟ್‌ ಅಧ್ಯಕ್ಷ ಸಿ.ಪಿ.ಪಾಟೀಲ ಮನವಿ ಮಾಡಿದರು.

‘ಪ್ರಸಕ್ತ ವರ್ಷ ಸರ್ಕಾರ ಮತ್ತೆ ₹ 2 ಕೋಟಿ ಅನುದಾನ ನೀಡಿರುವುದು ಸಂತಸವುಂಟು ಮಾಡಿದೆ. ಚಿತ್ರದುರ್ಗ ನಗರದಲ್ಲಿರುವ ಮಠದ ಶಿಕ್ಷಣ ಸಂಸ್ಥೆ ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಾಗಿದೆ. ಈ ಅನುದಾನವನ್ನು ಅದಕ್ಕೆ ಮೀಸಲಿಡಲಾಗುವುದು’ ಎಂದು ಹೇಳಿದರು.

ಮೇದಾರ ಗುರುಪೀಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ, ಬಂಜಾರ ಗುರುಪೀಠದ ಸರ್ದಾರ ಸೇವಾಲಾಲ್‌ ಸ್ವಾಮೀಜಿ, ಕೇತೇಶ್ವರ ಟ್ರಸ್ಟ್‌ ಪದಾಧಿಕಾರಿಗಳಾದ ಟಿ.ಬಸವರಾಜು, ಎಂ.ಎನ್‌.ಕುಂಭಯ್ಯ, ಎಂ.ಬಿ.ತಿಮ್ಮಣ್ಣ, ಎಂ.ಕೃಷ್ಣಪ್ಪ, ರಮೇಶ್‌ ಶಂಕರ ಬುರುಡ, ಹನುಮಂತಪ್ಪ ಶ್ರೀಧರಗಡ್ಡೆ, ನಾಗರಾಜ ಬಿ.ಮೇದಾರ, ದೊರೆಯರಾಜ, ಬಿ.ಜಗದೀಶ್‌ ಇದ್ದರು.

***

ಸಂಪ್ರದಾಯಸ್ಥ ಮಠ ಪರಂಪರೆಯಲ್ಲಿ ಕ್ರಾಂತಿಕಾರಕ ನಿರ್ಧಾರ ಕೈಗೊಂಡವರು ಶಿವಮೂರ್ತಿ ಮುರುಘಾ ಶರಣರು. ಶೋಷಿತ ಸಮುದಾಯದ ಮೇಲಿರುವ ಕಾಳಜಿಯ ಫಲವಾಗಿ ಗುರುಪೀಠಗಳು ಅಸ್ತಿತ್ವಕ್ಕೆ ಬಂದಿವೆ.

- ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ,ಮಾದಾರ ಚನ್ನಯ್ಯ ಗುರುಪೀಠ

***

ಶಿವಮೂರ್ತಿ ಮುರುಘಾ ಶರಣರು ಜಾತಿಗೊಂದು ಮಠ ಕಟ್ಟುತ್ತಿದ್ದಾರೆಂದು ಅನೇಕರು ಟೀಕಿಸಿದ್ದರು. ಇಂತಹ ಮಠಗಳೇ ಸಣ್ಣ ಜಾತಿಗಳಿಗೆ ಶಕ್ತಿಯ ಕೇಂದ್ರಗಳಾಗಿವೆ. ಎಲ್ಲ ಸಮುದಾಯದ ಮಠಾಧೀಶರು ಇಲ್ಲಿ ಕಾಣಸಿಗುತ್ತಾರೆ.

-ಶಿವಲಿಂಗಾನಂದ ಸ್ವಾಮೀಜಿ,ಕಬೀರಾನಂದ ಆಶ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT