ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅಧಿಕಾರಿಗಳೊಂದಿಗೆ ಸಮಾಲೋಚನೆ

Last Updated 5 ಏಪ್ರಿಲ್ 2022, 5:37 IST
ಅಕ್ಷರ ಗಾತ್ರ

ಚಿತ್ರದುರ್ಗ: ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಗುರುತಿಸಿರುವ ಜಿಲ್ಲಾ ಆಸ್ಪತ್ರೆಯ ಆವರಣಕ್ಕೆ ಸೋಮವಾರ ಭೇಟಿ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌, ಅನಗತ್ಯ ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು.

ನಿರ್ಮಾಣಗೊಳ್ಳಲಿರುವ ಕಟ್ಟಡದ ನೀಲನಕ್ಷೆ ಹಿಡಿದು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತೆರವುಗೊಳ್ಳಲಿರುವ ಕಟ್ಟಡದಲ್ಲಿರುವ ಕಚೇರಿ, ವೈದ್ಯಕೀಯ ಸೇವೆ ಒದಗಿಸುವ ವಿಭಾಗಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರಿಗೆ ಸಲಹೆ ನೀಡಿದರು.

ಮೂರು ಹಂತಗಳಲ್ಲಿ ಕಟ್ಟಡ ತೆರವುಗೊಳಿಸಿ ನಿಗದಿತ ಭೂಮಿಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವ ಕುರಿತು ಚರ್ಚೆ ನಡೆಸಿದರು. ಮೂರು ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದ್ದು, ತ್ವರಿತವಾಗಿ ಕೆಲಸ ಮಾಡುವಂತೆ ತಾಕೀತು ಮಾಡಿದರು. ಜೋಗಿಮಟ್ಟಿ ರಸ್ತೆಯ ಕಡೆಯಿಂದ ಕಾಲೇಜಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ.

ಜಿಲ್ಲಾ ಆಸ್ಪತ್ರೆಯ ಆವರಣದ 20 ಎಕರೆ ಭೂಮಿಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಗುರುತಿಸಲಾಗಿದೆ. ಈ ಸ್ಥಳದಲ್ಲಿ ಆಸ್ಪತ್ರೆಗೆ ಹೊಂದಿಕೊಂಡಂತೆ ಹಲವು ಕಟ್ಟಡಗಳಿವೆ. ಇವುಗಳನ್ನು ತೆರವುಗೊಳಿಸಿದರಷ್ಟೇ ವೈದ್ಯಕೀಯ ಕಾಲೇಜು ನಿರ್ಮಾಣ ಸಾಧ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಅವರ ಸಲಹೆ ಮೇರೆಗೆ ಕೆಲ ಕಟ್ಟಡಗಳನ್ನು ತೆರವುಗೊಳಿಸಲು ತೀರ್ಮಾನಿಸಲಾಯಿತು.

ಆಸ್ಪತ್ರೆಯ ಆವರಣದಲ್ಲಿರುವ ರಕ್ತನಿಧಿ ಕೇಂದ್ರ, ಔಷಧ ಸಂಗ್ರಹ ಉಗ್ರಾಣ, ಎಎನ್‍ಟಿಸಿ, ಸರ್ವೇಕ್ಷಣ ಘಟಕಗಳ, ಪ್ರಯೋಗಾಲಯ, ಜಿಲ್ಲಾ ತರಬೇತಿ ಸಂಸ್ಥೆ, ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ಕಚೇರಿ, ಕಾರ್ಯಾಗಾರ, ವೈದ್ಯರು, ಶುಶ್ರೂಷಕರ ವಸತಿಗೃಹ, ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಕಟ್ಟಡ ಸೇರಿ ಇತರ ಕಟ್ಟಡಗಳನ್ನು ಮೊದಲ ಹಂತದಲ್ಲಿ ತೆರವುಗೊಳಿಸುವಂತೆ ಸೂಚಿಸಲಾಗಿದೆ.

ಎರಡು ಮತ್ತು ಮೂರನೇ ಹಂತದಲ್ಲಿ ತೆರವುಗೊಳಿಸಲು ಇತರ ಕಟ್ಟಡಗಳನ್ನು ಗುರುತಿಸಲಾಗಿದೆ. ತುರ್ತು ಚಿಕಿತ್ಸಾ ಘಟಕ, ಟ್ರಾಮಾ ಕೇಂದ್ರ ಸೇರಿ ಇತರ ಕಟ್ಟಡಗಳು ನೆಲಸಮವಾಗಲಿವೆ. ಎಂಆರ್‌ಐ ಸ್ಕ್ಯಾನ್‌ ಹಾಗೂ ಡಯಾಗ್ನಸ್ಟಿಕ್‌ ಕೇಂದ್ರ ಇರುವ ಕಟ್ಟಡದ ತೆರವಿಗೆ ಆಲೋಚನೆ ಮಾಡಲಾಗುತ್ತಿದೆ. ಇಲ್ಲಿಗೆ ನಿತ್ಯ ನೂರಾರು ರೋಗಿಗಳು ಭೇಟಿ ನೀಡುತ್ತಿದ್ದು, ಎಂಆರ್‌ಐ ಸ್ಕ್ಯಾನ್‌ ಸೇವೆ ಅಗತ್ಯವಾಗಿದೆ. ಅಲ್ಲದೇ ಇದಕ್ಕೆ ಅನೇಕ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ. ಪರ್ಯಾಯ ಕಟ್ಟಡ ಸಜ್ಜುಗೊಳಿಸಿದ ಬಳಿಕ ಈ ಕೇಂದ್ರವನ್ನು ಸ್ಥಳಾಂತರ ಮಾಡುವಂತೆ ನವೀನ್‌ರಾಜ್‌ ಸಿಂಗ್‌ ಅವರು ಸಲಹೆ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜಪ್ಪ ಇದ್ದರು.

* ಕಾಲೇಜು ನಿರ್ಮಾಣಕ್ಕೆ ಅಡ್ಡಿಯಾದ ಕಟ್ಟಡಗಳ ತೆರವಿಗೆ ತೀರ್ಮಾನ ಕೈಗೊಳ್ಳಲಾಗಿದೆ. ಇಂತಹ ಕಟ್ಟಡದಲ್ಲಿದ್ದ ಕಚೇರಿ, ಪ್ರಯೋಗಾಲಯಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.

- ಕವಿತಾ ಎಸ್‌. ಮನ್ನಿಕೇರಿ, ಜಿಲ್ಲಾಧಿಕಾರಿ

ವಿಶೇಷಾಧಿಕಾರಿ ನೇಮಕ

ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷಾಧಿಕಾರಿಯನ್ನು ನೇಮಕ ಮಾಡಿದೆ. ಕೊಪ್ಪಳ ವೈದ್ಯಕೀಯ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಯುವರಾಜ್ ಅವರು ವಿಶೇಷ ಅಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕಟ್ಟಡ ನಿರ್ಮಾಣದ ಸಂಪೂರ್ಣ ಹೊಣೆಯನ್ನು ವಿಶೇಷಾಧಿಕಾರಿ ನೋಡಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT