ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮೆಡಿಕಲ್‌ ಪ್ರಶ್ನೆಪತ್ರಿಕೆ

7

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮೆಡಿಕಲ್‌ ಪ್ರಶ್ನೆಪತ್ರಿಕೆ

Published:
Updated:
ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಪ್ರಶ್ನೆ ಪತ್ರಿಕೆ

ಚಿತ್ರದುರ್ಗ: ಮೆಡಿಕಲ್‌ ಕೋರ್ಸ್‌ನ ದ್ವಿತೀಯ ವರ್ಷದ ‘ಸೂಕ್ಷ್ಮ ಜೀವವಿಜ್ಞಾನ–1’ ಪರೀಕ್ಷೆ ಆರಂಭವಾದ ಹತ್ತು ನಿಮಿಷದ ಬಳಿಕ ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸೋರಿಯಾಗಿರುವ ಕುರಿತು ಅನುಮಾನ ಹುಟ್ಟುಹಾಕಿದೆ.

ಮೆಡಿಕಲ್‌ ವಿದ್ಯಾರ್ಥಿಗಳಿಗೆ ಜುಲೈ 3ರಿಂದ ವಾರ್ಷಿಕ ಪರೀಕ್ಷೆಗಳು ಆರಂಭವಾಗಿವೆ. ದ್ವಿತೀಯ ವರ್ಷದ ಮೆಡಿಕಲ್‌ ವಿದ್ಯಾರ್ಥಿಗಳ ‘ಸೂಕ್ಷ್ಮ ಜೀವವಿಜ್ಞಾನ–1’ ಪರೀಕ್ಷೆ ಶನಿವಾರ ನಡೆಯಿತು. ಇಲ್ಲಿನ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ನಿಗದಿಯಂತೆ ಬೆಳಿಗ್ಗೆ 9ಕ್ಕೆ ಪರೀಕ್ಷೆ ಶುರುವಾಯಿತು. ಆದರೆ, 9.10ಕ್ಕೆ ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತು.

‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪ್ರಶ್ನೆಪತ್ರಿಕೆಗೂ, ಪರೀಕ್ಷಾ ಕೇಂದ್ರದಲ್ಲಿ ವಿತರಿಸಿದ ಪತ್ರಿಕೆಗೂ ಸಾಮ್ಯತೆ ಇದೆ. ಪರೀಕ್ಷೆ ಶುರುವಾಗುವುದಕ್ಕೂ ಮುನ್ನ ಪ್ರಶ್ನೆಪತ್ರಿಕೆ ಬಹಿರಂಗವಾಗಿ ಸಿಕ್ಕಿಲ್ಲ. ಹೀಗಾಗಿ, ಇದನ್ನು ಸೋರಿಕೆ ಎನ್ನಲು ಸಾಧ್ಯವಿಲ್ಲ’ ಎಂದು ಬಸವೇಶ್ವರ ವೈದ್ಯಕೀಯ ಕಾಲೇಜಿನ ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಡಾ.ಪ್ರಶಾಂತ್‌ ಸ್ಪಷ್ಟನೆ ನೀಡಿದ್ದಾರೆ.

ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ನಡೆದ ಪರೀಕ್ಷೆಗೆ ಈ ಕಾಲೇಜಿನ 36 ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಶುರುವಾಗುವುದಕ್ಕೂ 20 ನಿಮಿಷ ಮುಂಚೆ ಕೊಠಡಿ ಪ್ರವೇಶಿಸಿದ್ದರು. ಆನ್‌ಲೈನ್‌ ಮೂಲಕ ಬರುವ ಪ್ರಶ್ನೆಪತ್ರಿಕೆಯನ್ನು ಕಾಲೇಜು ಸಿಬ್ಬಂದಿ ಬೆಳಿಗ್ಗೆ 8.45ಕ್ಕೆ ಡೌನ್‌ಲೋಡ್‌ ಮಾಡಿದ್ದರು. ಬಳಿಕ ಇದನ್ನು ಮುದ್ರಿಸಿ ಪರೀಕ್ಷಾರ್ಥಿಗಳಿಗೆ ವಿತರಿಸಿದ್ದರು.

‘ಪ್ರಶ್ನೆಪತ್ರಿಕೆ ನಮ್ಮ ಕಾಲೇಜಿನಿಂದ ಸಾಮಾಜಿಕ ಜಾಲತಾಣಕ್ಕೆ ಹೋಗಿಲ್ಲ. ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ಯಾವುದೇ ಲೋಪ ಉಂಟಾಗಿಲ್ಲ. ಇದಕ್ಕೆ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸಾಕ್ಷ್ಯವಾಗಿ ಇಟ್ಟುಕೊಂಡಿದ್ದೇವೆ. ಯಾವ ಕೇಂದ್ರದಿಂದ ಇದು ಹೊರಹೋಗಿದೆ ಎಂಬುದು ಗೊತ್ತಿಲ್ಲ. ಈ ಸಂಬಂಧ ಯಾವುದೇ ತನಿಖೆ ಎದುರಿಸಲು ಸಿದ್ಧರಿದ್ದೇವೆ’ ಎಂದು ಪ್ರಶಾಂತ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !