ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌, ‘ಸಾರಿ’ಗೆ 296 ಸಾವು!

ಮಾಹಿತಿ ಬಹಿರಂಗಪಡಿಸಿದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ
Last Updated 18 ಮೇ 2021, 15:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್‌ನಿಂದ ಜಿಲ್ಲೆಯಲ್ಲಿ ಈವರೆಗೂ 113 ಜನ ಮೃತಪಟ್ಟಿದ್ದಾರೆ. ಆದರೆ, ಕೋವಿಡ್ ಪರೀಕ್ಷೆಗಾಗಿ ಆರಂಭಿಸಿದ ಸಿಟಿ ಸ್ಕ್ಯಾನ್, ಎಕ್ಸರೇಯಲ್ಲಿ ಪತ್ತೆಯಾದ ಲಕ್ಷಣಗಳ ಪೈಕಿ ತೀವ್ರ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ 183 ಜನರು ಸಾವ್ನಪ್ಪಿದ್ದಾರೆ. ಹೀಗಾಗಿ ಒಟ್ಟು 296 ಜನರು ಪ್ರಾಣತೆತ್ತಿದ್ದಾರೆ ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಪ್ಪು ಶಿಲೀಂಧ್ರ ರೋಗ ನಿಯಂತ್ರಣ ಹಾಗೂ ಚಿಕಿತ್ಸೆ ಸಂಬಂಧ ನಡೆದ ಸಭೆಯಲ್ಲಿ ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಬಹಿರಂಗಪಡಿಸಿದರು.

‘ಸಾರ್ವಜನಿಕರು ರೋಗಲಕ್ಷಣ ಕಂಡು ಬಂದ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಚಿಕಿತ್ಸೆ ಪಡೆಯದೆ ಅನೇಕರು ವಿಳಂಬ ಮಾಡುತ್ತಿದ್ದಾರೆ. ಇದರಿಂದಾಗಿ ಸೋಂಕು ದೇಹದ ಅಂಗಾಂಗಳಿಗೆ ಹಾನಿ ಉಂಟು ಮಾಡುತ್ತದೆ. ಆದ್ದರಿಂದ ಮುಂಜಾಗ್ರತೆ ವಹಿಸಿ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

‘ಪ್ರತಿ ಗ್ರಾಮ ಪಂಚಾಯಿತಿವಾರು ತಂಡ ರಚಿಸಲಾಗಿದೆ. ಇದರ ಜೊತೆಗೆ ಗ್ರಾಮವಾರು ಸಾಮಾನ್ಯ ಲಕ್ಷಣ ಹೊಂದಿದವರನ್ನು ಸಹ ಪರೀಕ್ಷೆಗೆ ಒಳಪಡಿಸಿ, ಪ್ರತ್ಯೇಕಿಸಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯಾಧಿಕಾರಿಗಳು ಸಮೀಕ್ಷೆ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ಸಮರ್ಪಕ ಆಮ್ಲಜನಕ ಪೂರೈಕೆ: ಜಿಲ್ಲೆಗೆ 8.5 ಸಾವಿರ ಲೀಟರ್‌ ವೈದ್ಯಕೀಯ ಆಮ್ಲಜನಕದ ಅಗತ್ಯವಿದ್ದು, ಪೂರೈಕೆ ಮಾಡಲಾಗುತ್ತಿದೆ. ಪ್ರತಿ ನಿತ್ಯ ಜಿಲ್ಲಾ ಆಸ್ಪತ್ರೆಗೆ 3 ಸಾವಿರ ಲೀಟರ್‌, ಬಸವೇಶ್ವರ ಆಸ್ಪತ್ರೆಗೆ 2.5, ರೇಣುಕಾ ಗ್ಯಾಸ್‍ಗೆ 1, ಸದರನ್ ಪೂರೈಕೆದಾರರಿಗೆ 2 ಸಾವಿರ ಲೀಟರ್‌ ಹಂಚಿಕೆ ಮಾಡಲಾಗುತ್ತಿದೆ. ಇದರೊಂದಿಗೆ 379 ಜಂಬೂ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಕಪ್ಪು ಶಿಲೀಂಧ್ರ:‘ಕಪ್ಪು ಶಿಲೀಂಧ್ರ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗವಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಮೂಗಿನಲ್ಲಿ ಕಫದ ಮಾದರಿಯ ರಕ್ತ, ಮೂಗಿನ ನಾಳಗಳು ಕಪ್ಪು ಬಣ್ಣಕ್ಕೆ ತಿರುಗುವುದು, ಕಣ್ಣು ಕೆಂಪಾಗುವುದು ಇದರ ಲಕ್ಷಣವಾಗಿದೆ. ಮಿದುಳಿಗೆ ಅಪಾಯ ತರುವ ಸಾಧ್ಯತೆ ಇದೆ. ಆದ್ದರಿಂದ ಆರಂಭದಲ್ಲೇ ಚಿಕಿತ್ಸೆ ನೀಡಿ ಇದನ್ನು ತಡೆಗಟ್ಟಲು ಮುಂದಾಗಿ’ ಎಂದು ಕವಿತಾ ಎಸ್. ಮನ್ನಿಕೇರಿ ಸೂಚನೆ ನೀಡಿದರು.

‘ರೋಗಲಕ್ಷಣ ಕಂಡು ಬಂದವರನ್ನು ತ್ವರಿತವಾಗಿ ಗುರುತಿಸುವ ಕೆಲಸವಾಗಬೇಕು. ವೈದ್ಯಾಧಿಕಾರಿಗಳ ತಂಡ ಸೂಕ್ತ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳುವುದರ ಜತೆಗೆ ವೈದ್ಯರಿಗೆ ಅಗತ್ಯ ಸಲಹೆ ನೀಡಬೇಕು. ನಿತ್ಯ ವರದಿಯಾಗುವ ಪ್ರಕರಣಗಳ ಕುರಿತು ಜಿಲ್ಲಾಡಳಿತಕ್ಕೆ ಕೂಡಲೇ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

ಇಎನ್‍ಟಿ ತಜ್ಞ ಡಾ.ಪ್ರಹ್ಲಾದ್, ‘ಕಪ್ಪು ಶಿಲೀಂಧ್ರ ಬಹಳ ಅಪಾಯಕಾರಿ. ಕಣ್ಣು ಮತ್ತು ತಲೆನೋವು ರೋಗ ಲಕ್ಷಣವಾಗಿದೆ. ಆರಂಭದಲ್ಲೇ ಪತ್ತೆ ಹಚ್ಚಿ ಶಸ್ತ್ರಚಿಕಿತ್ಸೆಯ ಮೂಲಕ ಇದನ್ನು ಗುಣಪಡಿಸಬಹುದಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್. ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಂಗನಾಥ್, ಡಾ.ತುಳಸಿರಂಗನಾಥ್, ಆರ್‌ಸಿಎಚ್‌ ಅಧಿಕಾರಿ ಡಾ.ಕುಮಾರಸ್ವಾಮಿ, ಹೊಸದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ, ಬಿಸಿಎಂ ಅಧಿಕಾರಿ ಅವೀನ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಾಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT