ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರಲ್ಲಿ ಭರವಸೆ ಮೂಡಿಸಿರುವ ‘ಮೈಕ್ರೊ ಕ್ಲಸ್ಟರ್’

ರಾಜ್ಯದಲ್ಲಿಯೇ ಪ್ರಥಮ: ಅತಿಸಣ್ಣ ನೇಕಾರರಿಗೆ ಅನುಕೂಲ ನಿರೀಕ್ಷೆ
Last Updated 5 ಮಾರ್ಚ್ 2022, 4:11 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ತಾಲ್ಲೂಕಿಗೆ ‘ರೇಷ್ಮೆಸೀರೆ ಮೈಕ್ರೊಕ್ಲಸ್ಟರ್’ ಯೋಜನೆ ಮಂಜೂರಾಗಿದ್ದು, ಸಂಕಷ್ಟದಲ್ಲಿರುವ ನೇಕಾರರಲ್ಲಿ ಭರವಸೆ ಮೂಡಿದೆ.

ಒಂದು ಕಾಲದಲ್ಲಿ ಸಾವಿರ ಗಟ್ಟಲೆ ರೇಷ್ಮೆ ಕೈಮಗ್ಗಗಳನ್ನು ಹೊಂದಿದ್ದ ತಾಲ್ಲೂಕಿನಲ್ಲಿ ಈಗ ಶೇ 10ರಷ್ಟು ಮಗ್ಗಗಳು ಉಳಿದಿಲ್ಲ. ಇದಕ್ಕೆ ಕಚ್ಚಾಸಾಮಗ್ರಿ ಕೊರತೆ, ಸ್ವಂತ ಮಗ್ಗ ಮರೀಚಿಕೆ, ಸಕಾಲಕ್ಕೆ ನೂಲು ಬಾರದಿರುವುದು, ಕಳಪೆ ಜರಿ, ಬೆಲೆ ಕುಸಿತ, ಸಕಾಲಕ್ಕೆ ಮಾರಾಟ ಆಗದಿರುವ ಕಾರಣಗಳಿವೆ.

ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಕೈಮಗ್ಗ ಅಭಿವೃದ್ಧಿ ನಿಗಮದ ಅಡಿಯಲ್ಲಿ ಪ್ರತ್ಯೇಕವಾಗಿ ಇಲ್ಲಿ ರೇಷ್ಮೆಸೀರೆ ನೇಯ್ಗೆ ಮಾಡಿಸಲಾಗುತ್ತಿತ್ತು. ಜತೆಗೆ ಖಾಸಗಿ ಮಾಸ್ಟರ್ ವೀವರ್‌ಗಳು ಮಗ್ಗಗಳನ್ನು ಹಾಕಿ ನೇಯ್ಗೆ ಮಾಡಿಸುತ್ತಿದ್ದರು. ಜಾಗತೀಕರಣದ ಪರಿಣಾಮ ಕೈಮಗ್ಗದ ಸೀರೆಗಳು ದರ ಪೈಪೋಟಿ
ನಡೆಸಲು ಸಾಧ್ಯವಾಗದೆ ಸ್ಥಗಿತವಾಗುತ್ತಿವೆ. ಪುನಶ್ಚೇತನ ಕಾರ್ಯಕ್ರಮಗಳು ಜಾರಿಯಾಗದ ಕಾರಣ ಅನ್ಯ ಕೂಲಿ ಕೆಲಸಗಳತ್ತ ನೇಕಾರ ಮುಖ ಮಾಡಿದ್ದಾನೆ.

ಈಗ ಮಂಜೂರಾಗಿರುವ ಸೀರೆ ಕ್ಲಸ್ಟರ್ ಯೋಜನೆ ರಾಜ್ಯದಲ್ಲಿ ಪ್ರಥಮ ಪ್ರಯತ್ನ ಎನ್ನಲಾಗಿದೆ. ಈ ಮೂಲಕ ಸಣ್ಣ, ಅತಿಸಣ್ಣ ನೇಕಾರರಿಗೆ ಒಂದೇ ಸೂರಿನಡಿ ಕಚ್ಚಾರೇಷ್ಮೆ, ಜರಿ, ಮಗ್ಗ, ಜಾಗ, ವಸತಿ, ಮಾರಾಟ ಸೌಲಭ್ಯ ಕಲ್ಪಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ಪೂರ್ಣ ವಿವರ ಇನ್ನೂ ಗೊತ್ತಾಗಬೇಕಿದೆ. ಹಿಂದೆ ನೇಕಾರ ಕಾಲೊನಿಗಳ ಮಾದರಿಯಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಒಂದೇ ವೇದಿಕೆಯಲ್ಲಿ ಸೌಲಭ್ಯ ಕೊಡುವ ಯೋಜನೆ ಇದಾಗಿರಬಹುದು ಎಂದು ಜವಳಿ ಮತ್ತು ಕೈಮಗ್ಗ ಇಲಾಖೆ
ನಿವೃತ್ತ ಉಪ ನಿರ್ದೇಶಕ ಜಿ.ಟಿ. ಕುಮಾರ್ ಹೇಳಿದರು.

‘ಸೌಲಭ್ಯದ ಕೊರತೆಯಿಂದಾಗಿ ಸಾಕಷ್ಟು ಜನ ನೇಕಾರಿಕೆ ಬಿಟ್ಟಿದ್ದಾರೆ. ಒಂದೇ ಸೂರಿನಲ್ಲಿ ನೇಕಾರಿಕೆಗೆ ಅನುಕೂಲ ಮಾಡಿಕೊಟ್ಟಲ್ಲಿ ಮತ್ತೆ ನೇಕಾರಿಕೆ ಮುಂದುವರಿಸುತ್ತೇವೆ. ಕೋವಿಡ್ ನಂತರ ಬದುಕಿನ ಚಿತ್ರಣ ಬದಲಾಗಿದೆ. ಮಹಿಳೆಯರಿಗೆ ತುಂಬಾ ಅನುಕೂಲವಾಗಲಿದೆ. ಅರ್ಹ ನೇಕಾರರಿಗೆ ಇದರ ಲಾಭ ಸಿಗುವಂತೆ ಸರ್ಕಾರ ಮಾಡಬೇಕು’ ಎಂದು ನೇಕಾರರಾದ ರಾಮಪ್ಪ, ತಿಪ್ಪಯ್ಯ ಮನವಿ ಮಾಡಿದರು.

ಯೋಜನೆ ಮಂಜೂರು ಮಾಹಿತಿ ಸಿಕ್ಕಿದೆ. ಹೇಗೆ ಅನುಷ್ಠಾನವಾಗುತ್ತದೆ ಎಂದು ಗೊತ್ತಿಲ್ಲ. ಯಾವ ಇಲಾಖೆ ಮೂಲಕ ಅನುಷ್ಠಾನ ಮಾಡುತ್ತಾರೆ ಎಂಬ ಬಗ್ಗೆಯೂ ತಿಳಿದಿಲ್ಲ ಎಂದು ಕೈಮಗ್ಗ ಜವಳಿ ಇಲಾಖೆ ಜಿಲ್ಲಾ ನಿರ್ದೇಶಕ ಶಿವರಾಜ ಕುಲಕರ್ಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT