ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಖಾರವಾದೀತು ಕೇಕು

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮನೆಗೆ ನೆಂಟರು ಬಂದರೆ ಅಥವಾ ಮಕ್ಕಳಿಗೆ ಬಾಯಿಚಪಲಕ್ಕೆ ಏನಾದರೂ ಕೊಡಿಸಬೇಕೆಂದರೆ ತಕ್ಷಣ ಬೇಕರಿ ಕಡೆ ಮುಖ ಮಾಡುತ್ತೇವೆ. ಕೇಕ್‌ ಇಲ್ಲದ ಹುಟ್ಟುಹಬ್ಬಗಳನ್ನು ಊಹಿಸುವುದೂ ಕಷ್ಟ. ಬ್ರೆಡ್ಡು, ಬನ್ನು, ಕುಕೀಸ್‌, ಸಿಹಿತಿನಿಸು... ಹೀಗೆ ಬೇಕರಿಗಳು ಎಲ್ಲಾ ವರ್ಗದ ಜನರ ಬಹುಬೇಡಿಕೆಯ ಖಾದ್ಯಕೇಂದ್ರಗಳು.

ಆದರೆ ಬೇಕರಿ ಉತ್ಪನ್ನಗಳು ಇನ್ನು ದುಬಾರಿಯಾಗಲಿವೆಯೇ?

‘ಹೌದು’ ಎನ್ನುತ್ತಿದೆ ಬೇಕರಿ ಉದ್ಯಮ. ಬೇಕರಿ ಉತ್ಪನ್ನಗಳ ತಯಾರಿಕೆಗೆ ಅನಿವಾರ್ಯವಾದ ತಾಳೆ ಎಣ್ಣೆ (ಪಾಮ್‌ ಆಯಿಲ್‌) ಮತ್ತು ರಿಫೈನ್ಡ್‌ ಎಣ್ಣೆಗಳ ಮೇಲೆ ಕೇಂದ್ರ ಸರ್ಕಾರ ಶೇ 40ರಷ್ಟು ಆಮದು ಕರ ವಿಧಿಸಿರುವ ಪರಿಣಾಮ ಬೇಕರಿ ಉದ್ಯಮದಲ್ಲಿ ಸಂಚಲನ ಉಂಟಾಗಿದೆ. ರಾಜ್ಯ ಸರ್ಕಾರ ಕಾರ್ಮಿಕರ ವೇತನ ಪರಿಷ್ಕರಿಸಲು ಆದೇಶಿಸಿದೆ. ಇದರಿಂದ ಕಾರ್ಮಿಕರ ಮುಖದಲ್ಲಿ ನಗು ಮೂಡಿಸುವ ಸಾಧ್ಯತೆ ಇದೆ. ಆದರೆ, ಮೊದಲೇ ದುಬಾರಿಯಾಗಿರುವ ಬೇಕರಿ ಉತ್ಪನ್ನಗಳು ಗ್ರಾಹಕರ ಜೇಬಿಗೆ ಇನ್ನೂ ಭಾರವಾಗುವುದಂತೂ ಖಚಿತ.

‘ಪೆಟ್ರೋಲ್‌ ಮತ್ತು ಡೀಸೆಲ್‌ನ ಬೆಲೆ ಆರು ತಿಂಗಳಿಂದೀಚೆ ಶೇ9ರಷ್ಟು ಏರಿಕೆಯಾಗಿದೆ. ಡೆಲಿವರಿ ವಾಹನಗಳಿಗೆ ಪ್ರತಿನಿತ್ಯ ಡೀಸೆಲ್‌ ಬೇಕು. ಈ ಹಿಂದೆ ದಿನವೊಂದಕ್ಕೆ 70 ಅಂಗಡಿಗಳಿಗೆ ಉತ್ಪನ್ನಗಳನ್ನು ಪೂರೈಸುತ್ತಿದ್ದ ಡೆಲಿವರಿ ವಾಹನಗಳು ನಗರದ ಈಗಿನ ಸಂಚಾರ ದಟ್ಟಣೆಯಿಂದಾಗಿ ಕೇವಲ 30ರಿಂದ 35 ಅಂಗಡಿಗಳನ್ನು ತಲುಪಲು ಸಾಧ್ಯವಾಗುತ್ತಿದೆ. ಈ ಹೊರೆಯನ್ನು ಈಗಾಗಲೇ ನಾವು ಸಹಿಸಿಕೊಂಡಿದ್ದೇವೆ’ ಎನ್ನುತ್ತಾರೆ ಬಿ.ಎಸ್. ಭಟ್.

‘ಆದರೆ ಇದೀಗ ಕೇಂದ್ರ ಸರ್ಕಾರ ಕಚ್ಚಾ ಉತ್ಪನ್ನಗಳ ಆಮದು ಕರವನ್ನು ಶೇ 40ರಷ್ಟು ವಿಧಿಸಿರುವುದು ಮಾತ್ರ ದುರದೃಷ್ಟಕರ’ ಎನ್ನುವುದು ಅವರ ವಿಷಾದದ ಮಾತು.

‘ಸರ್ಕಾರದ ಕ್ರಮದಿಂದ ಬೇಕರಿ ಉತ್ಪನ್ನಗಳ ಮೂಲ ಕಚ್ಚಾವಸ್ತುಗಳಾದ ಕೊಬ್ಬು ಮತ್ತು ಎಣ್ಣೆ (ಎಡಿಬಲ್‌ ಫ್ಯಾಟ್‌ ಮತ್ತು ಎಡಿಬಲ್‌ ಆಯಿಲ್), ವನಸ್ಪತಿಯ ಬೆಲೆ ಹೆಚ್ಚಾಗುತ್ತದೆ. ಇದುವರೆಗೂ ಬ್ರ್ಯಾಂಡೆಡ್‌ ಮೈದಾ ಮತ್ತು ಸಕ್ಕರೆ ಮೇಲೆ ಜೀರೊ ಜಿ.ಎಸ್.ಟಿ. ಇತ್ತು. ಬೇಕರಿ ಉತ್ಪನ್ನಗಳ ಮೂಲ ಕಚ್ಚಾವಸ್ತುಗಳಾದ ಈ ಎರಡು ಸಾಮಗ್ರಿಗಳ ಮೇಲೆ ಈಗ ಶೇ 5 ಜಿ.ಎಸ್.ಟಿ ಇದೆ. ಇದೆಲ್ಲದರ ಪರಿಣಾಮವಾಗಿ, ಒಂದು ಪೌಂಡ್‌ (400 ಗ್ರಾಂ) ಬ್ರೆಡ್‌ನ ಬೆಲೆಯನ್ನು ₹30ರಿಂದ ₹35ರಿಂದ 40ಕ್ಕೆ ಏರಿಸಬೇಕಾಗಬಹುದು’ ಎಂದು ಅವರು ಬೆಲೆ ಏರಿಕೆಯ ಅನಿವಾರ್ಯತೆಯ ಬಗ್ಗೆ ಮಾತನಾಡುತ್ತಾರೆ.

ಜಿ.ಎಸ್‌.ಟಿ. ಜೊತೆಗೆ ಬೇಕರಿ ಉದ್ಯಮಿಗಳನ್ನು ಕಾಡುತ್ತಿರುವುದು ಮತ್ತು ಕಾರ್ಮಿಕರ ಮೊಗದಲ್ಲಿ ನಗು ಮೂಡಿಸಿರುವುದು ಜನವರಿಯಿಂದ ಜಾರಿಯಾಗಿರುವ ರಾಜ್ಯ ಸರ್ಕಾರದ ಬೇಕರಿ ಕಾರ್ಮಿಕರ ವೇತನ ನಿಗದಿ ಆದೇಶ.

ಈ ಆದೇಶದಂತೆ ಬೇಕರಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮೂಲವೇತನ ₹7,900ರಿಂದ ₹11,581ಕ್ಕೆ ಏರಿಕೆಯಾಗುತ್ತದೆ. ಭವಿಷ್ಯನಿಧಿ ಮತ್ತು ಇ.ಎಸ್.ಐ ಸೇರಿ ಕಾರ್ಮಿಕರು ತಿಂಗಳಿಗೆ ₹16,600 ವೇತನ ಪಡೆಯುತ್ತಾರೆ. ‘ಗ್ರ್ಯಾಚ್ಯುಟಿ ಹೊರತುಪಡಿಸಿದರೂ ಈ ಆದೇಶದಿಂದ ಉತ್ಪಾದನೆಯ ಮೇಲೆ ಶೇ 48ರಷ್ಟು ಹೆಚ್ಚುವರಿ ವೆಚ್ಚ ಬೀಳುತ್ತದೆ’ ಎನ್ನುವುದು ಮಾಲೀಕರ ಆತಂಕ.

ಬೇಕರಿ ಕಂಪನಿಯೊಂದರ ವ್ಯವಸ್ಥಾಪಕ (ಪ್ರೊಡಕ್ಷನ್‌) ಜಗದೀಶ್‌ ಅವರ ಪ್ರಕಾರ, ‘ನಿಗದಿಯಾಗಿರುವ ಕನಿಷ್ಠ ವೇತನವು ಗುತ್ತಿಗೆ ಆಧಾರದಲ್ಲಿ ನೇಮಕವಾಗುವ ದಿನಗೂಲಿ ಕಾರ್ಮಿಕರಿಗೂ ಅನ್ವಯವಾಗುತ್ತದೆ. ಆಮದು ಕರ ನಿಗದಿಯಿಂದಾಗಿ ದರ ಹೆಚ್ಚಳ ಅನಿವಾರ್ಯ’.

‘ಆಮದು ಕರ ನಿಗದಿಯಾಗಿರುವ ಕಾರಣ ಉತ್ಪನ್ನಗಳ ಮೇಲಿನ ದರ ಹೆಚ್ಚಾಗಿ ಗ್ರಾಹಕರ ಮೇಲೆ ಹೊರೆ ಬೀಳುತ್ತದೆಯೇ ವಿನಾ ಉದ್ಯಮಿಗಳಿಗೆ ಸಮಸ್ಯೆಯಾಗುವುದಿಲ್ಲ’ ಎನ್ನುವುದು ಅಯ್ಯಂಗಾರ್‌ ಬೇಕರಿ ಸರಣಿಯ ಮಾಲೀಕ ಜಗನ್ನಾಥ್‌ ಅವರ ಅಭಿಪ್ರಾಯ.
***
ನಾವೂ ಬದುಕಬೇಕಲ್ಲ?
ಬೆಳಗ್ಗಿನಿಂದ ರಾತ್ರಿವರೆಗೂ ದುಡಿದರೂ ತಿಂಗಳಿಗೆ ₹8,000 ರೂಪಾಯಿ ಸಿಗೋದು. ಉಳಿತಾಯದ ಮಾತು ಬಿಡಿ, ಸಂಬಳ ಕೈಗೆ ಬಂದ ಮಾರನೇ ದಿನಕ್ಕೆ ಸಾಲ ಮಾಡಬೇಕಾದ ಪರಿಸ್ಥಿತಿ ನಮ್ಮದು. ಅನುಭವಸ್ಥರಿಗೆ ₹15ರಿಂದ 20 ಸಾವಿರ ಕೊಡ್ತಾರೆ. ಕಾರ್ಮಿಕರಿಗೆ ಕಡ್ಡಾಯವಾಗಿ ಸಂಬಳ ಜಾಸ್ತಿ ಮಾಡಬೇಕು ಎಂಬ ಕಾನೂನು ಒಳ್ಳೆಯದು.
  – ಮೋಹಿತ್, ಜಯನಗರದ ಹೆಸರಾಂತ ಬೇಕರಿಯೊಂದರಲ್ಲಿ ಬ್ರೆಡ್‌ ತಯಾರಿಕೆ ವಿಭಾಗದಲ್ಲಿ ಸಹಾಯಕರು
**

ಬೇಕರಿ ಉದ್ಯಮ ಬಳಸುವ ಕಚ್ಚಾವಸ್ತುಗಳಿಗೆ ಆಮದು ಕರ ವಿಧಿಸಿರುವುದು ಉದ್ಯಮಕ್ಕೆ ದೊಡ್ಡ ಹೊಡೆತ ನೀಡಲಿದೆ. ಜೊತೆಗೆ, ಕಾರ್ಮಿಕರಿಗೆ ಕನಿಷ್ಠ ವೇತನವನ್ನೂ ಸರ್ಕಾರ ನಿಗದಿ ಮಾಡಿದೆ. ಇದರಿಂದ ಉದ್ಯಮಕ್ಕೆ ಒಂದೇ ಬಾರಿಗೆ ಎರಡು ಶಾಕ್‌ ಕೊಟ್ಟಂತಾಗಿದೆ.
– ಬಿ.ಎಸ್.ಭಟ್‌, ‘ಬೀಕೇಸ್‌ ಫುಡ್‌ ಪ್ರಾಡಕ್ಟ್ಸ್’ನ ಮಾಲೀಕರು, ಕಾಮಾಕ್ಷಿಪಾಳ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT