ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಸಾಲಕ್ಕೆ ರಾಗಿ, ಜೋಳ ಜಮಾ

ಹೊಳಲ್ಕೆರೆ: ರೈತ ಸಂಘದಿಂದ ವಸ್ತು ವಿನಿಮಯದ ವಿಶಿಷ್ಟ ಪ್ರತಿಭಟನೆ
Last Updated 28 ಮಾರ್ಚ್ 2023, 5:41 IST
ಅಕ್ಷರ ಗಾತ್ರ

ಹೊಳಲ್ಕೆರೆ: ರೈತ ಸಂಘದ ಸದಸ್ಯರು ಬ್ಯಾಂಕ್ ಸಾಲದ ಕಂತಿಗೆ ಹಣದ ಬದಲು ರಾಗಿ, ಮೆಕ್ಕೆಜೋಳ, ಕೊಬ್ಬರಿ ಮೂಟೆಗಳನ್ನು ಜಮಾ ಮಾಡುವ ಮೂಲಕ ಸೋಮವಾರ ವಿನೂತನ ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ‘ಸರ್ಕಾರ ರೈತರಿಗೆ ಯಾವುದೇ ಸಬ್ಸಿಡಿ ನೀಡುವುದು ಬೇಡ. ನಮ್ಮ ಬೆಳೆಗೆ ವೈಜ್ಞಾನಿಕ ಬೆಲೆ ನೀಡಿದರೆ ನಾವೇ ಸರ್ಕಾರಕ್ಕೆ ಸಾಲ ಕೊಡುತ್ತೇವೆ. ಅಲ್ಲಿಯವರೆಗೆ ಬ್ಯಾಂಕ್ ಸಾಲಕ್ಕೆ ನಾವು ಬೆಳೆದ ಧಾನ್ಯಗಳು, ತೆಂಗು, ಕೊಬ್ಬರಿ, ತರಕಾರಿ ಜಮಾ ಮಾಡುತ್ತೇವೆ. ಕೃಷಿ ಬೆಲೆ ಆಯೋಗವು ನಿಗದಿ ಮಾಡಿರುವ ಬೆಲೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ 6 ವರ್ಷಗಳಾದರೂ ಜಾರಿಯಾಗಿಲ್ಲ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿ ಮಾಡುವಲ್ಲಿ ಸರ್ಕಾರಗಳು ಸೋತಿವೆ. ಬದಲಾಗಿ ಔಷಧ, ಗೊಬ್ಬರ ಮತ್ತಿತರ ಕೃಷಿ ಉತ್ಪಾದನಾ ವೆಚ್ಚಗಳನ್ನು ಹೆಚ್ಚು ಮಾಡಿವೆ. ರೈತ ಬ್ಯಾಂಕ್ ಸಾಲಕ್ಕೆ ಬಡ್ಡಿ ಕಟ್ಟಲಾರದೆ ಮತ್ತೂ ಸಾಲಗಾರನಾಗುತ್ತಿದ್ದಾನೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೃಷಿ ಬೆಲೆ ಆಯೋಗದ ವರದಿಯನ್ನು ಮೂರು ತಿಂಗಳ ಒಳಗೆ ಜಾರಿಮಾಡಬೇಕು. ಎಲ್ಲಾ ನೌಕರರಿಗೆ ಇರುವಂತೆ ರೈತರಿಗೂ ಆರ್ಥಿಕ ಸಮಾನತೆ ನೀಡಬೇಕು. ಸಾಲದ ಕಂತಿಗೆ ಹಣಕ್ಕೆ ಬದಲಾಗಿ ಕೃಷಿ ಉತ್ಪನ್ನಗಳನ್ನು ಜಮಾ ಮಾಡುವ ವಸ್ತು ವಿನಿಮಯ ಚಳವಳಿಗೆ ಇಲ್ಲಿ ಚಾಲನೆ ಕೊಟ್ಟಿದ್ದು, ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಬ್ಯಾಂಕ್, ಬೆಸ್ಕಾಂ ಕಚೇರಿಗೆ ರೈತ ಬೆಳೆದ ಉತ್ಪನ್ನಗಳನ್ನು ನೀಡಿದ್ದು, ರಸೀದಿ ನೀಡುವವರೆಗೆ ಕಂತು ಕಟ್ಟುವುದಿಲ್ಲ’ ಎಂದು ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಎಚ್ಚರಿಸಿದರು.

ರೈತ ಸಂಘದ ರಾಜ್ಯ ಘಟಕದ ಕುರುವ ಗಣೇಶ್, ತರಿಕೆರೆ ಮಹೇಶ್, ಅಬ್ಬಣಿ ಶಿವಪ್ಪ, ಸಜೀರ್ ಸಾಬ್ ಮೂಲೆಮನಿ, ಶಿವಮೊಗ್ಗದ ಶಿವಮೂರ್ತಿ, ಈಶಣ್ಣ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಮರುಳಸಿದ್ದಯ್ಯ, ಜಿಲ್ಲಾ ಸಮಿತಿಯ ಡಿ.ಎಸ್.ಮಲ್ಲಿಕಾರ್ಜುನ್, ಅಪ್ಪರಸನ ಹಳ್ಳಿ ಬಸವರಾಜಪ್ಪ, ರಾಮರೆಡ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಮತಿಘಟ್ಟ ಸತೀಶ್, ಕೋಲಾರ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು, ತಾಲ್ಲೂಕು ಘಟಕದ ಸದಸ್ಯರು, ಮುಖಂಡರು ಇದ್ದರು.

***

ಕಾರ್ಖಾನೆಗಳು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿ ಮಾಡುವಂತೆ, ರೈತರಿಗೂ ತಮ್ಮ ಬೆಳೆಗೆ ಬೆಲೆ ನಿಗದಿ ಮಾಡುವ ಸ್ವಾತಂತ್ರ್ಯ ಸಿಗಬೇಕು. ಅಲ್ಲಿಯವರೆಗೆ ರೈತ ಉದ್ಧಾರ ಆಗುವುದಿಲ್ಲ.
–ಈಚಘಟ್ಟದ ಸಿದ್ದವೀರಪ್ಪ, ಕಾರ್ಯಾಧ್ಯಕ್ಷ, ರೈತ ಸಂಘದ ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT