ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಖರೀದಿ ವಿಳಂಬ: ರೈತ ಕಂಗಾಲು

ಖರೀದಿ ಕೇಂದ್ರದ ಬಳಿ ಸಾಲುಗಟ್ಟಿ ನಿಂತಿರುವ ಟ್ರ್ಯಾಕ್ಟರ್‌ಗಳು
Last Updated 29 ಮೇ 2022, 4:19 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣದ ಎಪಿಎಂಸಿ ಮಾರುಕಟ್ಟೆ ಸುತ್ತಲೂ ರಾಗಿ ಹೊತ್ತು ನಿಂತಿರುವ ಟ್ರ್ಯಾಕ್ಟರ್‌ಗಳು, ರಾಗಿ ಖರೀದಿ ಆಗುವುದನ್ನೇ ಎದುರು ನೋಡುತ್ತಿದ್ದಾರೆ.

ಇದು ಹೊಸದುರ್ಗದ ರಾಗಿ ಖರೀದಿ ಕೇಂದ್ರದ ಪರಿಸ್ಥಿತಿ. ಮೇ 19ರಿಂದ ರಾಗಿ ಖರೀದಿ ಆರಂಭವಾಗಿದ್ದರೂ ಇಲ್ಲಿನ ರೈತರ ರಾಗಿ ಮಾತ್ರ ಟ್ರ್ಯಾಕ್ಟರ್ ಬಿಟ್ಟು ಕೆಳಗಿಳಿದಿಲ್ಲ.

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗಾಗಿ ಸರ್ಕಾರ ಪುನಃ ಖರೀದಿ ಕೇಂದ್ರ ಆರಂಭಿಸಿತ್ತು. ರೈತರು ನೋಂದಣಿಯನ್ನೂ ಮಾಡಿಸಿಕೊಂಡಿದ್ದರು. ಆದರೆ ನೋಂದಣಿ ಮಾಡಿಸಿದ ರೈತರೆಲ್ಲರ ರಾಗಿ ಖರೀದಿಯಾಗಿಲ್ಲ.

‘ಗುರುವಾರ ಟ್ರ್ಯಾಕ್ಟರ್ ಬಾಡಿಗೆ ತೆಗೆದುಕೊಂಡು ರಾಗಿ ತಂದಿದ್ದೇನೆ. ಮೂರು ದಿನವಾದರೂ ರಾಗಿ ಖರೀದಿಯಾಗಿಲ್ಲ. ನಾಳೆ ಭಾನುವಾರ, ನಮ್ಮ ರಾಗಿ ಖರೀದಿ ಆರಂಭವಾಗುವುದು ಸೋಮವಾರವೇ. ಒಂದು ದಿನಕ್ಕೆ ಟ್ರ್ಯಾಕ್ಟರ್‌ ಬಾಡಿಗೆಗೆ ₹ 1 ಸಾವಿರ ನೀಡಬೇಕು. ಜೊತೆಗೆ ಹಮಾಲರಿಗೂ ಒಂದು ಚೀಲ ರಾಗಿಗೆ ₹20 ನೀಡಬೇಕು. ಬೇರೆ ಕಡೆ ಹಮಾಲರಿಗೆ ₹15 ಇದೆ. ಆದರೆ ಹೊಸದುರ್ಗದಲ್ಲಿ ಮಾತ್ರ ₹ 5 ಹೆಚ್ಚಿಗೆ ನೀಡಬೇಕು’ ಎಂದು ಸಾದರಹಳ್ಳಿ ವೆಂಕಟೇಶ್ ತಮ್ಮ ಅಳಲು ತೋಡಿಕೊಂಡರು.

‘ಇಲ್ಲಿ ಎಲ್ಲದಕ್ಕೂ ಹಣ ನೀಡಬೇಕು. ರಾತ್ರಿ ಉಳಿದುಕೊಳ್ಳಲು ಸಮಸ್ಯೆ ಇದೆ. ಅಕ್ಕಪಕ್ಕದ ಊರಿನವರು ಮನೆಗೆ ಹೋಗಿ ಬೆಳಿಗ್ಗೆ ಬರುತ್ತಾರೆ. ನಮಗೆ ಈ ಸೌಲಭ್ಯವಿಲ್ಲ. 20ರಿಂದ 30 ಕಿ.ಮೀ ದೂರದ ಊರಿಗೆ ನಿತ್ಯ ಓಡಾಡುವುದು ಅಸಾಧ್ಯದ ಕೆಲಸ. ಹೀಗಾದರೆ ರೈತರ ಪರಿಸ್ಥಿತಿ ಹೇಗೆ? ಎಂದು ವೆಂಕಟೇಶ್ ಪ್ರಶ್ನಿಸುತ್ತಾರೆ.

'ಉತ್ತಮ ಮಳೆಯಾಗಿದ್ದು, ಹೆಸರು, ಅಲಸಂದೆ, ಹತ್ತಿ, ಶೇಂಗಾ, ಸಾವೆ ಬಿತ್ತನೆ ಮಾಡುವ ಸಮಯ. ಹೊಲ ಹದ ಮಾಡಬೇಕು. ಟ್ರ್ಯಾಕ್ಟರ್ ನೋಡಿದರೆ, ಇಲ್ಲೇ ಇವೆ. ಹೀಗಾದರೆ ಮುಂದೆ ನಮ್ಮ ಬಿತ್ತನೆ ಹೇಗೆ, ನಾಲ್ಕು ದಿನಗಳಿಂದ ಸರಿಯಾಗಿ ಊಟ, ನಿದ್ದೆಯಿಲ್ಲ. ಎಲ್ಲಾ ರೈತರ ರಾಗಿ ಖರೀದಿ ಮಾಡಿಕೊಂಡು ಗೋದಾಮಿನಲ್ಲಿ ಹಾಕಬಹುದು. ನಿತ್ಯ ನೋಂದಣಿ ಪ್ರಕಾರ ರೈತರಿಗೆ ಫೋನ್ ಮುಖಾಂತರ ತಿಳಿಸಿದರೆ, ಬಂದು ರಾಗಿ ಕೊಡಲು ಅವಕಾಶವಾಗುತ್ತದೆ. ಅವರದು ಮುಗಿದ ಮೇಲೆ ಮತ್ತೊಬ್ಬರಿಗೆ ಫೋನ್ ಮಾಡಬಹುದು. ಮೇ 31ರವರೆಗೆ ರಾಗಿ ಖರೀದಿಗೆ ಗಡುವು ನೀಡಲಾಗಿದೆ. ಇನ್ನೆರಡು ದಿನದಲ್ಲಿ ರಾಗಿ ಖರೀದಿ ನಮ್ಮ ರಾಗಿ ಖರೀದಿಯಾಗಬಹುದಾ’ ಎಂಬ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ರೈತರು.

‘ರಾಗಿ ಖರೀದಿಗೆ ದಿನಾಂಕ ಮುಂದೂಡುವ ನಿರೀಕ್ಷೆ ಇದೆ. ರಾಗಿ ಖರೀದಿ ನಿತ್ಯ ಬೆಳಿಗ್ಗೆ 10ರಿಂದ ಸಂಜೆ 6.30ರವರೆಗೂ ನಡೆಯುತ್ತದೆ. ಶನಿವಾರ ಹಮಾಲರಿಲ್ಲದ ಕಾರಣ ರಾಗಿ ಖರೀದಿ ವಿಳಂಬವಾಗಿದೆ. ಇರುವ ಒಂದು ಗೋದಾಮಿಗೆ ರಾಗಿ ಹಾಕಲಾಗಿದೆ. ಲಾರಿಗಳು ಕಡಿಮೆ ಇದ್ದು ಬಂದ ಸಮಯದಲ್ಲಿ ಲೋಡ್ ಮಾಡಲಾಗುತ್ತಿದೆ. ಸೋಮವಾರದಿಂದ ಹೆಚ್ಚು ಲಾರಿಗಳು ಬರುತ್ತವೆ. ರೈತರು ಆತಂಕ ಪಡಬೇಕಾಗಿಲ್ಲ. ನೋಂದಣಿಯಾಗಿರುವ ಎಲ್ಲಾ ರೈತರ ರಾಗಿಯನ್ನು ಖರೀದಿಸಲಾಗುವುದು’ ಎಂದು ಖರೀದಿ ಕೇಂದ್ರದ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT