ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ಮೈ ಮನ ಸೆಳೆಯುವ ಮಿಂಚೇರಿ ಜಲಪಾತ

ಮಿಂಚೇರಿ ಬೆಟ್ಟದಿಂದ ಹರಿಯುವ ಹಳ್ಳದ ನೀರು ಸೃಷ್ಟಿಸಿದ ಸೊಬಗು
Last Updated 15 ಸೆಪ್ಟೆಂಬರ್ 2022, 4:06 IST
ಅಕ್ಷರ ಗಾತ್ರ

ಚಿಕ್ಕಜಾಜೂರು:ಸಮೀಪದ ಮಿಂಚೇರಿ ಬೆಟ್ಟದಿಂದ ಹರಿಯುವ ಹಳ್ಳದ ನೀರು ಜಲಪಾತ ಸೃಷ್ಟಿಸಿದ್ದು, ನೋಡುಗರನ್ನು ಸೆಳೆಯುತ್ತಿದೆ.

ಮಿಂಚೇರಿ ಬೆಟ್ಟ ಮ್ಯಾಸ ನಾಯಕರ ಆರಾಧ್ಯ ದೈವ ಎಂದು ಕರೆಯುವ ಗಾದ್ರಿ ಪಾಲನಾಯಕನ ಪುಣ್ಯ ಕ್ಷೇತ್ರ. ಇಲ್ಲಿಗೆ ತಾಲ್ಲೂಕಿನ ಹಾಗೂ ಜಿಲ್ಲೆಯ ವಿವಿಧ ಕಡೆಗಳಿಂದ ನೂರಾರು, ಸಾವಿರಾರು ಸಂಖ್ಯೆಯ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ.

ಈ ಬಾರಿ ಉತ್ತಮ ಮಳೆಯಾಗಿದ್ದು, ಸಮೀಪದ ಮುತ್ತುಗದೂರು ಕೆರೆ ಕೋಡಿ ಬಿದ್ದ ಕಾರಣ ಜಲಪಾತ ಸೃಷ್ಟಿಸಿದೆ. ಇದನ್ನು ಹಲವರು ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದ್ದಾರೆ.

ಬೆಟ್ಟದ ಮೇಲಿಂದ ಸುಮಾರು 25 ಅಡಿ ಆಳದಲ್ಲಿ ಬೀಳುವ ನೀರನ್ನು ನೋಡಿದರೆ ಮಲೆನಾಡಿನ ಜಲಪಾತಗಳ ನೆನಪಾಗುತ್ತದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಶಿವು ಹೆಗ್ಗೆರೆ.

ಇದು ಬೆಟ್ಟ–ಗುಡ್ಡಗಳಿಂದ ಕೂಡಿದ ಪ್ರದೇಶ ಮಾತ್ರವಲ್ಲ, ಧಾರ್ಮಿಕ ಕೇಂದ್ರವೂ ಹೌದು. ಈ ಭಾಗದ ಹತ್ತಾರು ಗ್ರಾಮಗಳ ಭಕ್ತರು ತಮ್ಮ ಊರಿನ ಉತ್ಸವ ಮೂರ್ತಿಗಳನ್ನು ತಂದು, ವರ್ಷ ಪೂರ್ತಿ ಹರಿಯುವ ಈ ಹಳ್ಳದಲ್ಲಿ ಗಂಗಾ ಪೂಜೆಯನ್ನು ಮಾಡುತ್ತಾರೆ. ಭಕ್ತರು ಪೂಜೆ ಸಲ್ಲಿಸಿದ ನಂತರ ಎರಡು ಮೂರು ದಿನಗಳಲ್ಲಿ ಮಳೆ ಬರುತ್ತದೆ ಎಂಬುದು ಈ ಭಾಗದ ಭಕ್ತರ ನಂಬಿಕೆಯಾಗಿದೆ.

ಗೋವುಗಳನ್ನು ರಕ್ಷಿಸಿದ ಗಾದ್ರಿ ಪಾಲನಾಯಕರ ದೇಹವನ್ನು ಇದೇ ಸ್ಥಳದಲ್ಲಿ ಭಕ್ತರು ಸಮಾಧಿ ಮಾಡಿದರು. ಗಾದ್ರಿ ಪಾಲನಾಯಕರಿಂದ ಕೊಲ್ಲಲ್ಪಟ್ಟ ಹುಲಿಯ ಶವವನ್ನೂ ಇಲ್ಲಿ ಸಮಾಧಿ ಮಾಡಲಾಯಿತು ಎಂಬ ಪ್ರತೀತಿ ಇದೆ. ಈ ಸ್ಥಳಕ್ಕೆ ಸಾವಿರಾರು ಭಕ್ತರು ಬಂದು, ಗಾದ್ರಿ ಪಾಲನಾಯಕರ ಸಮಾಧಿ ಹಾಗೂ ಹುಲಿಯ ಸಮಾಧಿಗಳಿಗೆ ಪೂಜೆ ಸಲ್ಲಿಸುತ್ತಾರೆ.

ಈ ಬಾರಿ ಮಳೆಗಾಲದಲ್ಲಿ ಜಲಪಾತ ಸೃಷ್ಟಿಸಿರುವ ಕಾರಣ ಹೆಚ್ಚಿನವರು ಇಲ್ಲಿಗೆ ಲಗ್ಗೆ ಇಡುತ್ತಿದ್ದಾರೆ.

ರಸ್ತೆ ದುರಸ್ತಿ ಮಾಡಿ: ಇಲ್ಲಿಗೆ ಹೋಗಲು ಸಮರ್ಪಕ ರಸ್ತೆ ಇಲ್ಲ. ಕಾಡು ದಾರಿಯಲ್ಲೇ ಪ್ರಯಾಸದಿಂದ ಈ ಸ್ಥಳಕ್ಕೆ ಹೋಗಬೇಕು. ರಸ್ತೆ ಇದ್ದಿದ್ದರೆ, ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು. ಮಳೆ ಜೋರಾಗಿ ಬೀಳುವಾಗ ಬೆಟ್ಟದ ಮೇಲಿಂದ ಹರಿಯುವ ಹಳ್ಳದಿಂದ ಇನ್ನೂ ಹೆಚ್ಚಿನ ನೀರು ಧುಮುಕುತ್ತಿರುತ್ತದೆ. ಇಂತಹ ನೈಸರ್ಗಿಕ ಜಲಪಾತದ ದೃಶ್ಯವನ್ನು ನೋಡಿ ಸಂತಸವಾಯಿತು. ಸಂಬಂಧಪಟ್ಟ ಇಲಾಖೆಯವರು ಈ ಸ್ಥಳಕ್ಕೆ ಬರಲು ಉತ್ತಮ ರಸ್ತೆಯನ್ನು ನಿರ್ಮಿಸಬೇಕು ಎಂದು ಮುತ್ತುಗದೂರು ಗ್ರಾಮ ಪಂಚಾಯಿತಿ ಸದಸ್ಯರುಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT