ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ಲಾರಿಗಳ ಸಂಚಾರ ಸ್ಥಗಿತಕ್ಕೆ ಆಗ್ರಹ

ದುಡ್ಡು ಕೊಟ್ಟರೆ ಪುನಃ ಪ್ರಾಣ ಬರುವುದಿಲ್ಲ; ಗಾಯತ್ರಿ ಸಿದ್ದೇಶ್ವರ
Last Updated 13 ಜುಲೈ 2019, 12:16 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಮತ್ತು ಭೀಮಸಮುದ್ರ ಗ್ರಾಮಗಳ ರಸ್ತೆ ಮಾರ್ಗವಾಗಿ ನಿತ್ಯವು ಗಣಿ ಕಂಪನಿಗಳ ಲಾರಿಗಳು ಸಂಚರಿಸುತ್ತಿದ್ದು, ಕೂಡಲೇ ಸಂಚಾರ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟಿಸಿದರು.

ಹಿರೇಗುಂಟನೂರಿನ ಮುಖ್ಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟಿಸಿದರು. ಗಣಿ ಲಾರಿಗಳ ಸಂಚಾರಕ್ಕೆ ಅವಕಾಶ ನೀಡದೆ, ರಸ್ತೆ ತಡೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದರು.

ಗಣಿ ಲಾರಿಗಳ ಸಂಚಾರದಿಂದ ರೈತರಿಗೆ, ಶಾಲಾ ಮಕ್ಕಳಿಗೆ, ಗ್ರಾಮಸ್ಥರಿಗೆ, ಜಾನುವಾರುಗಳಿಗೆ, ಸುತ್ತಮುತ್ತಲಿರುವ ಅರಣ್ಯ ಪ್ರದೇಶಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ತಹಶೀಲ್ದಾರ್ ಕಾಂತರಾಜ್ ಅವರಿಗೆ ಮನವಿ ಸಲ್ಲಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ನೇತೃತ್ವ ವಹಿಸಿ ಮಾತನಾಡಿ, ‘ಗಣಿ ಲಾರಿಗಳ ಬಹುತೇಕ ಚಾಲಕರಿಗೆ ವಾಹನ ಪರವಾನಗಿ ಇಲ್ಲ. ಇನ್ನೂ ಎಂಟು ಲಾರಿ ನವೀಕರಣ ಆಗಿಲ್ಲ. ಅದಿರು ತುಂಬಿದ ಭಾರವಾದ ವಾಹನಗಳನ್ನು ಚಲಾಯಿಸುವ ಕುರಿತು ಇಲ್ಲಿನ ಗಣಿ (ಮೈನಿಂಗ್‌) ಕಂಪನಿಗಳ ಚಾಲಕರಿಗೆ ಪರಿಜ್ಞಾನವಿಲ್ಲ’ ಎಂದು ದೂರಿದರು.

‘ಕೆಲವರು ದುರ್ಗದಲ್ಲಿಯೇ ಉಳಿದುಕೊಂಡು ಲಾರಿಗಳನ್ನು ಸ್ವಚ್ಛಗೊಳಿಸುವ (ಕ್ಲೀನರ್‌) ಜೊತೆಗೆ ಕಳಿಸಿಕೊಡುತ್ತಾರೆ. ಇಂಥವರು ಗ್ರಾಮೀಣ ಭಾಗಗಳಲ್ಲಿ ಚಾಲನೆ ಮಾಡುತ್ತಾರೆ. ಹೀಗೆ ಅನೇಕ ಕಾರಣಗಳಿಂದಾಗಿ ಅಮಾಯಕರ ಪ್ರಾಣ ಹಾನಿಯಾಗುತ್ತಿದೆ. ಹಿರೇಗುಂಟನೂರು ಸಮೀಪ ಹಿಂದಿನ ತಿಂಗಳು ನಡೆದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟರು. ಅವರಿಗೆ ಪರಿಹಾರ ನೀಡಿರಬಹುದು. ಆದರೆ, ದುಡ್ಡು ಕೊಟ್ಟ ಮಾತ್ರಕ್ಕೆ ಹೋದ ಪ್ರಾಣ ಪುನಃ ಬರುತ್ತದೆಯೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗಣಿಗಾರಿಕೆಯಿಂದ ಕಂಪನಿಗಳು ಅಧಿಕ ಹಣ ಗಳಿಸುತ್ತಿವೆ. ಗ್ರಾಮೀಣ ಭಾಗದ ರೈತರ ಕಷ್ಟಗಳು ಅವರಿಗೆ ಗೊತ್ತಿಲ್ಲ. ಕಷ್ಟಪಟ್ಟರೆ ಮಾತ್ರ ಹಳ್ಳಿಗಾಡಿನ ಜನರ ಕೈಯಲ್ಲಿ ಕಾಸು ಕಾಣಬಹುದು. ಗಣಿಗಾರಿಕೆ ನಡೆಸುವವರು ನಮ್ಮನ್ನು ಜನ ಅಂದುಕೊಂಡಿದ್ದಾರೋ ದನ ಎಂದುಕೊಂಡಿದ್ದಾರೋ ಗೊತ್ತಾಗುತ್ತಿಲ್ಲ. ಅವರಿಗೆ ಮನುಷತ್ವ ಇಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿಯ ಜೀವ ವೈವಿದ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ಸುರೇಶ್ ನಾಯ್ಕ, ‘ಗಣಿ ಲಾರಿಗಳು ಸಂಚರಿಸದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದರೆ, ಗಣಿ ಕಂಪನಿಗಳು ನ್ಯಾಯಾಲಯದ ಮೊರೆಹೋಗಿ ಅದಕ್ಕೆ ತಡೆಯಾಜ್ಞೆ ತಂದಿದ್ದು, ಈಗ ಮತ್ತೆ ಲಾರಿಗಳು ಸಂಚರಿಸುತ್ತಿವೆ. ಅಧಿಕಾರಿಗಳ ಆದೇಶಕ್ಕೆ ಬೆಲೆಯೇ ಇಲ್ಲವೇ’ ಎಂದು ಪ್ರಶ್ನಿಸಿದರು.

‘ಸಾರ್ವಜನಿಕ ಸ್ಥಳ ಮತ್ತು ರಸ್ತೆ, ರೈತರ ಜಮೀನಿನ ಮಾರ್ಗವಾಗಿ ಅದಿರು ಲಾರಿಗಳು ಸಂಚರಿಸುತ್ತಿರುವುದರಿಂದ ಜನತೆಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಭೀಮಸಮುದ್ರ, ಹಿರೇಗುಂಟನೂರಿನ ಇಂತಹ ಮಾರ್ಗಗಳಲ್ಲಿ ಅದಿರು ಲಾರಿಗಳ ಸಂಚಾರವನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕು. ಪ್ರತ್ಯೇಕ ಮಾರ್ಗವನ್ನು ಗಣಿ ಕಂಪನಿಗಳೇ ನಿರ್ಮಿಸಿಕೊಳ್ಳಬೇಕು. ಈ ಕುರಿತು ಕಠಿಣ ನಿರ್ಧಾರ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಹಿರೇಗುಂಟನೂರು ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಶ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊನ್ನೂರಪ್ಪ, ಗ್ರಾಮದ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT