ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆವಿಮೆ ಪರಿಹಾರ: ಸಚಿವರ ಅಸಮಾಧಾನ

ಕೃಷಿ, ಆರೋಗ್ಯ ಇಲಾಖೆ ಪ್ರಗತಿ ಪರಿಶೀಲಿಸಿದ ಬಿ.ಶ್ರೀರಾಮುಲು
Last Updated 23 ಜೂನ್ 2021, 15:51 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ಕಂತು ಪಾವತಿಸಿದವರಲ್ಲಿ ಶೇ 5ರಷ್ಟು ರೈತರಿಗೂ ವಿಮೆ ಪರಿಹಾರ ಸಿಗುತ್ತಿಲ್ಲ. ವಿಮಾ ಕಂಪನಿಗಳು ತಪ್ಪು ಮಾಹಿತಿ ನೀಡಿ ಸಮಸ್ಯೆ ಸೃಷ್ಟಿಸುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಸಮಾಧಾನ ಹೊರಹಾಕಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ವಿಮಾ ಕಂಪನಿಗಳು ತಪ್ಪು ಮಾಹಿತಿ ನಮೂದು ಮಾಡುತ್ತಿವೆ. ರೈತ ಸೂರ್ಯಕಾಂತಿ ಬೆಳೆಯದಿದ್ದರೂ ದಾಖಲೆಯಲ್ಲಿ ಉಲ್ಲೇಖ ಮಾಡಲಾಗುತ್ತಿದೆ. ಅವರು ಸಮೀಕ್ಷೆಗೆ ಬರುವಾಗ ಕೃಷಿ ಇಲಾಖೆಗೆ ಮಾಹಿತಿ ನೀಡುವುದಿಲ್ಲವೇ’ ಎಂದು ಜಂಟಿ ನಿರ್ದೇಶಕ ಪಿ.ರಮೇಶಕುಮಾರ್‌ ಅವರನ್ನು ಪ್ರಶ್ನಿಸಿದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾತನಾಡಿ, ‘ಚಳ್ಳಕೆರೆ ತಾಲ್ಲೂಕಿನಲ್ಲಿ ವಿಮೆಯ ಬಗ್ಗೆ ರೈತ ಸಂಘ ಅರಿವು ಮೂಡಿಸಿದೆ. ಕಂತು ಪಾವತಿ, ಪರಿಹಾರ ಪಡೆಯುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿದೆ. ಅನೇಕರು ಉತ್ತಮ ಪರಿಹಾರ ಪಡೆದಿದ್ದಾರೆ. ಆದರೆ, ಎಲ್ಲ ರೈತರಿಗೆ ಈ ಪರಿಹಾರ ಸಿಕ್ಕಿಲ್ಲ’ ಎಂದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ಟಿ.ರಘುಮೂರ್ತಿ, ‘ಫಸಲ್ ಬಿಮಾ ಯೋಜನೆಯ ಮಾನದಂಡಗಳೇ ಅವೈಜ್ಞಾನಿಕವಾಗಿವೆ. ಒಬ್ಬ ರೈತನಿಗೆ ಲಾಟರಿ ಹೊಡೆದಂತೆ ಪರಿಹಾರ ಸಿಕ್ಕರೆ ಪ್ರಯೋಜನವಿಲ್ಲ. ಇದು ಎಲ್ಲ ರೈತರ ಹಿತಾಸಕ್ತಿ ಕಾಪಾಡಬೇಕು. ವಿಮಾ ನೀತಿಯಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಮಾಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ವಿಮೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹಂತದಲ್ಲಿ ಇತ್ಯರ್ಥ ಆಗಬೇಕು. ಈ ಬಗ್ಗೆ ಗಮನ ಸೆಳೆಯುವ ಅಗತ್ಯವಿದೆ ಎಂಬುದರ ಬಗ್ಗೆ ಚರ್ಚೆ ನಡೆಯಿತು.

‘2018-19 ರಲ್ಲಿ 34,020 ರೈತರು ಬೆಳೆ ವಿಮೆ ಮಾಡಿಸಿದ್ದರು. 2019-20 ರಲ್ಲಿ 76,538 ರೈತರು ವಿಮೆ ಮಾಡಿಸಿದ್ದು, 53,637 ರೈತರಿಗೆ ₹ 75.02 ಕೋಟಿ ಪರಿಹಾರ ನೀಡಲಾಗಿದೆ. 2020–21ರಲ್ಲಿ 85 ಸಾವಿರ ರೈತರು ಕಂತು ಪಾವತಿಸಿದ್ದಾರೆ. 189 ಗ್ರಾಮ ಪಂಚಾಯಿತಿ ಪೈಕಿ 36 ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಪರಿಹಾರ ಸಿಗಲಿದೆ’ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು.

ಬಿತ್ತನೆ ಬೀಜ ಸಬ್ಸಿಡಿ ಹೆಚ್ಚಳ

ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ನೀಡುತ್ತಿರುವ ಶೇಂಗಾ ಬಿತ್ತನೆ ಬೀಜದ ದರವು ಮಾರುಕಟ್ಟೆ ದರಕ್ಕಿಂತ ಹೆಚ್ಚಿದೆ. ದರ ಕಡಿತ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಶ್ರೀರಾಮುಲು ಸೂಚನೆ ನೀಡಿದರು.

‘ಮುಂಗಾರು ಹಂಗಾಮಿನ ಬಿತ್ತನೆಗೆ ವಿತರಣೆ ಮಾಡುತ್ತಿರುವ ಶೇಂಗಾ ಬೀಜದ ದರವು ಕ್ವಿಂಟಾಲ್‍ ₹ 7,700 ಇದೆ. ಇದರಲ್ಲಿ ಸಾಮಾನ್ಯ ರೈತರಿಗೆ ₹ 1,400 ಮತ್ತು ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ₹ 2,100 ಸಬ್ಸಿಡಿ ನೀಡಲಾಗುತ್ತದೆ. ಸಬ್ಸಿಡಿ ದರವನ್ನು ಹೆಚ್ಚಿಸಿದಲ್ಲಿ ದರ ಕಡಿತವಾಗಲಿದೆ. ಈ ಬಗ್ಗೆ ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ’ ಎಂದು ತಿಳಿಸಿದರು.

‘ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ಭಾಗದಲ್ಲಿ ಹೆಚ್ಚಾಗಿ ಶೇಂಗಾ ಬೆಳೆಯಲಾಗುತ್ತಿದೆ. ಆದ್ದರಿಂದ ಕೂಡಲೇ ದರ ಕಡಿತ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕಾಗಿದೆ’ ಎಂದರು.

ಯೂರಿಯಾ ದಾಸ್ತಾನಿಗೆ ತಾಕೀತು

ಮುಂಗಾರು ಬಿತ್ತನೆ ಜಿಲ್ಲೆಯಲ್ಲಿ ಚುರುಕಾಗಿದ್ದು, ಜುಲೈನಲ್ಲಿ ರಸಗೊಬರಕ್ಕೆ ಹೆಚ್ಚಿನ ಬೇಡಿಕೆ ಬರಲಿದೆ. ವಿಶೇಷವಾಗಿ ಯೂರಿಯಾ ರಸಗೊಬ್ಬರ ಹೆಚ್ಚು ಬೇಕಾಗುತ್ತದೆ. ಈ ವೇಳೆ ಯೂರಿಯಾ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಸೂಚನೆ ನೀಡಿದರು.

‘ಯೂರಿಯಾ, ಡಿಎಪಿ, ಎಂಒಪಿ, ಎನ್.ಪಿ.ಕೆ ಕಾಂಪ್ಲೆಕ್ಸ್ ಸೇರಿ ಒಟ್ಟು 68,360 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದೆ. ಇದರಲ್ಲಿ ಜೂನ್ ವರೆಗೆ 35,080 ಮೆಟ್ರಿಕ್ ಟನ್ ಬೇಕಾಗುತ್ತದೆ. ಈಗಾಗಲೇ 37,990 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದೆ. 20,064 ಮೆಟ್ರಿಕ್‌ ಟನ್‌ ವಿತರಣೆಯಾಗಿದ್ದು, 17,926 ಮೆಟ್ರಿಕ್‌ ಟನ್‌ ದಾಸ್ತಾನು ಇದೆ’ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶಕುಮಾರ್‌ ಎಂದು ಸಭೆಗೆ ತಿಳಿಸಿದರು.

ಕಪ್ಪು ಶಿಲೀಂದ್ರ ಶಸ್ತ್ರಚಿಕಿತ್ಸೆಗೆ ಸೂಚನೆ

ಕಪ್ಪು ಶಿಲೀಂದ್ರದಿಂದ ಬಳಲುತ್ತಿರುವ ರೋಗಿಗಳಿಗೆ ಅಗತ್ಯವಿರುವ ಶಸ್ತ್ರಚಿಕಿತ್ಸೆಯನ್ನು ಜಿಲ್ಲಾ ಆಸ್ಪತ್ರೆಯಲ್ಲೇ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸೂಚನೆ ನೀಡಿದರು.

‘ಕಪ್ಪು ಶಿಲೀಂದ್ರದ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಧ್ಯಮ ಗಮನ ಸೆಳೆದಿದೆ. ದುಬಾರಿ ವೆಚ್ಚದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಡವರಿಗೆ ಸಾಧ್ಯವಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗಬೇಕು’ ಎಂದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ರಘುಮೂರ್ತಿ, ‘ಸರ್ಕಾರಿ ಆಸ್ಪತ್ರೆಯಲ್ಲಿ ನೆಪಮಾತ್ರಕ್ಕೆ ಚಿಕಿತ್ಸೆ ಸಿಗುತ್ತಿದೆ. ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಎಷ್ಟು ರೋಗಿಗಳನ್ನು ಶಿಫಾರಸು ಮಾಡಿದ್ದೀರಿ ಹೇಳಿ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ, ‘ಜೂನ್‌ 10ರ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿ 15 ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ತೀರಾ ಗಂಭೀರ ಸ್ವರೂಪದ ಸಮಸ್ಯೆ ಇದ್ದಾಗ ಮಾತ್ರ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತಿದೆ’ ಎಂದು ಪ್ರತಿಕ್ರಿಯೆ ನೀಡಿದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಇದ್ದರು.

* ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕಿದೆ.

-ಬಿ.ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT