ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂತುರು ಮಳೆಯಲ್ಲೇ ಸಚಿವರ ಪರಿಶೀಲನೆ

ಬೆಳೆಹಾನಿ ಪ್ರದೇಶಕ್ಕೆ ಕಂದಾಯ ಸಚಿವ ಆರ್‌.ಅಶೋಕ ಭೇಟಿ
Last Updated 11 ಆಗಸ್ಟ್ 2022, 5:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಕಂದಾಯ ಸಚಿವ ಆರ್‌.ಅಶೋಕ, ತುಂತುರು ಮಳೆಯಲ್ಲಿ ಬೆಳೆ ಹಾನಿ ಪರಿಶೀಲನೆ ನಡೆಸಿದರು. ರೈತರ ಸಂಕಷ್ಟವನ್ನು ಆಲಿಸಿ ಒಂದೂವರೆ ತಿಂಗಳಲ್ಲಿ ಪರಿಹಾರ ನೀಡುವುದಾಗಿ ಆಶ್ವಾಸನೆ ನೀಡಿದರು.

ತಾಲ್ಲೂಕಿನ ಓಬವ್ವನಾಗತಿಹಳ್ಳಿ ಹಾಗೂ ಆಲಘಟ್ಟ ಗ್ರಾಮದ ಮೆಕ್ಕೆಜೋಳದ ಜಮೀನಿಗಳಿಗೆ ಭೇಟಿ ನೀಡಿದರು. ಕೆಸರು ಗದ್ದೆಯಲ್ಲಿ ಹೆಜ್ಜೆಹಾಕಿದಾಗ ವರುಣನ ಸಿಂಚನ ಆರಂಭವಾಯಿತು. ಛತ್ರಿ ಹಿಡಿದು ಸಾಗಿದ ಅವರನ್ನು ರೈತರು, ಅಧಿಕಾರಿಗಳು ಹಿಂಬಾಲಿಸಿದರು.

‘ಜೂನ್‌ ತಿಂಗಳಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆವಣಿಗೆ ಕುಂಠಿತವಾಗಿದೆ. ಅತಿಯಾದ ತೇವಾಂಶವಾಗಿ ಬೇರು ಕೊಳೆತು ಹೋಗುತ್ತಿದೆ. ಬರ ಪರಿಸ್ಥಿತಿಯಲ್ಲಾದರೂ ಕೊಂಚ ಬೆಳೆ ಕೈಗೆ ಸಿಗುತ್ತಿತ್ತು. ಅತಿಯಾದ ಮಳೆಯಿಂದ ಎಲ್ಲ ಬೆಳೆ ಹಾಳಾಗಿದೆ. 25 ವರ್ಷದ ಕೃಷಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಆಲಘಟ್ಟದ ಜಿ.ಟಿ. ಗೋವಿಂದರಾಜು ಅಳಲು ತೋಡಿಕೊಂಡರು. ಇದಕ್ಕೆ ಗ್ರಾಮಸ್ಥರು ಧ್ವನಿಗೂಡಿಸಿದರು.

ಮೆಕ್ಕೆಜೋಳದ ಪೈರು ಕಿತ್ತು ವಿವರಿಸಿದ ಜಂಟಿ ಕೃಷಿ ನಿರ್ದೇಶಕ ಡಾ.ಪಿ. ರಮೇಶ್‌ಕುಮಾರ್‌, ‘ತೇವಾಂಶ ಹೆಚ್ಚಾಗಿ ಬೇರು ಕೊಳೆಯುತ್ತದೆ. ಹುಳ ಉತ್ಪತ್ತಿಯಾಗಿ ದುರ್ವಾಸನೆ ಬೀರತೊಡಗುತ್ತದೆ. ಮಳೆ ಕಡಿಮೆಯಾದರೂ ಈ ಜೋಳ ಮೇವಿಗೂ ಬಳಸಲು ಬರುವುದಿಲ್ಲ. ಜಾನುವಾರುಗಳು ಈ ಮೇವನ್ನು ತಿನ್ನುವುದಿಲ್ಲ’ ಎಂದು ಹೇಳಿದರು. ಮೇವಿಗೂ ಬಳಕೆಯಾಗುವುದಿಲ್ಲ ಎಂಬುದಕ್ಕೆ ಸಚಿವರು ಅಚ್ಚರಿ ವ್ಯಕ್ತಪಡಿಸಿದರು.

‘ರಾಜ್ಯದ 14 ಜಿಲ್ಲೆಗಳಲ್ಲಿ ಅತಿವೃಷ್ಟಿ ಸಂಭವಿಸಿದೆ. 70ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮನೆ ಕಳೆದುಕೊಂಡವರಿಗೆ ₹ 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಬೆಳೆ ಪರಿಹಾರಕ್ಕೆ ಸಂಬಂಧಿಸಿದ ವರದಿಯನ್ನು ಜಿಲ್ಲಾಡಳಿತದಿಂದ ಪಡೆಯುತ್ತಿದ್ದೇನೆ. ಪರಿಶೀಲಿಸಿ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು’ ಎಂದು ಸಚಿವ ಆರ್‌.ಅಶೋಕ ಸುದ್ದಿಗಾರರಿಗೆ ತಿಳಿಸಿದರು.

‘ಈ ಮೊದಲು ಬೆಳೆ ಪರಿಹಾರ ಪ್ರತಿ ಹೆಕ್ಟೇರ್‌ಗೆ ₹ 6 ಸಾವಿರವಿತ್ತು. ಇದು ಬಹುತೇಕ ದ್ವಿಗುಣಗೊಂಡಿದ್ದು, ₹ 13,600ಕ್ಕೆ ಹೆಚ್ಚಿಸಲಾಗಿದೆ. ಮಳೆಹಾನಿಯಾದ ಪ್ರದೇಶದ ಸಮೀಕ್ಷೆ ನಡೆಸಲಾಗುತ್ತಿದ್ದು, ಶೀಘ್ರವೇ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಒಂದೂವರೆ ತಿಂಗಳಲ್ಲಿ ಪರಿಹಾರದ ಮೊತ್ತವನ್ನು ಸಂತ್ರಸ್ತ ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲಾಗಿದೆ. ಇದಕ್ಕೆ ಆ್ಯಪ್‌ ಒಂದನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ರೈತರು ಬಿತ್ತಿದ ಬೆಳೆ ಮೇವು ಆಗಬಹುದು ಎಂಬ ನಂಬಿಕೆ ಇತ್ತು. ಸ್ಥಳ ಪರಿಶೀಲನೆ ನಡೆಸಿದ ಬಳಿಕ ನೈಜ ಸ್ಥಿತಿ ಮನವರಿಕೆಯಾಗಿದೆ. ಚಳ್ಳಕೆರೆ ಹಾಗೂ ಮೊಳಕಾಲ್ಮುರು ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ವರದಿ ನೀಡುತ್ತಾರೆ. ಅದನ್ನು ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ. ಉತ್ತರ ಕರ್ನಾಟಕದ ಇತರ ಭಾಗಗಳಿಗೂ ಭೇಟಿ ನೀಡಲಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ತಹಶೀಲ್ದಾರ್ ಸತ್ಯನಾರಾಯಣ
ಇದ್ದರು.

37,416 ಹೆಕ್ಟೇರ್‌ ಬೆಳೆಹಾನಿ

ಚಿತ್ರದುರ್ಗ ಜಿಲ್ಲೆಯಲ್ಲಿ ಜೂನ್‌, ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆಯಿಂದಾಗಿ 37,416 ಹೆಕ್ಟೇರ್‌ ಬೆಳೆಹಾನಿ ಉಂಟಾಗಿದೆ. ಇದರಲ್ಲಿ 35,568 ಹೆಕ್ಟೇರ್ ಕೃಷಿ ಭೂಮಿ, 1,843 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿ ಉಂಟಾಗಿದೆ ಎಂದು ಆರ್‌.ಅಶೋಕ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 444 ಮನೆಗಳಿಗೆ ಹಾನಿಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 102 ಮನೆಗಳಿಗೆ ಹಾನಿ ಉಂಟಾಗಿದೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ನೆರೆ ಪರಿಸ್ಥಿತಿ ಚಿತ್ರದುರ್ಗದಲ್ಲಿ ಸೃಷ್ಟಿಯಾಗಿಲ್ಲ. ಆದರೆ, ತೇವಾಂಶ ಹೆಚ್ಚಾಗಿದ್ದರಿಂದ ಅತಿ ಹೆಚ್ಚು ಬೆಳೆ ಹಾನಿಗೀಡಾಗಿದೆ’ ಎಂದು ವಿವರಿಸಿದರು.

ಅತಿವೃಷ್ಟಿ ಹಾನಿ: ಕೇಂದ್ರಕ್ಕೆ ಶೀಘ್ರ ವರದಿ

ಚಿತ್ರದುರ್ಗ: ‘ರಾಜ್ಯದಾದ್ಯಂತ ಅತಿವೃಷ್ಟಿಯಿಂದ ಸಂಭವಿಸಿದ ಅನಾಹುತಗಳಿಗೆ ಸಂಬಂಧಿಸಿದ ವರದಿಯನ್ನು ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಸೂಕ್ತ ಪರಹಾರ ನೀಡುವಂತೆ ಮನವಿ ಸಲ್ಲಿಸಲಾಗುವುದು’ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಜಿಲ್ಲೆಯ ವಿವಿಧೆಡೆ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪ್ರವಾಹ ಸ್ಥಿತಿಯ ಬಗ್ಗೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಕಳೆದ ಬಾರಿ ₹ 1,000 ಕೋಟಿಗೂ ಅಧಿಕ ಮೊತ್ತದ ಅನುದಾನವನ್ನು ರಾಜ್ಯಕ್ಕೆ ನೀಡಲಾಗಿತ್ತು. ಈ ಬಾರಿಯೂ ಸಮರ್ಪಕ ಪರಿಹಾರ ಬಿಡುಗಡೆ ಮಾಡುವ ವಿಶ್ವಾಸವಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT