ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್‌ ತೆರೆದು ಶಾಲೆ ಮುಚ್ಚಿದರೆ ಆ‍ಪತ್ತು: ಶಿಕ್ಷಣ ಸಚಿವ ಎಸ್.ಸುರೇಶಕುಮಾರ್‌ ಕಳವಳ

ಶಿಕ್ಷಣ ಸಚಿವ ಎಸ್.ಸುರೇಶಕುಮಾರ್‌ ಕಳವಳ
Last Updated 20 ಜನವರಿ 2021, 16:24 IST
ಅಕ್ಷರ ಗಾತ್ರ

ಚಿತ್ರದುರ್ಗ: ಎಲ್ಲಿ ಬಾರ್‌ ತೆರೆದು ಶಾಲೆ ಮುಚ್ಚಿರುವುದೋ ಅದು ಆರೋಗ್ಯವಂತ ಸಮಾಜವಾಗಿರಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶಕುಮಾರ್ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ದಂಡಿನಕುರುಬರಹಟ್ಟಿ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೈಲ್ವೆ ಇಲಾಖೆ ನಿವೃತ್ತ ನೌಕರ ಸಣ್ಣಕ್ಕಿ ಪ್ರಹ್ಲಾದ್ ನಿರ್ಮಿಸಿಕೊಟ್ಟ ಕೊಠಡಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್‌ ಕಾಣಿಸಿಕೊಂಡ ಕಾರಣಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷ ಸವಾಲಾಗಿ ಪರಿಣಮಿಸಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ತರಗತಿಗಳನ್ನು ಪ್ರಾರಂಭಿಸಲಾಗಿದೆ. 6ರಿಂದ 9ರವರೆಗೆ ವಿದ್ಯಾಗಮದ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರೇಡಿಯೊ ಮೂಲಕ ಶಿಕ್ಷಣ ದೊರಕುತ್ತಿದೆ’ ಎಂದರು.

‘ಮಕ್ಕಳು ಶಾಲೆಗೆ ಬಂದರೂ ಮಧ್ಯಾಹ್ನದ ಬಿಸಿಯೂಟ ನೀಡಲು ಸಾಧ್ಯವಾಗುತ್ತಿಲ್ಲ. ಬಹುತೇಕ ಮಕ್ಕಳಿಗೆ ಬಿಸಿಯೂಟದ ಅಗತ್ಯವಿದೆ. ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದ ಬಳಿಕ ಮಧ್ಯಾಹ್ನದ ಬಿಸಿಯೂಟ ನೀಡುತ್ತೇವೆ. ಮಕ್ಕಳನ್ನು ಅಂಕಗಳಿಕೆಗೆ ಸೀಮಿತಗೊಳಿಸದೇ ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸಿ’ ಎಂದರು.

‘ಬದಲಾದ ಪರಿಸ್ಥಿತಿಯಲ್ಲಿ ಶಾಲೆ ಶುಲ್ಕ ಪಾವತಿಸಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ವೇತನ ಕೂಡ ನೀಡುತ್ತಿಲ್ಲ. ಸರ್ಕಾರಕ್ಕೆ ಎಷ್ಟೇ ಆರ್ಥಿಕ ಸಮಸ್ಯೆಗಳು ಎದುರಾದರೂ ಶಿಕ್ಷಕರ ವೇತನಕ್ಕೆ ತೊಂದರೆ ಮಾಡಿಲ್ಲ. ಸರ್ಕಾರದ ಕಾಳಜಿಯನ್ನು ಅರಿತು ಮಕ್ಕಳ ಶಿಕ್ಷಕ್ಕೆ ಒತ್ತು ನೀಡಿ’ ಎಂದು ಶಿಕ್ಷಕರಿಗೆ ಸೂಚನೆ ನೀಡಿದರು.

‘ಪಿತೃ ಋಣ, ಮಾತೃ ಋಣಕ್ಕೂ ಊರಿನ ಋಣ ತೀರಿಸುವ ಕಾರ್ಯ ದೊಡ್ಡದು. ಪ್ರಹ್ಲಾದ್ ಅವರ ಉದಾರ ಕೊಡುಗೆ ಎಲ್ಲರಿಗೂ ಮಾದರಿ. ಒಂದೇ ಕೊಠಡಿ ನಿರ್ಮಾಣವಾಗಿದ್ದರೂ ಅದರ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದೇನೆ. ಜಿಲ್ಲಾ ಖನಿಜ ನಿಧಿಯಲ್ಲಿ (ಡಿಎಂಎಫ್‌) ಇನ್ನೂ ಎರಡು ಕೊಠಡಿಗಳನ್ನು ನಿರ್ಮಿಸಿಕೊಡಲು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಒಪ್ಪಿದ್ದಾರೆ’ ಎಂದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ‘ಜಿಲ್ಲೆಯಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಾಣ ಆಗಿರುವ ಶಾಲಾ ಕಟ್ಟಡಗಳು ಹೆಚ್ಚಿವೆ. ಇವುಗಳ ಪುನರ್ ನಿರ್ಮಾಣಕ್ಕೆ ನೂರು ಕೋಟಿ ಬೇಕಾಗಬಹುದು. ಶಿಕ್ಷಣ ಸಚಿವರು ₹ 35 ಕೋಟಿ ಅನುದಾನ ನೀಡಿದ್ದಾರೆ. ಗೋವಿಂದೇಗೌಡರ ಬಳಿಕ ಅತ್ಯಂತ ಕಳಕಳಿ ಹೊಂದಿದ ಸಚಿವರು ಶಿಕ್ಷಣ ಇಲಾಖೆಗೆ ಬಂದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಹಳ್ಳಿ ಕಡೆ ಗಮನಹರಿಸಿ’

ಸರ್ಕಾರಿ ಅಂಕಿ–ಅಂಶಗಳು ಏನೇ ಹೇಳಿದರೂ ಹಳ್ಳಿಗಳು ಸೊರಗುತ್ತಿವೆ. ಕುಶಲಕರ್ಮಿಗಳಿಗೆ ಕೆಲಸ ಇಲ್ಲದೇ ಬಡತನ ಹೆಚ್ಚುತ್ತಿದೆ. ಹಳ್ಳಿ ಬಗೆಗೆ ಸರ್ಕಾರ ಇನ್ನಷ್ಟು ಗಮನ ಹರಿಸುವ ಅಗತ್ಯವಿದೆ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಎಚ್.ಹನುಮಂತಪ್ಪ ಮನವಿ ಮಾಡಿದರು.

‘ಕಾಲಕ್ಕೆ ಅನುಗುಣವಾಗಿ ಶಿಕ್ಷಣ ನೀತಿಯೂ ಬದಲಾಗುತ್ತಿದೆ. ವಿದ್ಯೆ ಬಗ್ಗೆ ಹಳ್ಳಿಯಲ್ಲಿ ಅಭಿಮಾನ ಹೆಚ್ಚಾಗುತ್ತಿದೆ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಸಿಗುತ್ತಿಲ್ಲ. ಸುರೇಶಕುಮಾರ್‌ ಅವರು ಉತ್ತಮವಾಗಿ ಖಾತೆ ನಿರ್ವಹಿಸುತ್ತಿದ್ದಾರೆ. ಅವರ ಪ್ರಾಮಾಣಿಕತೆಗೆ ನಾನೂ ಅಭಿಮಾನಿಯಾಗಿದ್ದೇನೆ’ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜು, ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ಡಯಟ್ ಪ್ರಾಂಶುಪಾಲ ಎಸ್.ಕೆ.ಬಿ.ಪ್ರಸಾದ್, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಮುಬಿನ್, ಶಿಕ್ಷಕರ ಸಂಘದ ಮಾರುತಿ ಇದ್ದರು.

ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದ ಅನೇಕರು ಉನ್ನತ ಸಾಧನೆ ಮಾಡಿದ್ದಾರೆ. ಆದರೆ, ಸರ್ಕಾರಿ ಶಾಲೆಗೆ ನೆರವು ನೀಡಿದ್ದು ಕಡಿಮೆ. ಪ್ರಹ್ಲಾದ್ ಅವರ ಕಾರ್ಯ ಎಲ್ಲರಿಗೂ ಮಾದರಿ.

–ಶಶಿಕಲಾ ಸುರೇಶ್ ಬಾಬು

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT