ಮೊಳಕಾಲ್ಮುರು: ‘ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವುದರಿಂದ ಚುನಾವಣೆಗಳಲ್ಲಿ ಜನರು ನಮಗೆ ಮತ ಹಾಕುತ್ತಾರೆ ಎಂಬ ಭಾವನೆಯಿಂದ ಹೊರಬಂದು ಪಕ್ಷ ಸಂಘಟನೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು’ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಜನಸಂಪರ್ಕ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಶೀಘ್ರದಲ್ಲಿಯೇ ಘೋಷಣೆಯಾಗಲಿದೆ. ಬಿಜೆಪಿ ಹಾಗೂ ಜೆಡಿಎಸ್ ಸಂಘಟನೆಯಲ್ಲಿ ಮುಂಚೂಣಿಯಲ್ಲಿವೆ. ನಾವು ನಿರ್ಲಕ್ಷ್ಯ ಮಾಡಿದಲ್ಲಿ ಚುನಾವಣೆ ಎದುರಿಸುವುದು ಕಷ್ಟವಾಗಲಿದೆ. ಗ್ಯಾರಂಟಿ ಸೌಲಭ್ಯ ಪಡೆದವರೆಲ್ಲರೂ ಮತ ಹಾಕುತ್ತಾರೆ ಎಂಬ ನಂಬಿಕೆ ಇಟ್ಟುಕೊಳ್ಳುವಂತಿಲ್ಲ. ಈಚೆಗೆ ನಡೆದ ಲೋಕಸಭಾ ಚುನಾವಣೆ ಇದಕ್ಕೆ ಸಾಕ್ಷಿಯಾಗಿದ್ದು, ಇದನ್ನು ಅರ್ಥ ಮಾಡಿಕೊಂಡು ಮುಂದುವರಿಯಬೇಕು’ ಎಂದು ಹೇಳಿದರು.
ಸರ್ವರಿಗೂ ಸಮಬಾಳು, ಸಮಪಾಲು ಧ್ಯೇಯದೊಂದಿಗೆ ಜಾರಿಯಾದ ಗ್ಯಾರಂಟಿ ಯೋಜನೆಗಳಿಂದ ಕಡುಬಡವರಿಗೆ ತುಂಬಾ ಅನುಕೂಲವಾಗಿದೆ. ಯೋಜನೆಗಳ ಜಾರಿಯಲ್ಲಿ ಚಿತ್ರದುರ್ಗ ಜಿಲ್ಲೆಯು ಬೆಂಗಳೂರು ವಿಭಾಗದಲ್ಲಿ 4ನೇ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರು ಗ್ರಾಮಗಳಿಗೆ ಭೇಟಿ ನೀಡಿ ನೋಂದಣಿಯಾಗದ ಫಲಾನುಭವಿಗಳನ್ನು ಪತ್ತೆ ಹಚ್ಚಿ ಸೇರಿಸಲು ಮುಂದಾಗಬೇಕು ಎಂದು ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ ತಿಳಿಸಿದರು.
ಗ್ಯಾರಂಟಿ ಯೋಜನೆ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವೈ.ಪಿ. ಚೇತನ್, ತಹಶೀಲ್ದಾರ್ ಟಿ. ಜಗದೀಶ್, ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಜಿ. ಪ್ರಕಾಶ್, ಸದಸ್ಯ ಅಬ್ದುಲ್ಲಾ, ಜಿಲ್ಲಾ ಸಮಿತಿಯ ಜಿ.ಪಿ. ಸುರೇಶ್ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಇಒ ಕೆ. ಹನುಮಂತಪ್ಪ, ವ್ಯವಸ್ಥಾಪಕ ನಂದೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಕೆ. ಖಲೀಂವುಲ್ಲಾ, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗೇಶ್‌ರೆಡ್ಡಿ, ತಾಲ್ಲೂಕು ಸಮಿತಿ ಸದಸ್ಯರಾದ ಪಿ.ಐ. ಶೇಖ್, ಎರ್ರಿಸ್ವಾಮಿ, ಎಚ್.ಎಸ್. ನರಸಿಂಹರೆಡ್ಡಿ, ಜಿ. ಗೋವಿಂದಪ್ಪ, ಸಿ. ಹೊನ್ನೂರಪ್ಪ, ಲೋಕೇಶ್ ಪಲ್ಲವಿ, ಅಂಗಡಿ ಪಾಲಯ್ಯ, ಎಸ್. ಸಿದ್ದಬಸಪ್ಪ, ಟಿ.ಎಸ್. ಪಾಲಯ್ಯ, ಬಿ. ಕೃಷ್ಣ, ಕೆ.ಸಿ. ಮಂಜುನಾಥ್, ಇ.ಎಸ್. ವಿಜಯಕುಮಾರ್, ಮೊಹಮ್ಮದ್ ರಫೀ, ಸಿಡಿಪಿಒ ನವೀನ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.