ಶುಕ್ರವಾರ, ಅಕ್ಟೋಬರ್ 29, 2021
20 °C
ಜೆಸಿಆರ್‌ ಮುಖ್ಯರಸ್ತೆ ಪರಿಶೀಲಿಸಿದ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ

ಚಿತ್ರದುರ್ಗ: ರಸ್ತೆ ಒತ್ತುವರಿ ತೆರವಿಗೆ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸಿ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇಲ್ಲಿನ ಗಾಯತ್ರಿ ವೃತ್ತ ಹಾಗೂ ಜೆಸಿಆರ್‌ ಮುಖ್ಯರಸ್ತೆಯನ್ನು ಪರಿಶೀಲಿಸಿದ ಶಾಸಕರು, ಸ್ವಯಂ ಪ್ರೇರಿತವಾಗಿ ಕಟ್ಟಡಗಳನ್ನು ತೆರವುಗೊಳಿಸಲು ಕಾಲಾವಕಾಶ ನೀಡಿದರು. ಕಾಲಮಿತಿಯಲ್ಲಿ ಸ್ಪಂದಿಸದ ಮಾಲೀಕರಿಗೆ ಸೂಚನೆ ನೀಡಿ ತೆರವು ಕಾರ್ಯಾಚರಣೆ ಕೈಗೊಳ್ಳುವಂತೆ ಹೇಳಿದರು.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಜೆಸಿಆರ್‌ ಮುಖ್ಯ ರಸ್ತೆಯ ವಿಸ್ತರಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಹೆದ್ದಾರಿಯಿಂದ ಕೇಂದ್ರ ಗ್ರಂಥಾಲಯದವರೆಗೆ 21 ಮೀಟರ್‌ ವಿಸ್ತೀರ್ಣದ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಗಾಯತ್ರಿ ಛತ್ರದಿಂದ ಬಿ.ಡಿ.ರಸ್ತೆಯವರೆಗೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಗಾಯತ್ರಿ ವೃತ್ತದಿಂದ ಕೆಳಭಾಗದ ವಿಸ್ತರಣೆ ಮಾತ್ರ ಬಾಕಿ ಇದೆ.

ನಗರಸಭೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಕಟ್ಟಡಗಳು ಒತ್ತುವರಿ ಮಾಡಿಕೊಂಡ ಭಾಗವನ್ನು ಗುರುತು ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ಅನೇಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದು ಉದ್ದೇಶಿತ ಕಾಮಗಾರಿಯನ್ನು ಪೂರ್ಣಗೊಳಿಸಲು ಅಡ್ಡಿಯಾಗಿದೆ. ಹೀಗಾಗಿ, ಶಾಸಕರು ರಸ್ತೆಯಲ್ಲಿ ಹೆಜ್ಜೆಹಾಕಿ ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಕಟ್ಟಡಗಳ ಮಾಲೀಕರ ಮನವೊಲಿಸುವ ಪ್ರಯತ್ನ ನಡೆಸಿದರು. ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿ ಅಭಿವೃದ್ಧಿ ಕಾಮಗಾರಿಗೆ ಸಹಕರಿಸುವಂತೆ ಕೋರಿಕೊಂಡರು.

ಗಾಯತ್ರಿ ವೃತ್ತದ ಕಟ್ಟಡದ ಮಾಲೀಕರೊಬ್ಬರು ನ್ಯಾಯಾಲಯದ ತಡೆಯಾಜ್ಞೆಯ ಸಮರ್ಥನೆ ನೀಡಿದ್ದಕ್ಕೆ ಶಾಸಕರು ಸಿಡಿಮಿಡಿಗೊಂಡರು. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವ ಸ್ಥಳವನ್ನು ಬಿಟ್ಟು ಉಳಿದ ಭಾಗವನ್ನು ತೆರವುಗೊಳಿಸಲು ಸ್ಥಳಕ್ಕೆ ಜೆಸಿಬಿ ತರಿಸಿದರು.

‘ಗಾಯತ್ರಿ ವೃತ್ತವನ್ನು ವಿಶಾಲವಾಗಿ ನಿರ್ಮಿಸಲು ತೀರ್ಮಾನಿಸಲಾಗಿದೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುವ ಈ ಮಾರ್ಗ ಎಲ್ಲರಿಗೂ ಅನುಕೂಲವಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಯಿಂದ ಕೈಗೊಂಡ ಅಭಿವೃದ್ಧಿ ಕಾಮಗಾರಿಗೆ ಕಟ್ಟಡಗಳ ಮಾಲೀಕರಿಂದ ಸಹಕಾರ ಸಿಗುತ್ತಿಲ್ಲ’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.