ಶುಕ್ರವಾರ, ಮೇ 20, 2022
19 °C
358 ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಿಜೆಪಿಯ ಕೆ.ಎಸ್‌.ನವೀನ್‌

ಮೂರನೇ ಪ್ರಯತ್ನದಲ್ಲಿ ಮೇಲ್ಮನೆಗೆ ಪ್ರವೇಶ ಪಡೆದ ಕೆ.ಎಸ್‌.ನವೀನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಚಿತ್ರದುರ್ಗ–ದಾವಣಗೆರೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕೆ.ಎಸ್‌.ನವೀನ್‌ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಬಿ.ಸೋಮಶೇಖರ ಅವರನ್ನು 358 ಮತಗಳ ಅಂತರದಿಂದ ಮಣಿಸಿದ್ದಾರೆ.

ಕಳೆದ ಬಾರಿ ಈ ಕ್ಷೇತ್ರವನ್ನು ಕಾಂಗ್ರೆಸ್‌ ಗೆದ್ದಿತ್ತು. ಕಾಂಗ್ರೆಸ್‌ ಕೋಟೆಗೆ ಲಗ್ಗೆಯಿಟ್ಟ ಬಿಜೆಪಿ ವಿಜಯದ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯ ಕೆ.ಎಸ್‌.ನವೀನ್‌ 2,629 ಹಾಗೂ ಕಾಂಗ್ರೆಸ್‌ನ ಬಿ.ಸೋಮಶೇಖರ 2,271 ಮತಗಳನ್ನು ಗಳಿಸಿದರು. ಮೊದಲ ಪ್ರಾಶಸ್ತ್ಯದ ಮತಗಳಿಂದಲೇ ನವೀನ್‌ ಅವರು ಗೆಲುವು ದಾಖಲಿಸಿದರು. ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ 16 ಮತಗಳನ್ನಷ್ಟೇ ಪಡೆಯುವಲ್ಲಿ ಶಕ್ತರಾದರು. 144 ಮತಗಳು ತಿರಸ್ಕೃತಗೊಂಡವು.

ಡಿ.10ರಂದು ನಡೆದ ಮತದಾನದಲ್ಲಿ ಕ್ಷೇತ್ರ ವ್ಯಾಪ್ತಿಯ 5,066 ಮತಗಳಲ್ಲಿ 5,060 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ 4,916 ಮತಗಳು ಸಿಂಧುವಾಗಿದ್ದವು. ಪ್ರಥಮ ಪ್ರಾಶಸ್ತ್ಯದ 2,459 ಮತ ಪಡೆದ ಅಭ್ಯರ್ಥಿಯ ಗೆಲುವು ನಿರ್ಧಾರವಾಗುತ್ತದೆ ಎಂಬುದನ್ನು ಚುನಾವಣಾಧಿಕಾರಿಗಳು ಮನವರಿಕೆ ಮಾಡಿಕೊಟ್ಟರು. ಬಿಜೆಪಿ ಅಭ್ಯರ್ಥಿ ಅರ್ಧಕ್ಕಿಂತ ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತ ಪಡೆಯುತ್ತಿದ್ದಂತೆ ಬಿಜೆಪಿ ಪಾಳೆಯದಲ್ಲಿ ಹರ್ಷದ ಹೊನಲು ಹರಿಯಲಾರಂಭಿಸಿತು. ಹೀಗಾಗಿ, ದ್ವಿತೀಯ ಪ್ರಾಶಸ್ತ್ಯದ ಮತ ಎಣಿಕೆಯ ಪ್ರಮೆಯ ಸೃಷ್ಟಿಯಾಗಲಿಲ್ಲ. ಸೋಲು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್‌ ಅಭ್ಯರ್ಥಿ ಬಿ.ಸೋಮಶೇಖರ ಹಾಗೂ ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ಮತ ಎಣಿಕೆ ಕೇಂದ್ರದಿಂದ ಹೊರನಡೆದರು.

ತ್ವರಿತವಾಗಿ ನಡೆದ ಎಣಿಕೆ
ನಿಗದಿಯಂತೆ ಬೆಳಿಗ್ಗೆ 8ಕ್ಕೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಯಿತು. ಇದಕ್ಕೂ ಮೊದಲೇ ಚುನಾವಣಾ ವೀಕ್ಷಕ ನವೀನ್‌ ರಾಜ್‌ ಸಿಂಗ್‌ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರು ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದರು. ಇವರ ಸಮ್ಮುಖದಲ್ಲಿ ಬೆಳಿಗ್ಗೆ 7.45ಕ್ಕೆ ಭದ್ರತಾ ಕೊಠಡಿಯನ್ನು ತೆರೆಯಲಾಯಿತು. ಬಳಿಕ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಕೊಠಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು.

ಮತಪೆಟ್ಟಿಗೆಗಳನ್ನು ಪರಿಶೀಲಿಸಿ ಎಲ್ಲ ಮತಗಳನ್ನು ಒಟ್ಟಿಗೆ ಸುರಿಯಲಾಯಿತು. ಎಲ್ಲ ಮತಪತ್ರಗಳನ್ನು ಮಿಶ್ರಣ ಮಾಡಲಾಯಿತು. 25 ಮತಪತ್ರ ಇರುವ 202 ಬಂಡಲ್‌ಗಳನ್ನು ಮಾಡಲಾಯಿತು. ಅದಾಗಲೇ ವ್ಯವಸ್ಥೆ ಮಾಡಿಕೊಂಡಿದ್ದ 14 ಟೇಬಲ್‌ಗಳಿಗೆ ಇವುಗಳನ್ನು ಹಂಚಿಕೆ ಮಾಡಲಾಯಿತು. ಇದಕ್ಕೆ ಸುಮಾರು ಎರಡು ಗಂಟೆ ಸಮಯ ಹಿಡಿಯಿತು.

‘ಬೆಳಿಗ್ಗೆ 8ಕ್ಕೆ ಮತ ಎಣಿಕೆ ಪ್ರಕ್ರಿಯೆ ಆರಂಭಿಸಿದೆವು. ಬೆಳಿಗ್ಗೆ 10ರವರೆಗೆ ಮತ ಪತ್ರಗಳ ವಿಂಗಡಣೆ, ಸಿದ್ಧತೆಗೆ ಸಮಯ ಹಿಡಿಯಿತು. ಬೆಳಿಗ್ಗೆ 10.10ರಿಂದ ಮತ ಎಣಿಕೆ ನಡೆಸಲಾಯಿತು. 11.30ರ ಹೊತ್ತಿಗೆ ಎಣಿಕೆ ಪ್ರಕ್ರಿಯೆ ಸಂಪೂರ್ಣ ಮುಕ್ತಾಯವಾಗಿತ್ತು. ಕೆಲ ಗೊಂದಲಗಳಿಗೆ ಆಯೋಗದ ಸ್ಪಷ್ಟನೆ ಪಡೆಯಬೇಕಿದ್ದರಿಂದ ಫಲಿತಾಂಶ ಘೋಷಣೆ ಕೊಂಚ ವಿಳಂಬವಾಯಿತು’ ಎಂದು ಜಿಲ್ಲಾ ಚುನಾವಣಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮಾಹಿತಿ ನೀಡಿದರು.

ಒಬ್ಬ ಅಭ್ಯರ್ಥಿ ಮತ ಮತ್ತೊಬ್ಬರಿಗೆ
ಒಬ್ಬ ಅಭ್ಯರ್ಥಿ ಪಡೆದ ಮತವನ್ನು ಮತ್ತೊಬ್ಬ ಅಭ್ಯರ್ಥಿಯ ಪೆಟ್ಟಿಗೆಗೆ ಹಾಕಿದ ಪರಿಣಾಮ ಅಭ್ಯರ್ಥಿಯ ಏಜೆಂಟರು ಹಾಗೂ ಮತ ಏಣಿಕೆ ಸಿಬ್ಬಂದಿಯ ನಡುವೆ ವಾಗ್ವಾದ ನಡೆಯಿತು. ದಾವಣಗೆರೆ ಜಿಲ್ಲಾಧಿಕಾರಿ ಮಹಂತೇಶ ಬೀಳಗಿ ಅವರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.

ಮತ ಎಣಿಕೆಗೆ 18 ಮೇಲ್ವಿಚಾಕರು ಹಾಗೂ 36 ಸಹಾಯಕರನ್ನು ನಿಯೋಜಿಸಲಾಗಿತ್ತು. ಪ್ರತಿ ಟೇಬಲ್‌ಗೂ ಅಭ್ಯರ್ಥಿಗಳ ಹೆಸರಿನ ಪೆಟ್ಟಿಗೆ ಇಡಲಾಗಿತ್ತು. ಪಡೆದ ಮತದ ಚೀಟಿಯನ್ನು ನಿಗದಿತ ಪೆಟ್ಟಿಗೆಗೆ ಹಾಕಬೇಕಿತ್ತು. ಕಣ್ತಪ್ಪಿನಿಂದಾಗಿ ಎಣಿಕೆ ಸಿಬ್ಬಂದಿ ಮತ್ತೊಬ್ಬರ ಪೆಟ್ಟಿಗೆಗೆ ಮತಪತ್ರವನ್ನು ಹಾಕಿದ್ದರು. ಮತ ಪಡೆದ ಅಭ್ಯರ್ಥಿಯ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದಾಗ ತಪ್ಪು ಸರಿಪಡಿಸಲು ಮುಂದಾದರು. ಇದರಿಂದ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಮತ ಏಣಿಕೆ ಕೇಂದ್ರಕ್ಕೆ ಭದ್ರತೆ
ಮತ ಎಣಿಕೆ ಕೇಂದ್ರಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಕೇಂದ್ರದ ನೂರು ಮೀಟರ್‌ ದೂರದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು. ಎರಡು ಸುತ್ತಿನಲ್ಲಿ ಪರಿಶೀಲಿಸಿ ಪ್ರವೇಶ ಕಲ್ಪಿಸಲಾಗುತ್ತಿತ್ತು.

ಮತ ಎಣಿಕೆಗೆ ನಿಗದಿಯಾಗಿದ್ದ ಸಿಬ್ಬಂದಿ, ರಾಜಕೀಯ ಪಕ್ಷದ ಏಜೆಂಟರು ಹಾಗೂ ಪೊಲೀಸರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಗುರುತಿನ ಚೀಟಿಯನ್ನು ಪರಿಶೀಲಿಸಿ ಪ್ರವೇಶ ನೀಡಲಾಗುತ್ತಿತ್ತು. ಮತ ಎಣಿಕೆ ಮಾಡುತ್ತಿದ್ದ ಎರಡು ಕೊಠಡಿಗೆ ವಿಶೇಷ ಭದ್ರತೆ ಕಲ್ಪಿಸಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕ ಸ್ಥಳದಲ್ಲಿದ್ದು, ಭದ್ರತೆ ಪರಿಶೀಲಿಸುತ್ತಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಇದ್ದರು. 

ಖಾಲಿ ಮತಪತ್ರ ನೀಡಿದ ಮತದಾರ
ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮಾಡಿರುವ ಮತದಾನದಲ್ಲಿ 144 ಮತಗಳು ತಿರಸ್ಕೃತವಾಗಿವೆ. ಇದರಲ್ಲಿ ನಾಲ್ವರು ಮತದಾರರು ಬ್ಯಾಲೆಟ್‌ಗಳಲ್ಲಿ ಪ್ರಾಶಸ್ತ್ಯ ನೀಡದೇ ಖಾಲಿ ಬಿಟ್ಟು ಗಮನ ಸೆಳೆದಿದ್ದಾರೆ.

ಪ್ರಬುದ್ಧ ಮತದಾರರು ಚಲಾವಣೆ ಮಾಡಿದ ಮತಗಳೂ ಹಲವು ಕಾರಣಗಳಿಗೆ ಅನುರ್ಜಿತಗೊಂಡಿವೆ. ಇವುಗಳಲ್ಲಿ ಬಹುತೇಕರು ಪ್ರಾಶಸ್ತ್ಯ ನೀಡುವಲ್ಲಿ ಎಡವಿದ್ದಾರೆ. ಇನ್ನೂ ಕೆಲವರು ಅನಗತ್ಯ ಗೆರೆ, ಸರಿ, ತಪ್ಪು ಸಂಕೇತಗಳನ್ನು ನೀಡಿದ್ದಾರೆ.

‘ಪ್ರಾಶಸ್ತ್ಯ ನೀಡುವಾಗ ಕೆಲವರು ತಪ್ಪು ಮಾಡಿದ್ದಾರೆ. ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೆ ಪ್ರಥಮ ಇಲ್ಲವೇ ದ್ವಿತೀಯ ಪ್ರಾಶಸ್ತ್ಯ ನೀಡಿದ್ದಾರೆ. ಇನ್ನು ಕೆಲವರು ಅಡ್ಡ ಗೆರೆ ಹಾಕಿದ್ದಾರೆ. ಕೆಲ ಸಂಕೇತಗಳನ್ನು ನಮೂದಿಸಿದ್ದಾರೆ. ನಾಲ್ಕೈದು ಬ್ಯಾಲೇಟ್‌ಗಳು ಖಾಲಿ ಇದ್ದವು’ ಎಂದು ಜಿಲ್ಲಾ ಚುನಾವಣಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ತಿಳಿಸಿದರು.

ಪ್ರಥಮ ಪ್ರಾಶಸ್ತ್ಯಕ್ಕೆ ಆದ್ಯತೆ
ಪ್ರಾಶಸ್ತ್ಯ ಮತದಾನ ಪದ್ಧತಿಯ ಚುನಾವಣೆಯ ಫಲಿತಾಂಶ ಅತಿ ಶೀಘ್ರ ಪ್ರಕಟಗೊಂಡ ನಿದರ್ಶನ ವಿರಳ. ಆದ್ಯತೆ ಬದಲಾಗಿ ಅಭ್ಯರ್ಥಿ ಗೆಲುವಿನ ಲೆಕ್ಕಾಚಾರವೂ ಉಲ್ಟಾ ಆಗಿರುವ ಉದಾಹರಣೆ ಇವೆ. ಆದರೆ, ಈ ಬಾರಿ ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಅಭ್ಯರ್ಥಿ ಗೆಲುವು ಘೋಷಣೆಯಾಯಿತು.

ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ ನೀಡುವ ಅವಕಾಶ ಮತದಾರರಿಗೆ ಇತ್ತು. ಕಣದಲ್ಲಿರುವ ಮೂವರು ಅಭ್ಯರ್ಥಿಗಳಿಗೆ ಪ್ರಥಮ, ದ್ವಿತೀಯ ಪ್ರಾಶಸ್ತ್ಯ ನೀಡಬಹುದಾಗಿತ್ತು. ಹಿಂದಿನ ಚುನಾವಣೆಯ ಅನುಭವದಿಂದ ಪಾಠ ಕಲಿತ ರಾಜಕೀಯ ಪಕ್ಷಗಳು ತಮ್ಮ ಮತದಾರರಿಗೆ ಪ್ರಥಮ ಪ್ರಾಶಸ್ತ್ಯ ನೀಡಲು ಮಾತ್ರ ಸೂಚಿಸಿದ್ದವು. ಈ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು