ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಿಗ ಸಮುದಾಯಕ್ಕೆ ಒಳಮೀಸಲು ಕೊಡಲೇಬೇಕು

ಮೀಸಲಾತಿ ನೀಡದಿದ್ದರೆ ಪಕ್ಷಕ್ಕೆ ರಾಜೀನಾಮೆ: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಶಂಕರಪ್ಪ
Last Updated 21 ನವೆಂಬರ್ 2020, 13:57 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕೊಡಲೇಬೇಕು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ತ್ವರಿತವಾಗಿ ಮುಂದಾಗಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಶಂಕರಪ್ಪ ಒತ್ತಾಯಿಸಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಕೊಟ್ಟ ಮಾತು ತಪ್ಪಬಾರದು. ಭರವಸೆ ಈಡೇರಿಸಲು ಸದಾಶಿವ ಆಯೋಗದ ವರದಿಗೆ ಅನುಮೋದನೆ ನೀಡಿ, ಸಾಮಾಜಿಕ ನ್ಯಾಯ ಕಲ್ಪಿಸಬೇಕು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ದಶಕಗಳ ಹೋರಾಟದ ಬಳಿಕ ಕತ್ತಲೆಯಲ್ಲಿದ್ದ ಸಮುದಾಯಕ್ಕೆ ಭರವಸೆಯ ಬೆಳಕು ಕಾಣಿಸಿದೆ. ಆದರೆ, ಸಂಖ್ಯೆ ಕಡಿಮೆ ಇದ್ದು, ಹೆಚ್ಚು ಲಾಭ ಪಡೆಯುತ್ತಿರುವ ಕೆಲವರು ಬೇಡ ಎನ್ನುತ್ತಿರುವುದು ನೋವಿನ ಸಂಗತಿ. ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಸಿಗಬೇಕಿದೆ. ಅದಕ್ಕಾಗಿ ಹೋರಾಟ ಮಾಡಿದ್ದೇವೆ. ಸರ್ಕಾರ ಇದನ್ನು ಈಡೇರಿಸದಿದ್ದರೆ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಹಾವನೂರು ಆಯೋಗದ ವರದಿ ಅವೈಜ್ಞಾನಿಕ ಎಂದು ಈ ಹಿಂದೆ ತಿರಸ್ಕರಿಸಿದರು. ಈಗ ಸದಾಶಿವ ಆಯೋಗದ ವರದಿ ಕುರಿತು ಕೆಲವರು ಅಪಸ್ವರ ಎತ್ತುತ್ತಿದ್ದಾರೆ. ಇದನ್ನು ಶಿಫಾರಸು ಮಾಡಿ, ನ್ಯಾಯಸಮ್ಮತ ಮೀಸಲಾತಿ ಸೌಲಭ್ಯ ದೊರೆಯುವಂತೆ ಮುಖ್ಯಮಂತ್ರಿ ಕ್ರಮ ಕೈಗೊಂಡರೆ, ಸರ್ಕಾರಕ್ಕೆ ಉತ್ತಮ ಹೆಸರು ಬರಲಿದೆ. ತಿರಸ್ಕರಿಸಿದರೆ, ಸರ್ಕಾರದ ವಿರುದ್ಧ ಜನರೇ ದಂಗೆ ಎದ್ದರೂ ಅಚ್ಚರಿಯಿಲ್ಲ’ ಎಂದರು.

‘ಹಾಲಿ, ಮಾಜಿ ಶಾಸಕರು ಮತ್ತು ಸಚಿವರು ಕೂಡ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಆದರೆ, ಬೇಡಿಕೆ ಪರವಾಗಿರುವ ಜನಪ್ರತಿನಿಧಿಗಳ ದನಿಗೆ ಸ್ಪಂದನ ಇಲ್ಲವಾಗಿದೆ. ಉಗ್ರ ಹೋರಾಟಕ್ಕೂ ಸಜ್ಜಾಗಬೇಕಿದೆ. ವಿರೋಧಿಸುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಕರೆದೊಯ್ಯಬೇಕಿದೆ’ ಎಂದು ಸಮುದಾಯದವರಿಗೆ ಸಲಹೆ ನೀಡಿದರು.

ಮುಖಂಡ ಹುಲ್ಲೂರು ಕುಮಾರ್, ‘ಸಮುದಾಯದ ಬೇಡಿಕೆ ಈಡೇರಿಸುವಲ್ಲಿ ವಿಫಲರಾದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರು ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ನಮಗೆ ನ್ಯಾಯ ಕೊಡದಿದ್ದರೆ ಬಿಜೆಪಿ ದೊಡ್ಡ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಮುಖಂಡ ಜಗನ್ನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT