ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆರವಣಿಗೆಯಲ್ಲೂ ‘ಮೋದಿ’ ಜಪ; ಮಾರ್ಗದುದ್ದಕ್ಕೂ ಕಾರ್ಯಕರ್ತರ ಹರ್ಷೋದ್ಗಾರ

* ಮೆರವಣಿಗೆಗೆ ಸಾಥ್ ನೀಡಿದ ಬಿ.ಎಸ್. ಯಡಿಯೂರಪ್ಪ
Last Updated 26 ಮಾರ್ಚ್ 2019, 15:02 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ ಮಂಗಳವಾರ ಉಮೇದುವಾರಿಕೆ ಸಲ್ಲಿಕೆಗೂ ಮುನ್ನ ನಡೆದ ಬೃಹತ್ ಮೆರವಣಿಗೆಯ ದಾರಿಯುದ್ದಕ್ಕೂ ಪ್ರಧಾನಿ ಮೋದಿ ಜಪ ಮೊಳಗಿತು.

ಕಾರ್ಯಕರ್ತರು ಮೆರವಣಿಗೆ ಪ್ರಾರಂಭದಿಂದ ಮುಕ್ತಾಯವಾಗುವವರೆಗೂ ಮೋದಿ ಪರ ಘೋಷಣೆ ಕೂಗುತ್ತಾ ಸಾಗಿದರು. ಅಪ್ಪಾಜಿ, ಅಪ್ಪಾಜಿ, ಯಡಿಯೂರಪ್ಪಾಜಿ ಎಂಬುದಾಗಿ ಜಯಘೋಷ ಕೂಗುತ್ತಿದ್ದ ಕೆಲವರು ಅವರ ಬಳಿಗೆ ಹೋಗಿ ಪುಷ್ಪ ಎಸೆಯಲು ಮುಂದಾಗುತ್ತಿದ್ದರು.

ಮೋದಿ ಮಾಸ್ಕ್ ಮತ್ತು ಕ್ಯಾಪ್ ಹಾಗೂ ‘ಮೋದಿ ಮತ್ತೊಮ್ಮೆ’ ಟೀ ಶರ್ಟ್ ಧರಿಸಿದ್ದ ಬಿಜೆಪಿಯ ಕೆಲ ಕಾರ್ಯಕರ್ತರು ಗಮನ ಸೆಳೆದರು. ಇನ್ನೂ ಕೆಲವರು ಪಕ್ಷದ ಚಿಹ್ನೆಯುಳ್ಳ ಟೋಪಿ, ಕೊರಳಲ್ಲಿ ಶಾಲು, ಕೈಯಲ್ಲಿ ಕಮಲದ ಬಾವುಟ ಹಿಡಿದು ಸುಡು ಬಿಸಿಲನ್ನು ಲೆಕ್ಕಿಸದೆ, ಮೆರವಣಿಗೆ ಮಾರ್ಗದುದ್ದಕ್ಕೂ ಸಂಚರಿಸಿ ಮೋದಿ, ಅಭ್ಯರ್ಥಿ ಪರವೂ ಘೋಷಣೆ ಕೂಗುತ್ತಾ ಹರ್ಷೋದ್ಘಾರ ವ್ಯಕ್ತಪಡಿಸಿದರು.

ಇಲ್ಲಿನ ಕನಕ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಹೊಳಲ್ಕೆರೆ ರಸ್ತೆ ಮಾರ್ಗವಾಗಿ ಸಾಗಿತು. ಸಂಗೊಳ್ಳಿ ರಾಯಣ್ಣ ವೃತ್ತ, ಬಿ.ಡಿ. ರಸ್ತೆ, ಎಸ್‌ಬಿಐ ವೃತ್ತ, ಪ್ರವಾಸಿ ಮಂದಿರ ಮಾರ್ಗವಾಗಿ ಸಂಚರಿಸಿತು.ಬಿಸಿಲಿನ ಝಳ ಹೆಚ್ಚಾಗಿದ್ದ ಕಾರಣ ಕೆಲವರು ವಿವಿಧೆಡೆ ನೆರಳಿನಲ್ಲಿ ವಿಶ್ರಾಂತಿ ಪಡೆದರು.

ತಮಟೆ, ಡೊಳ್ಳು, ಕಹಳೆ, ಗೊರವರ ಕುಣಿತ, ಗೊಂಬೆ ವೇಷಧಾರಿಗಳು ಸೇರಿ ಕೆಲ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.ಗಾಂಧಿ ವೃತ್ತದ ಸಮೀಪ ಸಂಚರಿಸುವಾಗ ಮೋದಿ, ಅಮಿತ್‌ ಷಾ, ಯಡಿಯೂರಪ್ಪ ಪ್ರತಿಕೃತಿಯನ್ನು ಹಾಕಿಕೊಂಡಿದ್ದ ಕಾರ್ಯಕರ್ತರು ಕೆಲವರನ್ನು ಆಕರ್ಷಿಸಿದರು.

ಮಧ್ಯಾಹ್ನ 2ಗಂಟೆ ಸುಮಾರಿಗೆ ಹಸಿವು ತಾಳಲಾರದೇ ಕೆಲವರು ಇಂದಿರಾ ಕ್ಯಾಂಟಿನ್‌ಗೂ ಲಗ್ಗೆ ಇಟ್ಟರು. ಪುಟಾಣಿ ಮಕ್ಕಳ ಕೈಯಲ್ಲೂ ಬಿಜೆಪಿ ಬಾವುಟಗಳು ರಾರಾಜಿಸಿದವು. ಮಾರ್ಗದಲ್ಲಿ ಕೆಲ ವಿದ್ಯಾರ್ಥಿಗಳು ಯಡಿಯೂರಪ್ಪ, ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಹಾರ ಹಾಕಿ ಕೈಕುಲುಕಿದರು.ರಸ್ತೆಯ ಇಕ್ಕೆಲಗಳಲ್ಲಿ ನಿಂತು ನೋಡುತ್ತಿದ್ದ ಜನತೆ ನಮಸ್ಕರಿಸಿದರೆ, ಅವರತ್ತ ಕೈಬೀಸಿ ಮರು ನಮಸ್ಕರಿಸುತ್ತ ಬಿಎಸ್‌ವೈ ಅವರು ಸಾಗಿದರು.

ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ವೃತ್ತದ ಬಳಿಗೆ ಬಂದಾಗ ಅಲ್ಲಲ್ಲಿ ಚದುರಿದ್ದವರು ಒಂದೆಡೆ ಜಮಾವಣೆಗೊಂಡರು. ಒಟ್ಟಾರೆ ಇಡೀ ಮೆರವಣಿಗೆಯಲ್ಲಿ ಮೋದಿ ಅವರ ಜಪವೇ ಕೇಂದ್ರ ಬಿಂದುವಾಗಿತ್ತು.

ತೆರೆದ ವಾಹನದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಾಸಕರಾದ ಶ್ರೀರಾಮುಲು, ಎಂ. ಚಂದ್ರಪ್ಪ, ಗೂಳಿಹಟ್ಟಿ ಶೇಖರ್, ಪೂರ್ಣಿಮಾ ಶ್ರೀನಿವಾಸ್, ಜಿ.ಎಚ್. ತಿಪ್ಪಾರೆಡ್ಡಿ, ಎನ್.ವೈ. ಗೋಪಾಲಕೃಷ್ಣ, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎ.ಎಚ್. ಶಿವಯೋಗಿಸ್ವಾಮಿ. ಮುಖಂಡರಾದ ಕೆ.ಎಸ್. ನವೀನ್, ಟಿ.ಜಿ. ನರೇಂದ್ರನಾಥ್, ಸಿದ್ದೇಶ್‌ಯಾದವ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT