ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು ಪ.ಪಂ.ಗೆ ಅವಿರೋಧ ಆಯ್ಕೆ ಸಾಧ್ಯತೆ

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆ; ಸಚಿವ ಶ್ರೀರಾಮುಲು ಸಮ್ಮುಖದಲ್ಲಿ ಸಂಧಾನ ಸಭೆ
Last Updated 6 ಸೆಪ್ಟೆಂಬರ್ 2022, 4:17 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ತೆರವಾಗಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸೆಪ್ಟೆಂಬರ್‌ 6 ರಂದು ಚುನಾವಣೆ ನಡೆಯಲಿದೆ.

ಒಪ್ಪಂದದಂತೆ ಅಧ್ಯಕ್ಷ ಪಿ. ಲಕ್ಷ್ಮಣ್ ಹಾಗೂ ಉಪಾಧ್ಯಕ್ಷೆ ಶುಭಾ ಅವರು ರಾಜೀನಾಮೆ ನೀಡಿದ ಕಾರಣ ಸ್ಥಾನಗಳು ತೆರವಾಗಿವೆ. ಒಟ್ಟು 16 ಸದಸ್ಯ ಸ್ಥಾನಗಳನ್ನು ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ 8 ಬಿಜೆಪಿ, 6 ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಇದ್ದಾರೆ.

ಕಳೆದ ಅವಧಿಯಲ್ಲಿ ಇಬ್ಬರು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದ್ದರು. ಜತೆಗೆ ಲೋಕಸಭಾ ಸದಸ್ಯ ಎ. ನಾರಾಯಣಸ್ವಾಮಿ ಮತ್ತು ಸಚಿವ ಬಿ. ಶ್ರೀರಾಮುಲು ಅವರ ಮತ ಸೇರಿ ಬಿಜೆಪಿಗೆ ಈ ಬಾರಿಯೂ ಬಹುಮತ ಇರುವ ಕಾರಣ ಬಿಜೆಪಿ ಅಧಿಕಾರ ಪಡೆಯುವುದು ಖಚಿತವಾಗಿದೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯಕ್ಕೆ ಮೀಸಲಿರುವುದರಿಂದ ಪೈಪೋಟಿ ಹೆಚ್ಚಿದೆ. ಅಧ್ಯಕ್ಷ ಸ್ಥಾನಕ್ಕೆ ಟಿ.ಟಿ. ರವಿಕುಮಾರ್, ರೂಪಾ ವಿಜಯಕುಮಾರ್, ತಿಪ್ಪೇಸ್ವಾಮಿ, ಪಕ್ಷೇತರ ಸದಸ್ಯ ಮಂಜಣ್ಣ ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಸದಸ್ಯ ಮಂಜಣ್ಣ, ಭಾಗ್ಯಮ್ಮ ಮತ್ತು ಲಕ್ಷ್ಮೀದೇವಿ ಹೆಸರುಗಳು ಕೇಳಿಬರುತ್ತಿವೆ.

ಗೊಂದಲ ಆಗಬಾರದು ಎಂಬ ಕಾರಣಕ್ಕಾಗಿ ಭಾನುವಾರ ಸಚಿವ ಬಿ. ಶ್ರೀರಾಮುಲು ಅವರ ಬಳ್ಳಾರಿಯ ನಿವಾಸದಲ್ಲಿ ಸಂಧಾನ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸಾಮಾನ್ಯ ಮೀಸಲಾತಿ ಬರುವುದು ಕಡಿಮೆಯಾದ್ದರಿಂದ ಲಿಂಗಾಯತ ಜನಾಂಗಕ್ಕೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಿ ಎಂಬ ಮನವಿ ಬಂದಿದ್ದು, ಲಿಂಗಾಯತ ಸಮುದಾಯದವರಾದ ಟಿ.ಟಿ. ರವಿಕುಮಾರ್ ಮತ್ತು ರೂಪಾ ವಿಜಯಕುಮಾರ್ ಮಧ್ಯೆ ಅಂತಿಮ ಹಣಾಹಣಿ ಏರ್ಪಟ್ಟಿದೆ ಎನ್ನಲಾಗಿದೆ.

ಅಧ್ಯಕ್ಷ ಸ್ಥಾನ ಕೊಡದಿದ್ದಲ್ಲಿ ಉಪಾಧ್ಯಕ್ಷ ಸ್ಥಾನ ನೀಡಲೇಬೇಕು ಎಂದು ಪಕ್ಷೇತರ ಸದಸ್ಯ ಮಂಜಣ್ಣ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಸ್ಪರ್ಧೆ ಮಾಡಲಿದೆ ಎಂದು ಕಾಂಗ್ರೆಸ್ ಸದಸ್ಯ ಎಸ್. ಖಾದರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT