ಮೊಳಕಾಲ್ಮುರು: ಸ್ಥಳೀಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ 2ನೇ ಅಧಿಕಾರ ಅವಧಿಗೆ ಮೀಸಲಾತಿ ಪ್ರಕಟವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಅಧ್ಯಕ್ಷ ಸ್ಥಾನವು ಸಾಮಾನ್ಯ (ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಒಟ್ಟು 16 ಸದಸ್ಯ ಬಲದ ಪಂಚಾಯಿತಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಪಡೆಯುವ ಮೂಲಕ ಗಮನ ಸೆಳೆದಿತ್ತು.
2018ರ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಮತ ಎಣಿಕೆ ದಿನದಂದು ಇಬ್ಬರು ಪಕ್ಷೇತರ ಸದಸ್ಯರಾದ ಸವಿತಾ ಅರ್ಜುನ್ ಹಾಗೂ ಎಸ್.ಮಂಜಣ್ಣ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಈ ಮೂಲಕ ಸಂಸದ ಗೋವಿಂದ ಕಾರಜೋಳ ಮತ ಸೇರಿ 11 ಸದಸ್ಯರ ಬಲಾಬಲವನ್ನು ಹಾಗೂ ಕಾಂಗ್ರೆಸ್ 6 ಸದಸ್ಯರ ಬಲಾಬಲ ಜತೆಗೆ ಶಾಸಕ ಎನ್.ವೈ. ಗೋಪಾಲಕೃಷ್ಣ ಮತ ಸೇರಿ 7 ಸದಸ್ಯ ಸಂಖ್ಯೆ ಹೊಂದಿದೆ.
ನೂತನ ಮೀಸಲಾತಿ ಪ್ರಕಾರ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರೂಪಾ ವಿನಯ್ ಕುಮಾರ್, ಸವಿತಾ ಅರ್ಜುನ್, ಲಕ್ಷ್ಮಿದೇವಮ್ಮ, ಭಾಗ್ಯಮ್ಮ ಶುಭಾ ಪೃಥ್ವಿರಾಜ್ ಮತ್ತು ಲೀಲಾವತಿ ಇದ್ದಾರೆ. ಶುಭಾ ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದು, ಉಳಿದ ಐದು ಜನರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಪುರುಷರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದ್ದು, 3 ಮಂದಿ ಸದಸ್ಯರಲ್ಲಿ ಟಿ.ಟಿ. ರವಿಕುಮಾರ್, ಪಿ. ಲಕ್ಷ್ಮಣ್ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದು, 10ನೇ ವಾರ್ಡ್ ಸದಸ್ಯ ತಿಪ್ಪೇಸ್ವಾಮಿಗೆ ನೀಡುವ ಸಾಧ್ಯತೆ ಹೆಚ್ಚಿದೆ.
ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿಜಯಮ್ಮ, ಚಿತ್ತಮ್ಮ ಮತ್ತು ಪದ್ಮಾವತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್. ಖಾದರ್, ಅಬ್ದುಲ್ಲಾ, ನಬೀಲ್ ಇದ್ದಾರೆ.
2019ರ ಮೇ 31ರಂದು ಚುನಾವಣೆ ನಡೆದಿದ್ದು, ಪ್ರಥಮ ಮೀಸಲು ವಿಳಂಬದಿಂದಾಗಿ 2020ರ ನ.30ರಂದು ಹೊಸ ಸಮಿತಿ ಅಧಿಕಾರಕ್ಕೆ ಬಂದಿತ್ತು. 30 ತಿಂಗಳ ಮೊದಲ ಅಧಿಕಾರವಧಿಯು 2023ರ ಮೇ 5ರಂದು ಕೊನೆಯಾಯಿತು. ಅಲ್ಲಿಂದ 15 ತಿಂಗಳು ಮೀಸಲಾತಿ ಪ್ರಕಟವಾಗದ ಕಾರಣ ಆಡಳಿತಾಧಿಕಾರಿಯಾಗಿ ತಹಶೀಲ್ದಾರ್ ಕಾರ್ಯ ನಿರ್ವಹಿಸಿದರು. ಹೊಸ ಸಮಿತಿ ಆಯ್ಕೆಗೆ ಚುನಾವಣಾ ದಿನಾಂಕ ಪ್ರಕಟವಾಗಬೇಕಿದೆ.
ಪಟ್ಟಣ ಪಂಚಾಯಿತಿ ಅಧಿಕಾರಕ್ಕೆ ಬಂದ ನಂತರ ಮೊದಲ ಸಾಮಾನ್ಯ ಸಭೆಯಿಂದ 5 ವರ್ಷದವರೆಗೆ ಅದಸ್ಯರ ಅಧಿಕಾರ ಇರುತ್ತದೆ. ಮೀಸಲಾತಿ ವಿಳಂಬ ಸರ್ಕಾರ ಮಟ್ಟದ ತಾಂತ್ರಿಕ ಸಮಸ್ಯೆಯಾಗಿದೆ. ಈ ಸಮಯದಲ್ಲಿ ಆಡಳಿತಾಧಿಕಾರಿ ನೇಮಕ ಇರುತ್ತದೆ. ಪರಿಣಾಮ ಒಟ್ಟು ಅವಧಿಯಲ್ಲಿ ಮೀಸಲಾತಿ ವಿಳಂಬ ಅವಧಿ ಕಡಿತವಾಗುವುದಿಲ್ಲ. ಹೀಗಾಗಿ ಈಗ ಬರುವ ಹೊಸಬರಿಗೆ ಪೂರ್ಣ 30 ತಿಂಗಳು ಅಧಿಕಾರ ಪೂರ್ತಿಯಾಗಿ ಸಿಗುವುದಿಲ್ಲ ಎಂದು ತಹಶೀಲ್ದಾರ್ ಟಿ. ಜಗದೀಶ್ ವಿವರಿಸಿದರು.
ಸಂಸದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂಎಲ್‌ಸಿ ಕೆ.ಎಸ್. ನವೀನ್ ಮತ್ತು ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದು ಇದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸಲಿದೆ.ಪಿ.ಎಂ. ಮಂಜುನಾಥ್ ಬಿಜೆಪಿ ಮಂಡಲ ಅಧ್ಯಕ್ಷ
ಶಾಸಕ ಎನ್.ವೈ. ಗೋಪಾಲಕೃಷ್ಣ ಅವರ ಬಳಿ ಚರ್ಚಿಸಿದ ನಂತರ ಕಾಂಗ್ರೆಸ್ ಅಧಿಕಾರ ಪಡೆಯಲು ಮಾಡಬಹುದಾದ ಕಾರ್ಯತಂತ್ರಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದುಟಿ.ಕೆ. ಕಲೀಂವುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.