ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಡಬ್ಲಿಂಗ್‌ ದಂಧೆ: ನಗರಸಭಾ ಸದಸ್ಯ, ಇಬ್ಬರು ಪತ್ನಿಯರು ಸೇರಿ 9 ಆರೋಪಿಗಳ ಬಂಧನ

ನಗರಸಭಾ ಸದಸ್ಯ, ಇಬ್ಬರು ಪತ್ನಿಯರು ಸೇರಿ 9 ಆರೋಪಿಗಳ ಬಂಧನ
Last Updated 22 ಡಿಸೆಂಬರ್ 2021, 16:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಣ ದ್ವಿಗುಣ (ಮನಿ ಡಬ್ಲಿಂಗ್‌) ದಂಧೆಯನ್ನು ಬಯಲಿಗೆ ಎಳೆದಿರುವ ಬಡಾವಣೆ ಠಾಣೆಯ ಪೊಲೀಸರು ನಗರಸಭಾ ಸದಸ್ಯ ಚಂದ್ರಶೇಖರ್‌ (47) ಹಾಗೂ ಅವರ ಇಬ್ಬರು ಪತ್ನಿಯರು ಸೇರಿ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ. ಡಬ್ಲಿಂಗ್‌ ದಂಧೆಯ ಬಹುದೊಡ್ಡ ಜಾಲವೊಂದು ಬೆಳಕಿಗೆ ಬಂದಿದೆ.

ನಗರಸಭೆಯ ನಾಲ್ಕನೇ ವಾರ್ಡ್‌ ಸದಸ್ಯ ಚಂದ್ರಶೇಖರ್‌, ರಾಜಕೀಯ ಪ್ರಭಾವ ಹೊಂದಿದ್ದಾರೆ. ಕುಟುಂಬದ ಸದಸ್ಯರು ಹಾಗೂ ರಾಜ್ಯದ ಹಲವೆಡೆ ಮಧ್ಯವರ್ತಿಗಳನ್ನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಪತಿಯ ದಂಧೆಗೆ ನೆರವು ನೀಡುತ್ತಿದ್ದ ಚಂದ್ರಶೇಖರ್‌ ಪತ್ನಿ ತೇಜಸ್ವಿನಿ (44), ಮತ್ತೊಬ್ಬ ಪತ್ನಿ ದೇವಕಿ (46), ಮಧ್ಯವರ್ತಿಗಳಾದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕೋಡಿಹಳ್ಳಿಯ ಕೆ.ಟಿ.ಮೂರ್ತಿ (62), ಕೆ.ಟಿ.ನವೀನ್‌ (32), ಹೋರಿ ತಿಮ್ಮನಹಳ್ಳಿಯ ಪ್ರದೀಪ್‌ (36), ಚಿತ್ರದುರ್ಗದ ಎಸ್.ಕೆ.ರಾಜೇಶ (50), ಬೆಂಗಳೂರಿನ ವರುಣ್ ಕಾರ್ತಿಕ್ (21), ಬಾಬು (51) ಬಂಧಿತರು. ಆರೋಪಿಗಳಿಂದ ₹ 2.05 ಲಕ್ಷ ನಗದು ಹಾಗೂ ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

₹ 6 ಲಕ್ಷ ಪಡೆದು ವಂಚನೆ

‘ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡ ಬೆಲವಂಗಲದ ನಿವಾಸಿ ನಾಗರಾಜ ಎಂಬುವರಿಗೆ ಕೋಡಿಹಳ್ಳಿಯ ಮೂರ್ತಿ ಹಾಗೂ ಮಂಜುನಾಥ್‌ ಪರಿಚಿತರು. ಹಣವನ್ನು ದ್ವಿಗುಣ ಮಾಡುವ ದಂಧೆಯಲ್ಲಿ ತೊಡಗಿದ್ದ ಇವರು ನಾಗರಾಜ ಅವರನ್ನು ಚಂದ್ರಶೇಖರ್‌ಗೆ ಪರಿಚಯಿಸಿದ್ದಾರೆ. ಹಣ ದ್ವಿಗುಣದ ಆಸೆಯಲ್ಲಿ ದೂರುದಾರರು ₹ 6 ಲಕ್ಷ ತೆಗೆದುಕೊಂಡು ಚಿತ್ರದುರ್ಗ ಕಾರಾಗೃಹ ರಸ್ತೆಗೆ ಬಂದಿದ್ದಾರೆ. ಅಸಲಿ ಹಣವನ್ನು ಪಡೆದು ಚೀಲವೊಂದನ್ನು ನೀಡಿದ ಚಂದ್ರಶೇಖರ್‌, ₹ 18 ಲಕ್ಷ ಇರುವುದಾಗಿ ನಂಬಿಸಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.

‘ಚಂದ್ರಶೇಖರ್‌ ನೀಡಿದ ಹಣದ ಬಗ್ಗೆ ಅನುಮಾನಗೊಂಡು ಅಸಲಿ ಹಣವನ್ನು ಮರಳಿಸುವಂತೆ ನಾಗರಾಜ ಕೋರಿಕೊಂಡಿದ್ದಾರೆ. ಮೋಸ ಹೋಗಿರುವುದು ಖಚಿತವಾದ ಬಳಿಕ ನಾಗರಾಜ ಎಂಬುವರು ಬಡಾವಣೆ ಠಾಣೆಗೆ ಡಿ.6ರಂದು ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದರು’ ಎಂದು ವಿವರಿಸಿದ್ದಾರೆ.

ಕಪ್ಪು ಕಾಗದ ತೋರಿಸಿ ಮೋಸ

‘ಡಬ್ಲಿಂಗ್‌ ದಂಧೆಗೆ ಹಲವು ಜಿಲ್ಲೆಯಲ್ಲಿ ಚಂದ್ರಶೇಖರ್‌ ಮಧ್ಯವರ್ತಿಗಳನ್ನು ಇಟ್ಟುಕೊಂಡಿದ್ದಾರೆ. ಇವರು ಗಿರಾಕಿಗಳನ್ನು ಕರೆತಂದು ಪರಿಚಯಿಸುತ್ತಾರೆ. ₹ 1 ಲಕ್ಷ ಅಸಲಿ ನೋಟು ನೀಡಿದರೆ ₹ 3 ಲಕ್ಷ ಮರಳಿಸುವುದಾಗಿ ನಂಬಿಸುತ್ತಾರೆ. ಕಪ್ಪು ಕಾಗದವನ್ನು ಹಣದ ಅಳತೆಗೆ ಕತ್ತರಿಸಿ ರಾಸಾಯನಿಕವೊಂದರಲ್ಲಿ ಅದ್ದುತ್ತಾರೆ. ಅದು ಅಸಲಿ ನೋಟಿನ ರೂಪ ಪಡೆಯುತ್ತದೆ. ಅದನ್ನು ಬ್ಯಾಂಕಿಗೆ ನೀಡಿ ಖಚಿತಪಡಿಸಿಕೊಳ್ಳುವಂತೆ ಸೂಚಿಸುತ್ತಾರೆ’ ಎಂದು ರಾಧಿಕಾ ಮಾಹಿತಿ ನೀಡಿದರು.

‘ಕಪ್ಪು ಕಾಗದವನ್ನು ರಾಸಾಯನಿಕದಲ್ಲಿ ಅದ್ದುವ ಸಂದರ್ಭದಲ್ಲಿ ಗಮನ ಬೇರೆಡೆ ಸೆಳೆದು ಅಸಲಿ ನೋಟು ಬಳಕೆ ಮಾಡಿರುತ್ತಾರೆ. ಇದು ಬಹುತೇಕರಿಗೆ ಗೊತ್ತಾಗುವುದಿಲ್ಲ. ಬ್ಯಾಂಕಿನಲ್ಲಿ ಪರೀಕ್ಷಿಸಿದವರು ಮತ್ತೆ ಚಂದ್ರಶೇಖರ್‌ ಸಂಪರ್ಕಿಸುತ್ತಾರೆ. ಲಕ್ಷಾಂತರ ರೂಪಾಯಿ ಪಡೆದು ಮೂರು ಪಟ್ಟು ಹಣ ನೀಡುವುದಾಗಿ ನಂಬಿಸುತ್ತಾರೆ’ ಎಂದು ಹೇಳಿದರು.

ಭೀತಿ ಸೃಷ್ಟಿಸಿ ಪರಾರಿ

‘ಹೆಚ್ಚು ಹಣ ಪಡೆಯುವ ಆಸೆಯಿಂದ ಸಂಪರ್ಕಿಸಿದ ವ್ಯಕ್ತಿಯನ್ನು ಸ್ಥಳವೊಂದಕ್ಕೆ ಬರಲು ಹೇಳುತ್ತಾರೆ. ಅಲ್ಲಿಂದ ಮತ್ತೊಂದು ಸ್ಥಳಕ್ಕೆ ಆಹ್ವಾನಿಸುತ್ತಾರೆ. ವಾಹನವೊಂದನ್ನು ಕಳುಹಿಸಿ ಅದರಲ್ಲಿ ಅಸಲಿ ಹಣ ಇಡುವಂತೆ ತಾಕೀತು ಮಾಡುತ್ತಾರೆ. ಹೀಗೆ ಹಣ ಇಟ್ಟ ಬಳಿಕ ಮತ್ತೊಂದು ವಾಹನದಲ್ಲಿ ಹಿಂಬಾಲಿಸುವಂತೆ ಹೇಳಿ ಪರಾರಿಯಾದ ನಿದರ್ಶನಗಳೂ ಇವೆ. ಹೀಗೆ ಹಣ ಕಳೆದುಕೊಂಡವರು ಠಾಣೆಗೆ ದೂರು ನೀಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ವಂಚನೆಗೆ ಹಲವು ವಿಧಾನಗಳನ್ನು ಬಳಕೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಕಪ್ಪು ಹಣದ ಕಟ್ಟಿನ ಮೊದಲ ಹಾಗೂ ಕೊನೆಯಲ್ಲಿ ಮಾತ್ರ ಅಸಲಿ ನೋಟು ಇಟ್ಟು ಹಲವರನ್ನು ಸಾಗಹಾಕಿದ್ದಾರೆ. ಕುಟುಂಬದ ಸದಸ್ಯರ ಹೆಸರಿನಲ್ಲಿ ಮೊಬೈಲ್‌ ಸಿಮ್‌ ಖರೀದಿಸಿ ಜನರನ್ನು ವಂಚನೆ ಮಾಡಿದ್ದಾರೆ. ಈ ವ್ಯವಸ್ಥಿತ ಜಾಲದ ತನಿಖೆ ಇನ್ನಷ್ಟು ಚುರುಕುಗೊಳ್ಳಲಿದೆ’ ಎಂದು ಹೇಳಿದರು.

ಹಣ ದ್ವಿಗುಣ (ಮನಿ ಡಬ್ಲಿಂಗ್‌) ದಂಧೆಯನ್ನು ಬಯಲಿಗೆ ಎಳೆದಿರುವ ಬಡಾವಣೆ ಠಾಣೆಯ ಪೊಲೀಸರು ನಗರಸಭಾ ಸದಸ್ಯ ಚಂದ್ರಶೇಖರ್‌ (47) ಹಾಗೂ ಅವರ ಇಬ್ಬರು ಪತ್ನಿಯರು ಸೇರಿ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ. ಡಬ್ಲಿಂಗ್‌ ದಂಧೆಯ ಬಹುದೊಡ್ಡ ಜಾಲವೊಂದು ಬೆಳಕಿಗೆ ಬಂದಿದೆ.

ಹಣ ದ್ವಿಗುಣ (ಮನಿ ಡಬ್ಲಿಂಗ್‌) ದಂಧೆಯನ್ನು ಬಯಲಿಗೆ ಎಳೆದಿರುವ ಬಡಾವಣೆ ಠಾಣೆಯ ಪೊಲೀಸರು ನಗರಸಭಾ ಸದಸ್ಯ ಚಂದ್ರಶೇಖರ್‌ (47) ಹಾಗೂ ಅವರ ಇಬ್ಬರು ಪತ್ನಿಯರು ಸೇರಿ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ. ಡಬ್ಲಿಂಗ್‌ ದಂಧೆಯ ಬಹುದೊಡ್ಡ ಜಾಲವೊಂದು ಬೆಳಕಿಗೆ ಬಂದಿದೆ.

ದಂಧೆಗೆ ಕಾನ್‌ಸ್ಟೆಬಲ್‌ ನೆರವು

ಮನಿ ಡಬ್ಲಿಂಗ್ ದಂಧೆಗೆ ಪೊಲೀಸ್‌ ಕಾನ್‌ಸ್ಟೆಬಲ್‌ವೊಬ್ಬರು ನೆರವು ನೀಡುತ್ತಿದ್ದ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಕಾನ್‌ಸ್ಟೆಬಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗುವ ಸಾಧ್ಯತೆ ಇದೆ.

‘ಪೊಲೀಸ್‌ ಕಾನ್‌ಸ್ಟೆಬಲ್‌ ಇಮಾಮ್‌ ಎಂಬುವರು ದಂಧೆಗೆ ನೆರವು ನೀಡಿದ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಇಲಾಖೆಯ ವಿಚಾರಣೆ ನಡೆಯಲಿದೆ. ವಿಚಾರಣೆಯಲ್ಲಿ ದೃಢಪಟ್ಟರೆ ಎಫ್‌ಐಆರ್ ದಾಖಲಿಸಲಾಗುವುದು. ಎಲ್ಲರಿಗೂ ಒಂದೇ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿ.ರಾಧಿಕಾ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT