ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾ ಬಿತ್ತನೆಗಿದೆ ಇನ್ನೂ ಕಾಲಾವಕಾಶ: ಡಾ.ಪಿ. ರಮೇಶಕುಮಾರ್‌

‘ಪ್ರಜಾವಾಣಿ’ ಫೊನ್‌ಇನ್‌ನಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ
Last Updated 29 ಜುಲೈ 2022, 3:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಬಿತ್ತನೆಗೆ ಇನ್ನೂ ಕಾಲಾವಕಾಶವಿದೆ. ವರುಣ ಇತ್ತೀಚೆಗೆ ಕರುಣೆ ತೋರುತ್ತಿದ್ದು ಬಿತ್ತನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ರೈತರು ನಿರಾಶರಾಗಬಾರದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಪಿ. ರಮೇಶಕುಮಾರ್‌ ಸಲಹೆ ನೀಡಿದರು.

‘ಪ್ರಜಾವಾಣಿ’ ಗುರುವಾರ ಏರ್ಪಡಿಸಿದ್ದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರ ಪ್ರಶ್ನೆಗಳಿಗೆ ಉತ್ತರಿಸಿ ಧೈರ್ಯ ತುಂಬಿದರು. ಬೆಳೆಹಾನಿ, ವಿಮೆ ಸಮಸ್ಯೆ, ರಸಗೊಬ್ಬರ, ಬಿತ್ತನೆ ಬೀಜ ಸೇರಿ ವಿವಿಧ ಮಾಹಿತಿಗಳನ್ನು ರೈತರು ಪಡೆದುಕೊಂಡರು.

‘ಜಿಲ್ಲೆಯ 7,70,702 ಹೆಕ್ಟೇರ್‌ ಭೂಪ್ರದೇಶದಲ್ಲಿ 4.4 ಲಕ್ಷ ಹೆಕ್ಟೇರ್‌ ಸಾಗುವಳಿ ಮಾಡಲಾಗಿದೆ. 3.3 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಬಿತ್ತನೆಯ ಗುರಿ ಹೊಂದಲಾಗಿದೆ. 65 ಸಾವಿರ ಹೆಕ್ಟೇರ್‌ ಹಿಂಗಾರು ಹಾಗೂ 10 ಸಾವಿರ ಹೆಕ್ಟೇರ್‌ ಬೇಸಿಗೆ ಬೆಳೆ ಬೆಳೆಯಲಾಗುತ್ತದೆ. ಜಿಲ್ಲೆಯ 3,01,562 ರೈತರಲ್ಲಿ 1,19,034 ಸಣ್ಣ ಹಿಡುವಳಿದಾರರು ಇದ್ದಾರೆ. ಎರಡೂವರೆ ಹೆಕ್ಟೇರ್‌ ಮೇಲ್ಪಟ್ಟ 85,691 ದೊಡ್ಡ ಹಿಡುವಳಿದಾರರು ಜಿಲ್ಲೆಯಲ್ಲಿದ್ದಾರೆ. ಶೇಂಗಾ ಪ್ರಮುಖ ವಾಣಿಜ್ಯ ಬೆಳೆಯಾಗಿದೆ’ ಎಂದರು.

‘1.4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಶೇಂಗಾ ಬಿತ್ತನೆಗೆ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ 41,764 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಶೇಂಗಾ ಬಿತ್ತನೆಯಾಗಿದೆ. ಇನ್ನೂ ಒಂದು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಆಗಬೇಕಿದೆ. ಅಗತ್ಯಕ್ಕೆ ತಕ್ಕಷ್ಟು ಮಳೆ ಸುರಿಯದೇ ಇರುವುದರಿಂದ ಬಿತ್ತನೆಗೆ ಹಿನ್ನಡೆಯಾಗಿದೆ. ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ ಆಗಸ್ಟ್‌ 15ರವರೆಗೆ ಶೇಂಗಾ ಬಿತ್ತನೆ ಮಾಡಬಹುದಾಗಿದೆ’ ಎಂದು ವಿವರಿಸಿದರು.

‘ಜನವರಿಯಿಂದ ಜುಲೈವರೆಗೆ 203 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ವಾಸ್ತವದಲ್ಲಿ 316 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಹೆಚ್ಚು ಮಳೆ ಸುರಿದರೂ ಜಿಲ್ಲೆಯ ಹಲವೆಡೆ ಬಿತ್ತನೆಗೆ ಹಿನ್ನಡೆಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಶೇ 22, ಮೊಳಕಾಲ್ಮುರು ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ ಶೇ 50 ಬಿತ್ತನೆ ಪೂರ್ಣಗೊಂಡಿದೆ. ಬುಧವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

‘90,000 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 45,000 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿದೆ. 4,300 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿಬೇಕಿದ್ದ ಸೂರ್ಯಕಾಂತಿ ಏಳು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದೆ. ಇದೇ ಮೊದಲ ಬಾರಿಗೆ 500 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಸೋಯಾಬಿನ್‌ ಬಿತ್ತನೆಯಾಗಿದೆ. ಮುಂಗಾರು ಹಂಗಾಮಿನ ಸೋಯಾಬಿನ್‌ ಕಟಾವು ಮುಗಿದ ಬಳಿಕ ಅದೇ ಭೂಮಿಯಲ್ಲಿ ಹಿಂಗಾರು ಹಂಗಾಮು ಕಡಲೆ ಬೆಳೆಯಬಹುದಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಕಡಲೆ ಬೆಳೆಯುವ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ’ ಎಂದರು.

ನಕಲಿ ರಸಗೊಬ್ಬರ: 3 ಪ್ರಕರಣ ದಾಖಲು
ಕಳಪೆ ಗುಣಮಟ್ಟದ ನಕಲಿ ರಸಗೊಬ್ಬರವನ್ನು ರೈತರಿಗೆ ಪೂರೈಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕವಾಗಿ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದೆ. 90 ಚೀಲ ನಕಲಿ ರಸಗೊಬ್ಬರವನ್ನು ಜಪ್ತಿ ಮಾಡಿದೆ.

ಚಿತ್ರದುರ್ಗ ತಾಲ್ಲೂಕಿನ ಡಿ.ಎಸ್‌.ಹಳ್ಳಿಯಲ್ಲಿ ಎರಡು ಚೀಲ, ಭರಮಸಾಗರದಲ್ಲಿ 60 ಚೀಲ ಹಾಗೂ ಹೊಳಲ್ಕೆರೆ ತಾಲ್ಲೂಕಿನ ನಲ್ಲಿಕಟ್ಟೆ ಹಾಗೂ ರಾಮೇನಹಳ್ಳಿಯಲ್ಲಿ 28 ಚೀಲ ಕಳಪೆ ಗುಣಮಟ್ಟದ ನಕಲಿ ರಸಗೊಬ್ಬರ ಪತ್ತೆಯಾಗಿದೆ. ಲಕ್ಷ್ಮಿಟ್ರೇಡರ್ಸ್‌, ರೇಣುಕಾ ಅಗ್ರೋ ಏಜೆನ್ಸಿ ವಿರುದ್ಧ ಚಿತ್ರದುರ್ಗ ಹಾಗೂ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದೇಶ್ವರ ಏಜೆನ್ಸಿ ವಿರುದ್ಧ ಹೊಳಲ್ಕೆರೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

‘ಜೈಕಿಸಾನ್‌ ಹಾಗೂ ಎಂಸಿಎಫ್‌ ಕಂಪನಿಯ ಚೀಲಗಳನ್ನು ದುರ್ಬಳಕೆ ಮಾಡಿಕೊಂಡು ರಸಗೊಬ್ಬರ ಪೂರೈಸಲಾಗಿದೆ. ಕಂಪನಿ ಸಿಬ್ಬಂದಿಗಳೊಂದಿಗೆ ಪರಿಶೀಲಿಸಿದಾಗ ಇದು ಕಳಪೆ ಗುಣಮಟ್ಟದ ರಸಗೊಬ್ಬರ ಎಂಬುದು ಗೊತ್ತಾಗಿದೆ. ಇದರ ಮಾದರಿಗಳನ್ನು ದಾವಣಗೆರೆಯ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ರಮೇಶ್‌ಕುಮಾರ್‌ ಮಾಹಿತಿ ನೀಡಿದರು.

‘ವಿಮಾ ಪ್ರತಿನಿಧಿ ಸಂಪರ್ಕಿಸಿ’
ಬೆಳೆಹಾನಿ ಹಾಗೂ ಬಿತ್ತನೆ ಪೂರ್ವದಲ್ಲಿ ಎದುರಾಗಿರುವ ಹವಾಮಾನ ವೈಪರಿತ್ಯಕ್ಕೆ ಸಂಬಂಧಿಸಿದಂತೆ ಯೂನಿವರ್ಸಲ್‌
ಸೋಂಪೊ ಜನರಲ್‌ ಇನ್‌ಶೂರೆನ್ಸ್‌ ಕಂಪನಿಯ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಎಂದು ಜಂಟಿ ಕೃಷಿ ನಿರ್ದೇಶಕ ರಮೇಶಕುಮಾರ್‌ ಅವರು ಸಲಹೆ ನೀಡಿದರು.

‘ವಿಮೆಯ ಮಾರ್ಗಸೂಚಿಯ ಪ್ರಕಾರ ಗ್ರಾಮ ಪಂಚಾಯಿತಿಯನ್ನು ಘಟಕವಾಗಿ ಪರಿಗಣಿಸಲಾಗುತ್ತದೆ. ಸ್ಥಳೀಯ ವಿಪತ್ತು ಸಂಭವಿಸಿದ 72 ಗಂಟೆಯ ಒಳಗೆ ಸಂಬಂಧಿಸಿದ ರೈತರು ಕಂಪನಿಗೆ ಮಾಹಿತಿ, ದೂರು ನೀಡಬೇಕು. ಘಟಕ ವ್ಯಾಪ್ತಿಯ ಶೇ 25ರಷ್ಟು ಕೃಷಿ ಭೂಮಿಯಲ್ಲಿ ಬೆಳೆನಷ್ಟವಾಗಿದ್ದರೆ ಮಾತ್ರ ಪರಿಹಾರಕ್ಕೆ ಪರಿಗಣಿಸಲಾಗುತ್ತದೆ. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿರುವ ವಿಮಾ ಕಂಪನಿಯ ಪ್ರತಿನಿಧಿಗಳು ಸಿಗುತ್ತಾರೆ’ ಎಂದು ಹೇಳಿದರು.


* ಕೃಷಿ ಇಲಾಖೆಯಿಂದ ನೀಡುವ ಟ್ರ್ಯಾಕ್ಟರ್‌ ಹಾಗೂ ಟಿಲ್ಲರ್‌ ಸೌಲಭ್ಯ ರೈತರಿಗೆ ಸಾಲುತ್ತಿಲ್ಲ. ಸೌಲಭ್ಯ ಇನ್ನಷ್ಟು ಹೆಚ್ಚುಗೊಳಿಸುವ ಅವಕಾಶ ಇದೆಯೇ?

–ಕೆ.ಸಿ.ಹೊರಕೇರಪ್ಪ, ಹಿರಿಯೂರು

- ಡಾ.ರಮೇಶ್‌ ಕುಮಾರ್‌: ಪ್ರತಿ ತಾಲ್ಲೂಕಿಗೆ 20ರಿಂದ 25 ಟ್ರ್ಯಾಕ್ಟರ್‌, ಟಿಲ್ಲರ್‌ ಸೌಲಭ್ಯ ಕಲ್ಪಿಸುವಂತೆ ಈಗಾಗಲೇ ಕೃಷಿ ಸಚಿವರಿಗೆ ಮನವಿ ಮಾಡಲಾಗಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಕಾರಣ ಮತ್ತೊಮ್ಮೆ ಅಹವಾಲು ಸಲ್ಲಿಸಲಾಗುವುದು.

* ಹತ್ತಿ ಬೆಳೆ ವಿಮೆ ಪಾವತಿಯಲ್ಲಿನ ಸಮಸ್ಯೆ ಬಗೆಹರಿಸುವಿರಾ?

– ನಟರಾಜ್‌, ಬುಕ್ಕಸಾಗರ

- ಡಾ.ರಮೇಶ್‌ ಕುಮಾರ್‌: ಸೂಕ್ತ ದಾಖಲಾತಿ ಸಲ್ಲಿಸಿದ್ದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕೆಲವೊಮ್ಮೆ ತಾಂತ್ರಿಕ ತೊಂದರೆಯಿಂದ ಪ್ರಕ್ರಿಯೆ ವಿಳಂಭವಾಗಿರುತ್ತದೆ. ಶೀಘ್ರ ಹಣ ಜಮೆಯಾಗಲಿದೆ.

* ಮಳೆಯಿಂದ ಹಾಳಾಗಿರುವ ಮೆಕ್ಕೆಜೋಳಕ್ಕೆ ಪರಿಹಾರ, ಬೆಳೆವಿಮೆ ಯಾವ ರೀತಿ ಬರುತ್ತದೆ?

– ರವಿಕುಮಾರ್‌ ಮಲ್ಲಾಡಿಹಳ್ಳಿ, ದೇವರಾಜ್‌ ಬಿ.ದುರ್ಗ, ನಾಗರಾಜ್‌ ಹನಗವಾಡಿ,
ಪ್ರವೀಣ್‌ ಮುತ್ತಗದೂರು

- ಡಾ.ರಮೇಶ್‌ ಕುಮಾರ್‌: ಸ್ಥಳೀಯ ಹವಾಮಾನ ವೈಪರೀತ್ಯದಿಂದ ಆದ ಬೆಳೆ ಹಾನಿ ಬಗ್ಗೆ ನೀವುಗಳೇ ಜವಾಬ್ದಾರಿಯಿಂದ ಸಹಾಯಕ ಕೃಷಿ ನಿರ್ದೇಶಕ ಕಚೇರಿಯಲ್ಲಿನ ವಿಮಾ ಕಂಪನಿ ಪ್ರತಿನಿಧಿಗೆ ಹಾನಿಯ ವಿವರ ಸಲ್ಲಿಸಬೇಕು. ಬಳಿಕ ಅವರು ಪರಿಶೀಲಿಸಿ ಪರಿಹಾರಕ್ಕೆ ಶಿಫಾರಸು ಮಾಡಬಹುದು.

* ಹೋಬಳಿ ಮಟ್ಟದಲ್ಲಿ ರಸಗೊಬ್ಬರ ಸಿಗುತ್ತಿಲ್ಲ. ವಿತರಣೆಗೆ ಏನು ಕ್ರಮವಹಿಸುವಿರಿ?

– ಸುಖಾನಂದಪ್ಪ, ಮಾಡನಾಯಕನಹಳ್ಳಿ

- ಡಾ.ರಮೇಶ್‌ ಕುಮಾರ್‌: ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಹಾಗೂ ವಿತರಣೆಯಲ್ಲಿ ಯಾವುದೇ ಕೊರತೆಯಿಲ್ಲ. ಇಲಾಖೆಗೆ ಅರ್ಜಿ ನೀಡಿ ನಿಗದಿಗೊಳಿಸಿದ ಹಣ ಪಾವತಿಸಿದರೆ ನೀವು ಸೂಚಿಸಿದ ಸ್ಥಳಕ್ಕೆ ರಸಗೊಬ್ಬರ ಪೂರೈಕೆ ಮಾಡಲಾಗುತ್ತದೆ.

* ಮಳೆಗೆ ಮೆಕ್ಕೆಜೋಳ ಸಂಪೂರ್ಣ ಕೆಂಪಾಗಿ ಹಾಳಾಗಿದೆ, ಏನು ಮಾಡಬೇಕು?

– ಜಯಣ್ಣ, ಬಿ.ದುರ್ಗ

- ಡಾ.ರಮೇಶ್‌ ಕುಮಾರ್‌: ಬೆಳೆ ವಿಮೆ ಪಾವತಿಸಿದ್ದರೆ ಕಂಪನಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ. ಸಿಬ್ಬಂದಿ ಹೊಲಕ್ಕೆ ಭೇಟಿ ನೀಡುತ್ತಾರೆ. ಅವರಿಗೂ ಈ ಬಗ್ಗೆ ಸೂಚನೆ ನೀಡಲಾಗುವುದು. ಸಿಬ್ಬಂದಿ ಜಮೀನಿಗೆ ಭೇಟಿ ನೀಡುವುದಕ್ಕೂ ಮೊದಲೇ ಬೆಳೆ ನಾಶ ಮಾಡಬೇಡಿ.

* ಹಿರಿಯೂರು ತಾಲ್ಲೂಕಿನಲ್ಲಿ ಕಳಪೆ ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಇದರಿಂದ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಇದಕ್ಕೆ ಪರಿಹಾರವೇನು?

– ತಿಪ್ಪೇಸ್ವಾಮಿ, ರಂಗಸ್ವಾಮಿ, ಹಿರಿಯೂರು

- ಡಾ.ರಮೇಶ್‌ ಕುಮಾರ್‌: ಬಹುತೇಕ ಭಾಗಗಳಲ್ಲಿ ಶೇಂಗಾ ಬೆಳೆ ಚೆನ್ನಾಗಿ ಬಂದಿದೆ. ನಮ್ಮ ಗಮನಕ್ಕೆ ಬಂದ ಕಡೆ ಹೊಸದಾಗಿ ಪೂರೈಕೆ ಮಾಡಲಾಗಿದೆ. ಸಮಸ್ಯೆಯಿದ್ದರೆ ಅರ್ಜಿ ನೀಡಿ. ಸ್ಥಳೀಯ ಅಧಿಕಾರಿಗಳನ್ನು ಕಳುಹಿಸಿ ತನಿಖೆ ನಡೆಸಿ ಕ್ರಮ ಜರುಗಿಸುತ್ತೇನೆ.

* ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಲೊಕೇಷನ್‌ ಸಮಸ್ಯೆ ಎದುರಾಗಿದೆ. ಏನು ಮಾಡಬೇಕು?

– ಆರ್‌.ವೆಂಕಟೇಶ್‌, ಬಾಗೂರು

- ಡಾ.ರಮೇಶ್‌ ಕುಮಾರ್‌: ರಾಜ್ಯದಲ್ಲಿ ಎಲ್ಲ ಕಡೆ ಆ್ಯಪ್‌ ಮೂಲಕವೇ ಸಮೀಕ್ಷೆ ನಡೆಯುತ್ತಿದೆ. ಶೀಗೆಹಟ್ಟಿಯಲ್ಲಿ ಎದುರಾಗಿದ್ದ ಸಮಸ್ಯೆ ಬಗೆಹರಿಸಲಾಗಿದೆ. ಬಾಗೂರಿನಲ್ಲಿ ನಿರ್ದಿಷ್ಟ ಸಮಸ್ಯೆಯಿದ್ದರೆ ಬಗೆಹರಿಸಲಾಗುವುದು.

* ಶೇಂಗಾ ಬಿತ್ತನೆ ಕುಂಠಿತವಾಗಿದ್ದು, ಇದಕ್ಕೆ ಪರ್ಯಾಯ ಬೆಳೆ ಯಾವುದು?

– ನಾಗರಾಜ್‌, ಪರಶುರಾಂಪುರ, ಚಿತ್ರಲಿಂಗಪ್ಪ, ಪಿಲ್ಲಹಳ್ಳಿ

- ಡಾ.ರಮೇಶ್‌ ಕುಮಾರ್‌: ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಕುಂಠಿತವಾಗಿಲ್ಲ. ದ್ವಿದಳ ಧಾನ್ಯ ತೊಗರಿ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಸೋಯಾಬಿನ್‌ ಸಹ ಬಿತ್ತನೆ ಮಾಡಿಸಲಾಗುತ್ತಿದೆ.

* ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ಸೌಲಭ್ಯಗಳೇನು?

– ಎಸ್‌.ಕೃಷ್ಣಮೂರ್ತಿ, ಚಿತ್ರದುರ್ಗ

- ಡಾ.ರಮೇಶ್‌ ಕುಮಾರ್‌: ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಸಬ್ಸಿಡಿಯಲ್ಲಿ ಬಿತ್ತನೆ ಬೀಜದ ವಿತರಣೆ ಮಾಡುತ್ತಿದ್ದೇವೆ. ಜತೆಗೆ ರಸಗೊಬ್ಬರ, ಕೀಟನಾಶಕಗಳನ್ನು ವಿತರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ಸಂಪರ್ಕಿಸಿ.

* ಮಳೆಯಿಂದ ಎಂಟು ತಿಂಗಳ ಅಡಿಕೆ ಹಾಳಾಗಿದೆ?

– ರಂಗಯ್ಯ, ಪಿಡಿ ಕೋಟೆ

- ಡಾ.ರಮೇಶ್‌ ಕುಮಾರ್‌: ಇದು ತೋಟಗಾರಿಕೆ ಬೆಳೆಯಾಗಿದ್ದು, ಇದರ ಬಗ್ಗೆ ಬಬ್ಬೂರು ಫಾರಂನ ಕೃಷಿ ವಿಜ್ಞಾನಿ ಓಂಕಾರಪ್ಪ ಅವರಿಗೆ ಮಾಹಿತಿ ನೀಡಲಾಗುವುದು. ಅವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತಾರೆ.

* ನರೇಗಾ ಯೋಜನೆಯಡಿ ಹಾಕಿದ್ದ ಪಪ್ಪಾಯಿಗೆ ಇನ್ನೂ ಹಣ ಬಂದಿಲ್ಲ?

- ಡಾ.ರಮೇಶ್‌ ಕುಮಾರ್‌: ಈ ವಿಚಾರವಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT