ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಗಸ್ತು ಹೆಚ್ಚಿಸಿ

ಪೊಲೀಸ್‌ ಇಲಾಖೆಗೆ ಸಂಸದ ಎ.ನಾರಾಯಣಸ್ವಾಮಿ ಸೂಚನೆ
Last Updated 31 ಮಾರ್ಚ್ 2020, 13:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಳ್ಳಿಗಳಿಗೆ ಮರಳಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗುಂಪಾಗಿ ಸಂಚರಿಸುವ ಹಾಗೂ ಜೂಜು ಆಡುವ ಇಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿ ಎಂದು ಸಂಸದ ಎ.ನಾರಾಯಣಸ್ವಾಮಿ ಸೂಚನೆ ನೀಡಿದರು.

‘ಕೋವಿಡ್‌–19’ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಂಸದರು ಮಾತನಾಡಿದರು.

‘ವಲಸೆ ಕಾರ್ಮಿಕರು ಹಳ್ಳಿಗಳಲ್ಲಿ ಹೆಚ್ಚಾಗಿದ್ದಾರೆ. ಮಕ್ಕಳನ್ನು ಗುಂಪು ಕಟ್ಟಿಕೊಂಡು ಕ್ರೀಡಾಕೂಟ ನಡೆಸುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಪೊಲೀಸರು ಈ ಬಗ್ಗೆ ಪರಿಶೀಲನೆ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರಿಗೆ ಸೂಚನೆ ನೀಡಿದರು.

ನಿರಾಶ್ರತರಿಗೆ ಆಶ್ರಯ ಕಲ್ಪಿಸಿ:ಲಾಕ್‌ಡೌನ್‌ ಜಾರಿಗೊಳಿಸಿದ ಪರಿಣಾಮ ಊರೂರು ಅಲೆಯುತ್ತಿರುವ ನಿರಾಶ್ರಿತರು ಮತ್ತು ಅಲೆಮಾರಿಗಳ ಬಗ್ಗೆ ಜಿಲ್ಲಾಡಳಿತ ಕಾಳಜಿ ವಹಿಸಬೇಕು. ಅವರನ್ನು ಜಿಲ್ಲೆಯ ಗಡಿ ದಾಟಿಸುವ ಬದಲಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ತಾಕೀತು ಮಾಡಿದರು.

ಸಂಸದರ ಅಸಮಾಧಾನಕ್ಕೆ ಅಧಿಕಾರಿಗಳು ಸಮರ್ಥನೆ ನೀಡಿದರು. ನಿರಾಶ್ರಿತರು ಮತ್ತು ಕಾರ್ಮಿಕರಿಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡುತ್ತಿರುವುದಾಗಿ ಹೇಳಿದರು.

‘ಹಿರಿಯೂರು ತಾಲ್ಲೂಕಿನ ಗುಯಿಲಾಳು ಟೋಲ್‌ ಬಳಿ 50ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಗಡಿಗಳನ್ನು ಮುಚ್ಚಿರುವುದರಿಂದ ಅವರು ಅತಂತ್ರಕ್ಕೆ ಸಿಲುಕಿದ್ದಾರೆ. ಇವರಲ್ಲಿ ಹೊರರಾಜ್ಯ ಹಾಗೂ ಹೊರ ಜಿಲ್ಲೆಯವರೂ ಇದ್ದಾರೆ.

ಯಾವುದಾದರೂ ಹಾಸ್ಟೆಲ್‌ನಲ್ಲಿ ಅವರನ್ನು ಕ್ವಾರಂಟೈನ್‌ ಮಾಡಿ. ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಿ. ಸೋಂಕಿತರು ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡಿ. ನಿರಾಶ್ರಿತರಿಗೆ ದಾನಿಗಳು ಆಹಾರ ಒದಗಿಸುತ್ತಾರೆ ಎಂಬ ನಿರ್ಲಕ್ಷ್ಯ ಸಲ್ಲದು’ ಎಂದರು.

ಬಯೊಮೆಟ್ರಿಕ್‌ ಬದಲಿಗೆ ಓಟಿಪಿ:ಬಡ ಕುಟುಂಬಗಳು ಆಹಾರಧಾನ್ಯಕ್ಕಾಗಿ ತೊಂದರೆ ಅನುಭವಿಸದಂತೆ ಎಚ್ಚರ ವಹಿಸುವ ಅಗತ್ಯವಿದೆ. ಅಕ್ಕಿ ಮತ್ತು ಗೋಧಿಯನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಏ.1ರಿಂದ ಆರಂಭವಾಗಬೇಕು. ಕಡು ಬಡವರಿಗೆ ಆಹಾರ ಧಾನ್ಯಗಳ ಕೊರತೆ ಉಂಟಾಗಬಾರದು ಎಂದು ತಾಕೀತು ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ‘ಈಗಾಗಲೇ ಪಡಿತರ ಅಕ್ಕಿ, ಗೋಧಿ ಜಿಲ್ಲೆಗೆ ಬಂದಿದೆ. ಗೋದಾಮಿನಲ್ಲಿ ದಾಸ್ತಾನು ಇಡಲಾಗಿದೆ. ಬುಧವಾರದಿಂದಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಆರಂಭಿಸಲಾಗುತ್ತದೆ. ಪಡಿತರ ವಿತರಣೆಗೆ ಬಯೋಮೆಟ್ರಿಕ್ ಪಡೆಯುವಂತಿಲ್ಲ, ಕೇವಲ ಮೊಬೈಲ್ ಓಟಿಪಿ ಪಡೆದರೆ ಸಾಕು. ಒಟಿಪಿ ಪಡೆಯುವಲ್ಲಿ ತೊಂದರೆ ಕಂಡುಬಂದರೂ ಪಡಿತರ ನಿರಾಕರಿಸುವಂತಿಲ್ಲ ಎಂಬ ಸೂಚನೆ ನೀಡಲಾಗಿದೆ’ ಎಂದು ಸಭೆಯ ಗಮನಕ್ಕೆ ತಂದರು.

₹ 25 ಲಕ್ಷ ಅನುದಾನ:‘ಕೊರೊನಾ ಸೋಂಕು ನಿರ್ವಹಣೆ ಕಾರ್ಯಕ್ಕೆ ₹ 25 ಲಕ್ಷವನ್ನು ಸಂಸದರ ನಿಧಿಯಿಂದ ನೀಡಲಾಗುವುದು ಎಂದು ಎ.ನಾರಾಯಣಸ್ವಾಮಿ ಘೋಷಣೆ ಮಾಡಿದರು.

‘ಸೋಂಕು ತಡೆಯಲು ಅಗತ್ಯವಿರುವ ಮಾಸ್ಕ್, ಸುರಕ್ಷತಾ ಕಿಟ್, ಕೈಗವಸು ಮತ್ತು ತಾಯಿ – ಮಕ್ಕಳ ಆಸ್ಪತ್ರೆಗೆ ಅಗತ್ಯ ಸಾಮಗ್ರಿಗೆ ಈ ಅನುದಾನದಲ್ಲಿ ಬಳಸಿಕೊಳ್ಳಬಹುದು. ಜಿಲ್ಲಾಡಳಿತದೊಂದಿಗೆ ನಾನೂ ಸಹಾಯ ಹಸ್ತ ಚಾಚುತ್ತಿದ್ದೇನೆ. ಸಮರ್ಪಕವಾಗಿ ಹಾಗೂ ತ್ವರಿತವಾಗಿ ಕೆಲಸ ಮಾಡಿ’ ಎಂದು ಹೇಳಿದರು.

‘ಪ್ರತಿ ಜಿಲ್ಲೆಗೆ 25 ವೆಂಟಿಲೇಟರ್‌ ನೀಡಲು ಸರ್ಕಾರ ತೀರ್ಮಾನಿಸಿದೆ. ಆದರೆ, ಇವುಗಳ ಉತ್ಪಾದನೆ ಮತ್ತು ಸರಬರಾಜು ಸಮಸ್ಯೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿರುವ ಎರಡು ವೆಂಟಿಲೇಟರ್‌ ಸಾಲದು. ಇನ್ನಷ್ಟು ವೆಂಟಿಲೇಟರ್‌ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಬೇಕು’ ಎಂದು ಹೇಳಿದರು.

ಪಾಸ್‌ ವಿತರಣೆಯಲ್ಲಿ ತೊಡಕು:ಜಿಲ್ಲೆಯ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಿರುವುದರಿಂದ ವೈದ್ಯಕೀಯ ಚಿಕಿತ್ಸೆ ಹಾಗೂ ತುರ್ತು ಕೆಲಸಗಳಿಗೆ ತೆರಳುವವರಿಗೆ ತೊಂದರೆ ಉಂಟಾಗುತ್ತಿದೆ.

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಜಿಲ್ಲಾ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ವೈದ್ಯಕೀಯ ಚಿಕಿತ್ಸೆಗೆ ಬಳ್ಳಾರಿ, ತುಮಕೂರು, ಶಿವಮೊಗ್ಗ ಹಾಗೂ ದಾವಣಗೆರೆಗೆ ತೆರಳುತ್ತಿದ್ದ ಸಾರ್ವಜನಿಕರು ಪಾಸ್‌ ಪಡೆಯುವುದು ಅನಿವಾರ್ಯವಾಗಿದೆ.

ಪಾಸ್‌ ಹೊಂದಿಲ್ಲ ಎಂಬ ಕಾರಣಕ್ಕೆ ಜಿಲ್ಲೆಯ ಗಡಿಯಿಂದಲೇ ರೋಗಿಗಳನ್ನು ಹಿಂದಿರುಗಿಸಲಾಗಿದೆ. ವೈದ್ಯರ ಶಿಫಾರಸಿನ ಪತ್ರ ತೋರಿಸಿದರೂ ಅವಕಾಶ ಸಿಕ್ಕಿಲ್ಲ. ಡಿವೈಎಸ್‌ಪಿ ಹಾಗೂ ತಹಶೀಲ್ದಾರ್‌ ಬಳಿಗೆ ಧಾವಿಸಿ ಪಾಸ್‌ ಪಡೆವುದು ಕಷ್ಟವಾಗುತ್ತಿದೆ. ವೈದ್ಯಕೀಯ ಚಿಕಿತ್ಸೆಗೆ ಇದರಿಂದ ವಿನಾಯಿತಿ ನೀಡಿ ಎಂಬುದು ಸಾರ್ವಜನಿಕರ ಒತ್ತಾಯ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಹೊನ್ನಾಂಬ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಉಪವಿಭಾಗಾಧಿಕಾರಿ ಪ್ರಸನ್ನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಜೆ.ಬಸವರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT