ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಕಬಳಿಕೆಗೆ ಪ್ರಬಲರ ಹೊಂಚು: ನಟ ‘ಮುಖ್ಯಮಂತ್ರಿ’ ಚಂದ್ರು ಕಳವಳ

ರಾಜ್ಯದೆಲ್ಲೆಡೆ ಜಾಗೃತಿ
Last Updated 23 ಆಗಸ್ಟ್ 2021, 12:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಪ್ರಬಲವಾಗಿರುವ ಜಾತಿಗಳು ಪ್ರವರ್ಗ 2ಎ ಮೀಸಲಾತಿ ಸೌಲಭ್ಯಕ್ಕೆ ಒತ್ತಡ ಹೇರುತ್ತಿವೆ. ಪ್ರಬಲ ಜಾತಿಗಳು ಮೀಸಲಾತಿ ಕಬಳಿಸಿದರೆ ಶೋಷಿತ ಸಮುದಾಯ ಅನ್ಯಾಯಕ್ಕೆ ಒಳಗಾಗಲಿದೆ ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಗೌರವಾಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಕಳವಳ ವ್ಯಕ್ತಪಡಿಸಿದರು.

‘ಕಸುಬು, ಶ್ರಮದ ಆಧಾರದ ಮೇರೆಗೆ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಪ್ರಬಲ ಜಾತಿಗಳು ಹಿಂದುಳಿದ ವರ್ಗಗಳ ಹಕ್ಕುಗಳಿಗೆ ಕೈಹಾಕುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದು ನ್ಯಾಯೋಚಿತವೂ ಇಲ್ಲ. ಈ ಬಗ್ಗೆ ರಾಜ್ಯವನ್ನು ಸುತ್ತಿ ತಳ ಸಮುದಾಯದಲ್ಲಿ ಅರಿವು ಮೂಡಿಸುವ ಪ್ರಕ್ರಿಯೆ ಆರಂಭವಾಗಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪ್ರವರ್ಗ 2ಎನಲ್ಲಿ 102 ಜಾತಿಗಳಿದ್ದು ಶೇ 15 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಪ್ರವರ್ಗ 1 ರಲ್ಲಿ 95 ಜಾತಿಗಳಿದ್ದು ಶೇ 4 ರಷ್ಟು ಮೀಸಲಾತಿ ನೀಡಲಾಗಿದೆ. ಈ ಎರಡೂ ಪ್ರವರ್ಗಗಗಳ ಪಟ್ಟಿಯಲ್ಲಿರುವ ಅತಿ ಸಣ್ಣ ಸಮುದಾಯ ಶೈಕ್ಷಣಿಕ, ಉದ್ಯೋಗ ಅವಕಾಶದಿಂದ ವಂಚಿತವಾಗುತ್ತಿವೆ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಬಲವಾಗಿರುವ ಜಾತಿಗಳು ಮೀಸಲಾತಿ ಸೌಲಭ್ಯವನ್ನು ಕಬಳಿಸಲು ಹವಣಿಸುತ್ತಿವೆ’ ಎಂದು ಆರೋಪಿಸಿದರು.

‘ದೇಶದಲ್ಲಿ 1931ರಿಂದಲೂ ಜಾತಿ ಜನಗಣತಿ ನಡೆದಿಲ್ಲ. ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಯ ಅಂದಾಜಿನ ಮೇಲೆ ನಿಗದಿ ಮಾಡಲಾಗಿದೆ. ಜಾತಿ ಜನಸಂಖ್ಯೆಯನ್ನು ಅರಿಯುವ ಉದ್ದೇಶದಿಂದ ಜಾತಿ ಗಣತಿ ಮಾಡಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಸದನದಲ್ಲಿ ಮಂಡಿಸಬೇಕು’ ಎಂದು ಆಗ್ರಹಿಸಿದರು.

‘ಪಂಚಮಸಾಲಿ ಪೀಠ ಮತ್ತು ಸಮುದಾಯದ ಬಗ್ಗೆ ಅಪಾರ ಗೌರವವಿದೆ. ಈ ಸಮುದಾಯವನ್ನು ‘ಪ್ರವರ್ಗ 2ಎ’ಗೆ ಸೇರ್ಪಡೆ ಮಾಡುವುದರಿಂದ ತಳ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಅರ್ಹತೆ ಇರದ ಯಾವುದೇ ಸಮುದಾಯ ಇಂತಹ ಬೇಡಿಕೆ ಮುಂದಿಟ್ಟರೂ ತಪ್ಪಾಗುತ್ತದೆ. ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲು ಸಾಧ್ಯವಿಲ್ಲ. ಸರ್ಕಾರ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಒತ್ತಡಕ್ಕೆ ಮಣಿಯಬಾರದು’ ಎಂದು ಒತ್ತಾಯಿಸಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್, ‘ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣ ಏರಿಕೆ ಮಾಡಿಲ್ಲ. ತಮಿಳುನಾಡು ಸರ್ಕಾರ ಮೀಸಲಾತಿ ಪ್ರಮಾಣವನ್ನು ಶೇ 69ಕ್ಕೆ ಏರಿಸಿದೆ. ಇದೇ ಮಾನದಂಡದಲ್ಲಿ ಕರ್ನಾಟಕಕ್ಕೆ ಶೇ 73ರಷ್ಟು ಮೀಸಲಾತಿ ಹೆಚ್ಚಿಸಬೇಕು. ಮೀಸಲಾತಿ ಪ್ರಮಾಣ ಶೇ 50ನ್ನು ಮೀರುವಂತಿಲ್ಲ’ ಎಂದು ಸುಪ್ರೀಂಕೋರ್ಟ್‌ ಹೇಳಿದೆ’ ಎಂದರು.

‘ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೀಸಲಾತಿ ಪ್ರಮಾಣ ಏರಿಕೆ ಮಾಡುವ ಪ್ರಯತ್ನ ನಡೆದಿತ್ತು. ಇದಕ್ಕೆ ಪೂರಕವಾದ ಆಧಾರ ಲಭ್ಯವಾಗದ ಪರಿಣಾಮ ಇದು ನನೆಗುದಿಗೆ ಬಿದ್ದಿತು. ರಾಜ್ಯದಲ್ಲಿ ಜಾತಿ ಗಣತಿ ಮಾಡಲಾಗಿದೆ. ಇದರ ಆಧಾರದ ಮೇರೆಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಉಪಾಧ್ಯಕ್ಷರಾದ ಪಿ.ಆರ್.ರಮೇಶ್, ಡಾ.ಜಿ.ರಮೇಶ್, ಪ್ರಧಾನ ಕಾರ್ಯದರ್ಶಿ ಎಸ್.ಆರ್.ಯಲ್ಲಪ್ಪ, ಎಚ್.ಸಿ.ರುದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT