ಮೈತ್ರಿ ಪಕ್ಷಗಳ ನಡುವೆ ಸ್ನೇಹ ಕದನ

7
ಜೆಡಿಎಸ್–ಕಾಂಗ್ರೆಸ್ ಮಣಿಸಲು ಬಿಜೆಪಿ ರಣತಂತ್ರ

ಮೈತ್ರಿ ಪಕ್ಷಗಳ ನಡುವೆ ಸ್ನೇಹ ಕದನ

Published:
Updated:
Deccan Herald

ಚಿತ್ರದುರ್ಗ: ನಗರಸಭೆಯಲ್ಲಿ ಮೈತ್ರಿ ಮಾಡಿಕೊಂಡು ಐದು ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್–ಜೆಡಿಎಸ್‌ ಪರಸ್ಪರ ಪ್ರತಿಸ್ಪರ್ಧಿಗಳಾಗಲು ಮುಂದಾಗಿದ್ದು, ಸ್ನೇಹಯುತ ಕದನಕ್ಕೆ ಚುನಾವಣಾ ಅಖಾಡ ಸಜ್ಜಾಗಿದೆ.

ಮೈತ್ರಿ ಪಕ್ಷಗಳನ್ನು ಕಟ್ಟಿಹಾಕಿ ಸ್ಥಳೀಯ ಸಂಸ್ಥೆಯ ಅಧಿಕಾರ ಹಿಡಿಯುವ ಬಹುದಿನಗಳ ಕನಸನ್ನು ಸಕಾರಗೊಳಿಸಿಕೊಳ್ಳಲು ಬಿಜೆಪಿ ಕೂಡ ರಣತಂತ್ರ ರೂಪಿಸುತ್ತಿದೆ. ಮೂರು ಪಕ್ಷಗಳಲ್ಲಿ ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಚುರುಕುಗೊಂಡಿದ್ದು, ಅಭ್ಯರ್ಥಿ ಆಯ್ಕೆ ಬುಧವಾರ ಅಂತಿಮಗೊಳ್ಳುವ ಸಾಧ್ಯತೆ ಇದೆ. ಸ್ವಾತಂತ್ರ್ಯ ದಿನಾಚರಣೆಯ ಮರುದಿನ ನಾಮಪತ್ರ ಸಲ್ಲಿಕೆಗೆ ಬಹುತೇಕರು ಸಿದ್ಧತೆ ಮಾಡಿಕೊಂಡಿದ್ದಾರೆ.

2013ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ನಗರಸಭೆಯಲ್ಲಿ 16 ಸದಸ್ಯಬಲ ಹೊಂದಿದ್ದ ಜೆಡಿಎಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತ ಇಲ್ಲದ ಪರಿಣಾಮ 7 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿತು. ಬಿ.ಕಾಂತರಾಜ್‌, ಡಿ.ಮಲ್ಲಿಕಾರ್ಜುನ್‌, ಮಂಜುನಾಥ್‌ ಗೊಪ್ಪೆ, ಎಚ್‌.ತಿಮ್ಮಣ್ಣ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ.

35 ವಾರ್ಡ್‌ಗಳಲ್ಲಿ ನಾಲ್ವರು ಪಕ್ಷೇತರರು ಗೆಲುವು ಸಾಧಿಸಿದ್ದರು. ಬಿಎಸ್‌ಆರ್‌ ಕಾಂಗ್ರೆಸ್‌ 6, ಕೆಜೆಪಿ 2 ಸ್ಥಾನಗಳನ್ನು ಹೊಂದಿತ್ತು. ಮೂರು ಪಕ್ಷಗಳಾಗಿ ಕವಲೊಡೆದಿದ್ದ ಪರಿಣಾಮ ಬಿಜೆಪಿಗೆ ಒಂದು ಸ್ಥಾನ ಕೂಡ ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಿಜೆಪಿಯಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌, ಕೆಜೆಪಿ ವಿಲೀನಗೊಂಡಿದ್ದರಿಂದ ಶಕ್ತಿ ವೃದ್ಧಿಸಿದೆ.

ಟಿಕೆಟ್‌ಗೆ ಪೈಪೋಟಿ:  ಆ.10ರಂದೇ ಅಧಿಸೂಚನೆ ಪ್ರಕಟವಾದರೂ ಈವರೆಗೆ ಪ್ರಮುಖ ರಾಜಕೀಯಗಳು ಪಕ್ಷ ‘ಬಿ’ ಫಾರಂ ನೀಡಿಲ್ಲ. ಹೀಗಾಗಿ, ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಮೂರು ಪಕ್ಷಗಳು ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು, ಬಿಜೆಪಿಯಲ್ಲಿ 78, ಜೆಡಿಎಸ್‌ನಲ್ಲಿ 80ಕ್ಕೂ ಹೆಚ್ಚು ಮಂದಿ ಟಿಕೆಟ್‌ ಕೇಳಿದ್ದಾರೆ. ಕಾಂಗ್ರೆಸ್‌ ಪಕ್ಷದ ಅರ್ಜಿಯನ್ನು ಸುಮಾರು 130ಕ್ಕೂ ಹೆಚ್ಚು ಮಂದಿ ಪಡೆದಿದ್ದಾರೆ.

ಜೆಡಿಎಸ್‌ ಸದಸ್ಯರ ಪೈಕಿ ಸುಮಾರು 12 ಮಂದಿ ಕಣಕ್ಕೆ ಇಳಿಯುವ ಸಾಧ್ಯತೆ ಬಹುತೇಕ ನಿಶ್ಚಳವಾಗಿದೆ. ಕಾಂಗ್ರೆಸ್‌ ಸದಸ್ಯರಲ್ಲಿ ಐವರಿಗೆ ಟಿಕೆಟ್‌ ಖಚಿತವಾಗಿದೆ. ಮೀಸಲಾತಿ ಬದಲಾವಣೆಯಿಂದ ಕೈತಪ್ಪುತ್ತಿರುವ ಸ್ಥಾನವನ್ನು ಉಳಿಸಿಕೊಳ್ಳಲು ಕೆಲವರು ಭಾರಿ ಲಾಬಿ ನಡೆಸುತ್ತಿದ್ದಾರೆ. ಮಹಿಳೆಯರಿಗೆ ಮೀಸಲಾದ ಕ್ಷೇತ್ರಗಳಿಗೆ ಪತ್ನಿ, ಪುತ್ರಿ ಹಾಗೂ ಸಂಬಂಧಿಕರನ್ನು ತರುವ ಪ್ರಯತ್ನಗಳು ನಡೆಯುತ್ತಿವೆ.

ಆಕಾಂಕ್ಷಿಗಳ ಮನೆಗೆ ಭೇಟಿ:  ಟಿಕೆಟ್‌ ಆಕಾಂಕ್ಷಿಗಳಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸವಾಲು ಮೂರು ಪಕ್ಷಗಳಿಗೂ ಎದುರಾಗಿದೆ. ಜಾತಿ ಆಧಾರಿತ ಲೆಕ್ಕಾಚಾರಗಳು ಪಕ್ಷಗಳಲ್ಲಿ ಜೋರಾಗಿ ನಡೆಯುತ್ತಿವೆ. ಟಿಕೆಟ್‌ ಕೇಳಿ ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳ ಮನೆಗೆ ಭೇಟಿ ನೀಡಿ ತೀರ್ಮಾನಿಸಲು ಕಾಂಗ್ರೆಸ್‌ ಮುಂದಾಗಿದೆ. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಫಾತ್ಯರಾಜನ್‌ ನೇತೃತ್ವದ ಸಮಿತಿ ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕುತ್ತಿದೆ.

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್‌, ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ತಿಮ್ಮಣ್ಣ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚನೆಯಾಗಿದೆ. ಅಭ್ಯರ್ಥಿ ಆಯ್ಕೆಯ ಹೊಣೆಯನ್ನು ಬಿಜೆಪಿಯು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರಿಗೆ ನೀಡಿದೆ. ಬಿಜೆಪಿ ಮುಖಂಡರು ಶಾಸಕರಿಗೆ ಸಾಥ್ ನೀಡಿದ್ದು, ಸ್ಥಳೀಯ ಸಂಸ್ಥೆಯ ಅಧಿಕಾರ ಹಿಡಿಯುವುದನ್ನು ಸವಾಲಾಗಿ ಸ್ವೀಕರಿಸಿದಂತೆ ಕಾಣುತ್ತಿದೆ.

ಬದಲಾದ ಲೆಕ್ಕಾಚಾರ: ವಾರ್ಡ್‌ ಪುನರ್‌ ವಿಂಗಡಣೆ ಗೆಲುವಿನ ಲೆಕ್ಕಾಚಾರವನ್ನು ಬದಲಾಯಿಸಿದೆ. 6ನೇ ವಾರ್ಡ್‌ ಅಸ್ತಿತ್ವ ಕಳೆದುಕೊಂಡಿದ್ದು, ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದ 12ನೇ ವಾರ್ಡ್‌ ಎರಡು ಕ್ಷೇತ್ರವಾಗಿ ಇಬ್ಬಾಗಿಸಲಾಗಿದೆ. ಕೆಲವು ವಾರ್ಡ್‌ಗಳು ಮತ್ತೊಂಡು ವಾರ್ಡ್‌ ವ್ಯಾಪ್ತಿಗೆ ಬಂದಿವೆ. ಗಡಿ ನಿಗದಿಯಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ. ಇದರಿಂದ ಚುನಾವಣೆಗೆ ಸ್ಪರ್ಧಿಸುವವರು ಹಾಗೂ ಮತದಾರರಲ್ಲಿ ಗೊಂದಲ ಉಂಟಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !