ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 9.82 ಲಕ್ಷ ಅರ್ಹ ಮತದಾರರು

ನಾಲ್ಕು ಕ್ಷೇತ್ರಗಳ ಚುನಾವಣೆ ಕುರಿತು ಸಾಮಾನ್ಯ ವೀಕ್ಷಕರಿಂದ ಚುನಾವಣಾ ಸಿದ್ಧತೆ ಪರಿಶೀಲನೆ
Last Updated 28 ಏಪ್ರಿಲ್ 2018, 13:58 IST
ಅಕ್ಷರ ಗಾತ್ರ

ಯಾದಗಿರಿ: ‘ಪ್ರಸಕ್ತ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿ ಒಟ್ಟು 9,82,363 ಮತದಾರರಿದ್ದು, ಚುನಾವಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ‘ ಎಂದು ಜಿಲ್ಲಾ ಚುನಾವಣಾಧಿಕಾರಿ ಜೆ.ಮಂಜನಾಥ್ ಚುನಾವಣಾ ವೀಕ್ಷಕರಿಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನೋಡಲ್‌ ಅಧಿಕಾರಿಗಳೊಂದಿಗೆ ಚುನಾವಣಾ ವೀಕ್ಷಕರ ಸಭೆ ನಡೆಸಿದರು. ‘ಫೆ. 28ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಮತದಾರರ ಅಂತಿಮ ಪಟ್ಟಿಯಲ್ಲಿ 9,61,898 ಮತದಾರರು ಇದ್ದರು. ಮಾ.1ರಿಂದ ಏ.14ರ ವರೆಗೆ ‘ಮಿಂಚಿನ ನೋಂದಣಿ’ ಸೇರಿದಂತೆ ಕೊನೆಯ ಅವಕಾಶವಾಗಿ ಹೊಸ ಮತದಾರರ ಸೇರ್ಪಡೆ, ಹೆಸರು ತೆಗೆದು ಹಾಕುವುದು, ತಿದ್ದುಪಡಿ, ಕ್ಷೇತ್ರ ಬದಲಾವಣೆಗಾಗಿ ಅವಕಾಶ ಒದಗಿಸಲಾಗಿತ್ತು. ಅದರಂತೆ ಈ ಅವಧಿಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಮತಕ್ಷೇತ್ರಗಳಲ್ಲಿ 29,961 ಹೊಸ ಮತದಾರರ ಸೇರ್ಪಡೆ ಮಾಡಲಾಯಿತು. ಮರಣ, ನಕಲಿ ಹಾಗೂ ವರ್ಗಾವಣೆ ಹಿನ್ನೆಲೆಯಲ್ಲಿ 9,492 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಏ.24ರಂದು ಅಂತಿಮವಾಗಿ ಮತದಾರರ ಪಟ್ಟಿಯಲ್ಲಿ ಒಟ್ಟಾರೆ ಜಿಲ್ಲೆಯಲ್ಲಿ 9,82,363 ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದು, ಅವರಲ್ಲಿ 4,91,707 ಪುರುಷರು, 4,90,656 ಮಹಿಳಾ ಮತದಾರರು ಇದ್ದಾರೆ. ಈಗ ಶೇ 99.24ರಷ್ಟು ಹೆಚ್ಚಿಸಲಾಗಿದೆ. ಅಲ್ಲದೇ ಮೊದಲ ಬಾರಿ ಮತ ಚಲಾಯಿಸಲು ಹಕ್ಕು ಪಡೆದ ಯುವಕರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ’ ಎಂದು ವಿವರಿಸಿದರು.

ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಪಾಲಿಸುವ ನಿಟ್ಟಿನಲ್ಲಿ 21 ಸ್ಥಾಯಿ ಕಣ್ಗಾವಲು ತಂಡ (ಎಸ್‌ಎಸ್‌ಟಿ)ಗಳನ್ನು ಸ್ಥಾಪಿಸಿ ವಾಹನಗಳ ತಪಾಸಣೆ ಕೈಗೊಳ್ಳಲಾಗುತ್ತಿದೆ. ಇದಲ್ಲದೇ, 33 ಕ್ಷಿಪ್ರ ಸಂಚಾರಿ ದಳ (ಎಫ್‌ಎಸ್‌ಟಿ) ದಿನದ 24X7 ಗಂಟೆ ಮೂರು ಶಿಫ್ಟ್‌ಗಳಲ್ಲಿ ಕ್ಷೇತ್ರವಾರು ಸಂಚರಿಸುತ್ತಾ ಕಾರ್ಯ ನಿರ್ವಹಿಸುತ್ತಿವೆ. 20 ವೀಡಿಯೊ ಕಣ್ಗಾವಲು ತಂಡ (ವಿಎಸ್‌ಟಿ) ಸಹ ಜಿಲ್ಲೆಯಲ್ಲಿ ಪ್ರತಿದಿನ ಜರುಗುವ ಚುನಾವಣಾ ಪ್ರಚಾರಗಳ ಮೇಲೆ ನಿಗಾವಹಿಸುತ್ತಾ, ವೀಡಿಯೊ ವೀಕ್ಷಣಾ ತಂಡ (ವಿವಿಟಿ)ದೊಂದಿಗೆ ಅಭ್ಯರ್ಥಿಗಳ ಖರ್ಚುವೆಚ್ಚಗಳ ಮಾಹಿತಿಯನ್ನು ಚುನಾವಣಾ ಲೆಕ್ಕ ನಿರ್ವಹಣಾ ತಂಡಕ್ಕೆ ಒದಗಿಸುತ್ತಿರುವ ವ್ಯವಸ್ಥೆಯ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 21 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಈ ಪೈಕಿ ಎಂಟು ಕಡೆ ಅಬಕಾರಿ ಇಲಾಖೆಯ ಪೊಲೀಸರು ಇದ್ದು, ಅಂತರರಾಜ್ಯ ಗಡಿ (ತೆಲಂಗಾಣ) ಮೂರು ಹಾಗೂ ಅಂತರ ಜಿಲ್ಲೆಯ ಗಡಿಯಲ್ಲಿ ಐದು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಇದುವರೆಗೂ 317ಕಡೆ ಅಬಕಾರಿ ದಾಳಿ ನಡೆಸಿ, 101 ಪ್ರಕರಣಗಳನ್ನು ದಾಖಲಿಸಿಕೊಂಡು 40 ಜನ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.

‘ಬಂಧಿತರಿಂದ ₹3,75,911 ಲಕ್ಷ ಮೌಲ್ಯದ 1,186 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ₹9,39,433 ಮೌಲ್ಯದ 22ದ್ವಿಚಕ್ರ ವಾಹನ, ₹ 4,50,000 ಮೌಲ್ಯದ ಎರಡು ನಾಲ್ಕು ಚಕ್ರದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ, ಅಗತ್ಯ ದಾಖಲಾತಿಗಳನ್ನು ಹೊಂದಿರದ ನೀತಿ ಸಂಹಿತೆ ಉಲ್ಲಂಘನೆಯ ಸಂಬಂಧ ₹20.95ಲಕ್ಷ ಜಪ್ತಿ ಮಾಡಲಾಗಿದೆ’ ಎಂದು ವಿವರಿಸಿದರು.

ಪೊಲೀಸ್ ನೋಡಲ್ ಅಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ,‘ಚುನಾವಣಾ ಸಂಬಂಧ ಎಂಟು ಪ್ರಕರಣಗಳನ್ನು ದಾಖಲಿಸಿಕೊಂಡು, ₹16,91,020 ವಶಪಡಿಸಿ ಕೊಳ್ಳಲಾಗಿದೆ. ಸಂಶಯಾಸ್ಪದವಾದ 803 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಈ ಪೈಕಿ 441 ಜನರು ಕರಾರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಮೊಬೈಲ್ ನೆಟ್‌ವರ್ಕ್ ಬಾರದ ಕಡೆ ವಾಕಿಟಾಕಿಗಳನ್ನು ನೀಡಲಾಗಿದೆ’ ಎಂದು ತಿಳಿಸಿದರು.

ಸುರಪುರ ಹಾಗೂ ಶಹಾಪುರ ಕ್ಷೇತ್ರಗಳ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಬೀರೇಂದ್ರ ಭೂಷಣ್, ಯಾದಗಿರಿ ಕ್ಷೇತ್ರಕ್ಕೆ ಡಾ.ಶಕೀಲ್ ಪಿ.ಅಹ್ಮದ್, ಗುರುಮಠಕಲ್ ಕ್ಷೇತ್ರಕ್ಕೆ ಕೆ.ಶಾರದಾ ದೇವಿ ಅವರನ್ನು ಹಾಗೂ ನಾಲ್ಕೂ ಕ್ಷೇತ್ರಗಳ ಪೊಲೀಸ್ ವೀಕ್ಷಕರಾಗಿ ಎಚ್.ಹಿಮೇಂದ್ರನಾಥ್ ಆಗಮಿಸಿ ನೋಡೆಲ್ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆದರು.

ಪ್ರಕಾಶ ಜಿ.ರಜಪೂತ, ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ನಾಲ್ಕು ಮತಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಜರಿದ್ದರು.

**
ಗುರುಮಠಕಲ್ ಮತಕ್ಷೇತ್ರದಲ್ಲಿ ದೂರವಾಣಿ, ಮೊಬೈಲ್ ಸಂಪರ್ಕ ಸಿಗದ 7 ಮತಗಟ್ಟೆಗಳ ವ್ಯಾಪ್ತಿಯಲ್ಲಿ ವೈರ್‌ಲೆಸ್ ವ್ಯವಸ್ಥೆ ಮಾಡಿ ಸಂಪರ್ಕ ಕಲ್ಪಿಸಲಾಗಿದೆ
– ಜೆ.ಮಂಜುನಾಥ ‌ಜಿಲ್ಲಾ ಚುನಾವಣಾಧಿಕಾರಿ ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT