ಭಾನುವಾರ, ನವೆಂಬರ್ 17, 2019
27 °C

ಸುತ್ತಿಗೆಯಿಂದ ಹೊಡೆದು ಮಹಿಳೆ ಕೊಲೆ

Published:
Updated:

ಚಿತ್ರದುರ್ಗ: ಸುತ್ತಿಗೆಯಿಂದ ತಲೆಗೆ ಹೊಡೆದು ಕವಿತಾ ಬಾಯಿ (25) ಎಂಬುವರನ್ನು ಕೊಲೆ ಮಾಡಿದ ಘಟನೆ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಸಮೀಪ ಸೋಮವಾರ ಹಾಡಹಗಲೇ ನಡೆದಿದೆ.

ಕೊಲೆಯಾದ ಕವಿತಾ, ರಾಯಚೂರು ಜಿಲ್ಲೆಯವರಾಗಿದ್ದು, ನನ್ನಿವಾಳ ಸಮೀಪದ ‘ಮಧು ಕ್ರಷರ್‌’ನಲ್ಲಿ ಎರಡು ವಾರಗಳಿಂದ ಕೂಲಿ ಕೆಲಸ ಮಾಡುತ್ತಿದ್ದರು. ಇದೇ ಕ್ರಷರ್‌ನಲ್ಲಿ ಕಾರ್ಮಿಕನಾಗಿದ್ದ ದೇವೇಂದ್ರ ನಾಯ್ಕ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಕಲ್ಲು ಗಣಿಗೆ ಸೋಮವಾರ ರಜೆ ಇತ್ತು. ಹೀಗಾಗಿ, ಈ ಪ್ರದೇಶ ನಿರ್ಜನವಾಗಿತ್ತು. ಬೆಳಿಗ್ಗೆ ಇವರಿಬ್ಬರು ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. 9 ಗಂಟೆಯ ಸುಮಾರಿಗೆ ಕವಿತಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ಅರುಣ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮಹಿಳೆಯ ಕೈಬಳೆ ಒಡೆದು ಹೋಗಿವೆ. ಇಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಸಾಧ್ಯತೆ ಇದೆ. ಸ್ಥಳದಲ್ಲಿ ಸುತ್ತಿಗೆ ಸಿಕ್ಕಿದೆ. ಇದು ಕಲ್ಲು ಒಡೆಯಲು ಬಳಸುತ್ತಿದ್ದದು ಎಂಬುದು ಗೊತ್ತಾಗಿದೆ. ಗಂಜಿಗಟ್ಟೆಯ ದೇವೇಂದ್ರ ನಾಯ್ಕ ನಾಪತ್ತೆಯಾಗಿದ್ದಾನೆ. ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ’ ಎಂದು ವಿವರಿಸಿದರು.

‘ಹಲವು ದಿನಗಳಿಂದ ಕ್ರಷರ್‌ನಲ್ಲಿ ದೇವೇಂದ್ರ ಕೆಲಸ ಮಾಡುತ್ತಿದ್ದ. ಇದೇ ಕ್ರಷರ್‌ಗೆ ಈಚೆಗೆ ಕವಿತಾ ಬಾಯಿ ಸೇರಿದ್ದರು. ಇಬ್ಬರು ಸಲುಗೆಯಿಂದಲೇ ಇರುತ್ತಿದ್ದರು. ಆರೋಪಿ ಪತ್ತೆಯಾದ ಬಳಿಕ ಕೊಲೆಗೆ ಸ್ಪಷ್ಟ ಕಾರಣ ತಿಳಿಯಲಿದೆ’ ಎಂದರು.

ಪ್ರತಿಕ್ರಿಯಿಸಿ (+)