ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಪ್ರಭು ಸ್ವಾಮೀಜಿಗೆ ಮುರುಘಾ ಮಠದ ಉಸ್ತುವಾರಿ

ಮುರುಘಾ ಮಠದ ಧಾರ್ಮಿಕ ಕೈಂಕರ್ಯ ಮುಂದುವರಿಕೆಗೆ ಮುರುಘಾಶ್ರೀ ಅವಕಾಶ
Last Updated 16 ಅಕ್ಟೋಬರ್ 2022, 8:58 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠದ ಪೂಜಾ ಕೈಂಕರ್ಯ ಹಾಗೂ ಮಠದ ದೈನಂದಿನ ಚಟುವಟಿಕೆಯ ಉಸ್ತುವಾರಿಗೆ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅವರನ್ನು ಶಿವಮೂರ್ತಿ ಮುರುಘಾ ಶರಣರು ನೇಮಕ ಮಾಡಿದ್ದಾರೆ.

ಹೈಕೋರ್ಟ್ ಅನುಮತಿ ಪಡೆದು ಕಾರಾಗೃಹದಲ್ಲಿ ಈ ಪ್ರಕ್ರಿಯೆಯನ್ನು ಶನಿವಾರ ಪೂರ್ಣಗೊಳಿಸಲಾಗಿದೆ. ಈ ಬಗ್ಗೆ ಮಠ ಅಧಿಕೃತವಾಗಿ ಭಾನುವಾರ ಪ್ರಕಟಣೆ ನೀಡಿದೆ. ಈ ನೇಮಕ ತಾತ್ಕಾಲಿಕ ಅವಧಿಗೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ಸಲಹಾ ಸಮಿತಿ, ಆಡಳಿತ ಮಂಡಳಿ ಸಹಮತ ನೀಡಿದೆ ಎನ್ನಲಾಗಿದೆ.

ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿ ಕಾರಾಗೃಹದಲ್ಲಿ ಇರುವ ಶಿವಮೂರ್ತಿ ಮುರುಘಾ ಶರಣರು ಮಠದ ಉಸ್ತುವಾರಿ ನೇಮಕಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೊರೆ ಹೋಗಿದ್ದರು. ಅ.12ರಂದು ನ್ಯಾಯಾಲಯದ ಅನುಮತಿ ಪಡೆದು ಕಾರಾಗೃಹ ಅಧೀಕ್ಷರನ್ನು ಸಂಪರ್ಕಿಸಲಾಗಿತ್ತು. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಅ.15ರಂದು ಕಾಲಾವಕಾಶ ನಿಗದಿಪಡಿಸಲಾಗಿತ್ತು.

'ಮಠದ ಆಡಳಿತ ಮಂಡಳಿ ಸದಸ್ಯರು, ವಕೀಲರು ಕಾರಾಗೃಹಕ್ಕೆ ತೆರಳಿ ಅಧೀಕ್ಷಕರ ಸಮ್ಮುಖದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಏಕ ಸದಸ್ಯ ಟ್ರಸ್ಟ್ ನಲ್ಲಿ ಮುರುಘಾಶ್ರೀ ಅವರಿಗೆ ಮಾತ್ರ ಪರಮೋಚ್ಛ ಅಧಿಕಾರ ಇದೆ. ಯಾರನ್ನಾದರೂ ನೇಮಕ ಮಾಡುವ ಸ್ವಾತಂತ್ರ್ಯಬನ್ನು ಗುರುಗಳು ಹೊಂದಿದ್ದಾರೆ. ಅದರಂತೆ ಬಸವಪ್ರಭು ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ' ಎಂದು ಶರಣರ ಪರ ವಕೀಲ ಉಮೇಶ ಮಾಹಿತಿ ನೀಡಿದ್ದಾರೆ.

'ಶಿವಮೂರ್ತಿ ಮುರುಘಾ ಶರಣರು ಬಂಧನಕ್ಕೆ ಒಳಗಾಗುವ ಮುನ್ನ ದಾವಣಗೆರೆ ಹೆಬ್ಬಾಳು ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಅವರನ್ನು ನೇಮಕ ಮಾಡಿದ್ದರು. ಇದು ಮೌಖಿಕ ಆದೇಶವಾಗಿತ್ತು. ಭಕ್ತರಲ್ಲಿ ಈ ಬಗ್ಗೆ ಗೊಂದಲ ನಿರ್ಮಾಣವಾಗಿತ್ತು. ಈಗ ಕಾನೂನು ಬದ್ದವಾಗಿ ಬಸವಪ್ರಭು ಸ್ವಾಮೀಜಿ ಅವರಿಗೆ ಆದೇಶ ನೀಡಲಾಗಿದೆ' ಎಂದು ಮಠದ ಸಲಹಾ ಸಮಿತಿ ಸದಸ್ಯ ಜೀತೇಂದ್ರ ಮಾಹಿತಿ ನೀಡಿದ್ದಾರೆ.

ಮುರುಘಾಶ್ರೀ ಆಶೀರ್ವಾದ ಇದೆ

'ಮಠದ ಕರ್ತೃಗದ್ದುಗೆ ಪೂಜೆ, ದಾಸೋಹ ಹಾಗೂ ಮಠದ ದೈನಂದಿನ ಚಟುವಟಿಕೆ ನೋಡಿಕೊಳ್ಳಲು ಗುರುಗಳು ಆದೇಶ ನೀಡಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಮಠವನ್ನು ನೋಡಿಕೊಳ್ಳುವ ತಾತ್ಕಾಲಿಕ ಅವಕಾಶ ಸಿಕ್ಕಿದೆ. ಇಂದಿನಿಂದ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದೇನೆ. ಇದಕ್ಕೆ ಮುರುಘಾಶ್ರೀ ಆಶೀರ್ವಾದ ಇದೆ' ಎಂದು ಬಸವಪ್ರಭು ಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT