ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಜಾಗೃತಿ ಮೂಡಿಸಿದ ಉತ್ಸವ

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು
Last Updated 1 ನವೆಂಬರ್ 2021, 11:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಧ್ಯ ಕರ್ನಾಟಕದಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸುವಲ್ಲಿ ಶರಣ ಸಂಸ್ಕೃತಿ ಉತ್ಸವ ಯಶಸ್ವಿಯಾಗಿದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮುರುಘಾ ಮಠ ದಕ್ಷತೆಯಿಂದ ಮಾಡಿಕೊಂಡು ಬಂದಿದೆ. ಎಲ್ಲ ಕ್ಷೇತ್ರ ಹಾಗೂ ಧರ್ಮಗಳನ್ನು ಒಳಗೊಂಡು ಉತ್ಸವ ನಡೆಸಿದ್ದರಿಂದ ಯಶಸ್ಸು ಸಾಧ್ಯವಾಗುತ್ತಿದೆ. ಮುಂದಿನ ವರ್ಷದ ಉತ್ಸವಕ್ಕೆ ಈಗಲೇ ಸಿದ್ಧತೆ ಆರಂಭವಾಗಿದೆ’ ಎಂದು ಹೇಳಿದರು.

‘ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಹಾಗೂ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿಯೇ ಮಠದ ಉದ್ದೇಶ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಯ ಗಮನ ಸೆಳೆಯುವ ಪ್ರಯತ್ನವನ್ನು ಉತ್ಸವದಲ್ಲಿಯೂ ಮಾಡಲಾಯಿತು. ಕೈಗಾರಿಕಾ ಕಾರಿಡಾರ್‌ ಸ್ಥಾಪಿಸಲು ಮುಖ್ಯಮಂತ್ರಿ ಭರವಸೆ ನೀಡಿರುವುದು ಸ್ವಾಗತಾರ್ಹ ನಡೆ’ ಎಂದರು.

2022ಕ್ಕೆ ಮಠಾಧೀಶರ ಸಮ್ಮೇಳನ

ಸರ್ವ ಮಠಾಧೀಶರ ಸಮ್ಮೇಳನವನ್ನು 2022ರಲ್ಲಿ ನಡೆಸಲಾಗುತ್ತದೆ. ಪ್ರಮುಖ ಮಠಾಧೀಶರೊಂದಿಗೆ ಚರ್ಚಿಸಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

‘ಶರಣ ಸಂಸ್ಕೃತಿ ಉತ್ಸವ ಮುಗಿದ ತಕ್ಷಣ ಸರ್ವ ಮಠಾಧೀಶರ ಸಮ್ಮೇಳನ ನಿಗದಿಯಾಗಿತ್ತು. ದಸರಾ ಮಹೋತ್ಸವದ ಸಂದರ್ಭವಾಗಿದ್ದರಿಂದ ಹಲವು ಮಠಾಧೀಶರಿಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅನಾನುಕೂಲವಾಗುತ್ತಿತ್ತು. ಹೀಗಾಗಿ, ತಾತ್ಕಾಲಿಕವಾಗಿ ಮುಂದೂಡಲಾಯಿತು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಶರಣರಿಗೆ ಡಿ.ಲಿಟ್‌ ಪದವಿ

ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿದ ‘ವಚನ ಸಂಸ್ಕೃತಿಯ ಸಮುದಾಯ ತತ್ವ ಮತ್ತು ಸಮಕಾಲೀನ ಸಂದರ್ಭ’ ಮಹಾಪ್ರಬಂಧವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಡಿ.ಲಿಟ್‌ ಪದವಿಗೆ ಅಂಗೀಕರಿಸಿದೆ.

‘2019ರಲ್ಲಿ ಡಿ.ಲಿಟ್‌ಗೆ ನೋಂದಣಿ ಪಡೆಯಲಾಗಿತ್ತು. ಎರಡು ವರ್ಷದಲ್ಲಿ 280 ಪುಟಗಳ ಮಹಾಪ್ರಬಂಧವನ್ನು ಶರಣರು ರಚಿಸಿದ್ದಾರೆ. ಇದೇ ತಿಂಗಳಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡುವ ಸಾಧ್ಯತೆ ಇದೆ’ ಎಂದು ಮುರುಘಾ ಮಠದ ಡಾ.ಸಿ.ಟಿ.ಜಯಣ್ಣ ಮಾಹಿತಿ ನೀಡಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕೆಇಬಿ ಷಣ್ಮುಖಪ್ಪ ಹಾಗೂ ಪತ್ರಕರ್ತ ರವಿ ಉಗ್ರಾಣ ಅವರನ್ನು ಸನ್ಮಾನಿಸಲಾಯಿತು. ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್‌.ಲಿಂಗಮೂರ್ತಿ, ಕಾಂಗ್ರೆಸ್‌ ಮುಖಂಡ ಹನುಮಲಿ ಷಣ್ಮುಖಪ್ಪ, ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಎಂ.ಟಿ.ಮಲ್ಲಿಕಾರ್ಜುನಸ್ವಾಮಿ, ಪ್ರಭಾಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT