ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಮಠಕ್ಕೆ ಮೌನ ಆವರಿಸಿಲ್ಲ: ಮಹಾಂತ ರುದ್ರೇಶ್ವರ ಸ್ವಾಮೀಜಿ

ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿಕೆ
Last Updated 6 ಸೆಪ್ಟೆಂಬರ್ 2022, 4:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಭವ್ಯ ಪರಂಪರೆಯ ಮುರುಘಾ ಮಠದಲ್ಲಿ ಯಾವುದೇ ರೀತಿಯ ನೀರವ ಮೌನ ಆವರಿಸಿಲ್ಲ. ಎಂದಿನಂತೆ ನಿರ್ಭಯವಾಗಿ ಭಕ್ತರು ಆಗಮಿಸಿ ಶ್ರೀಮಠದ ಏಳ್ಗೆಗೆ ಸಹಕರಿಸಬೇಕು ಎಂದು ಮುರುಘಾ ಮಠದ ಪ್ರಭಾರ ಪೀಠಾಧಿಪತಿ ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ತಿಳಿಸಿದರು.

ನಗರದ ಬಸವ ಕೇಂದ್ರ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್‌.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಸಹಯೋಗದಲ್ಲಿ ಸೋಮವಾರ ಅನುಭವ ಮಂಟಪದಲ್ಲಿ ನಡೆದ 32ನೇ ವರ್ಷದ ಒಂಬತ್ತನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಮಠದಲ್ಲಿ ಚಾಚುತಪ್ಪದೆ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ಅನ್ನ ದಾಸೋಹ, ಶಿಕ್ಷಣ ದಾಸೋಹ, ಮುರುಘಾ ವನ ವೀಕ್ಷಣೆ ಎಂದಿನಂತೆ ಇರುತ್ತದೆ’ ಎಂದು ಹೇಳಿದರು.

‘ಮಠದಲ್ಲಿ ಕಳೆದ 32 ವರ್ಷಗಳಿಂದ ಒಂದು ತಿಂಗಳು ತಪ್ಪದೆ ಸಾಮೂಹಿಕ ವಿವಾಹ ಮಹೋತ್ಸವ ನಡೆಸಲಾಗಿದೆ. ಇದು ಗಿನ್ನಿಸ್‌ ದಾಖಲೆಯಸನಿಹದಲ್ಲಿದೆ. ದೀನ ದಲಿತರ ಅಭಿವೃದ್ಧಿಗೆ ನಾಡಿನ ಅನೇಕ ಮಠಮಾನ್ಯಗಳು ಶ್ರಮಿಸುತ್ತಿವೆ’ ಎಂದರು.

‘ಮಾನವನ ಬದುಕು ಹಸನಾಗಬೇಕೆಂದರೆ ಶಿಕ್ಷಣ ಬಹಳ ಮುಖ್ಯ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ಸಾಮಾನ್ಯ ಶಿಕ್ಷಕರಾಗಿ, ನಂತರ ರಾಷ್ಟ್ರದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದರು. ಅವರ ಸಾಧನೆ ನಮಗೆಲ್ಲ ಆದರ್ಶ’ ಎಂದು ತಿಳಿಸಿದರು.

ಗುರುಮಠಕಲ್‌ನ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗದಂತೆ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ಆರಂಭಿಸಲಾಯಿತು. 17 ಸಾವಿರ ಜೋಡಿಗಳು ವಿವಾಹವಾಗಿರುವುದು ದಾಖಲೆಯಾಗಿದೆ. ಇದೊಂದು ಆದರ್ಶ ಕಾರ್ಯಕ್ರಮ’ ಎಂದರು.

‘ಸತಿಪತಿಗಳೊಂದಾದ ಭಕ್ತಿ ಶಿವಂಗೆ ಹಿತವಪ್ಪುದು. ಸಾಂಸಾರಿಕ ಬದುಕಿನಲ್ಲಿ ಸಾಮರಸ್ಯ ಮುಖ್ಯ. ಬದುಕು ನಿಂತ ನೀರಾಗದೆ ನಿರಂತರ ಹರಿಯುವ ನದಿಯಾಗಬೇಕು’ ಎಂದು ತಿಳಿಸಿದರು.

‘ಅದೆಷ್ಟೋ ಬಡಜನರು ಇಲ್ಲಿ ವಿವಾಹವಾಗಿ ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ. ಅವರ ಬದುಕು ಹಸನಾಗಿದೆ. ಬಸವಾದಿ ಶರಣರ ಆಶಯದಂತೆ ನಡೆಯುವ ಈ ವಿವಾಹ ಕಾರ್ಯಕ್ರಮ ಇಂದಿನ ದಿನಗಳಲ್ಲಿ ಪ್ರಸ್ತುತವೆನಿಸಿದೆ. ಮದುವೆ ಎಂಬುದು ಆಡಂಬರವಲ್ಲ, ಅದೊಂದು ಆದರ್ಶ’ ಎಂದರು.

ಇದೇ ವೇಳೆ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. 6 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅಥಣಿಯ ಶಿವಬಸವ ಗುರುಮುರುಘರಾಜೇಂದ್ರ ಸ್ವಾಮೀಜಿ, ದಾವಣಗೆರೆಯ ಬಸವಪ್ರಭು ಸ್ವಾಮೀಜಿ, ಹಾವೇರಿಯ ಬಸವ ಶಾಂತಲಿಂಗ ಸ್ವಾಮೀಜಿ, ಶರಣೆ ಮುಕ್ತಾಯಕ್ಕ, ಗುಂಡಯ್ಯ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯಕಾರಿ ಮಂಡಳಿಯ ಎಂ.ಟಿ.ಮಲ್ಲಿಕಾರ್ಜುನ ಸ್ವಾಮಿ, ಎಸ್‌.ಷಣ್ಮುಖಪ್ಪ, ಸಿದ್ದಾಪುರ ಎಸ್‌.ವಿ.ನಾಗರಾಜಪ್ಪ, ಎಚ್‌.ಆನಂದಪ್ಪ, ಮಹಡಿ ಶಿವಮೂರ್ತಿ , ಟಿ.ಪಿ.ಜ್ಞಾನಮೂರ್ತಿ, ಶಿವಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT