ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಹಕ್ಕು ಚಲಾವಣೆಗೆ ಕ್ಷಣಗಣನೆ

Last Updated 3 ಮೇ 2019, 17:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ಏ.18ರಂದು ನಡೆಯಲಿದೆ. ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯ 2,161 ಮತಗಟ್ಟೆಯಲ್ಲಿ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಹಕ್ಕು ಚಲಾಯಿಸಬಹುದಾಗಿದೆ.

ಪ್ರಜಾತಂತ್ರದ ಹಬ್ಬವೆಂದೇ ಬಿಂಬಿತವಾಗಿರುವ ಮತದಾನಕ್ಕೆ ತಿಂಗಳಿಂದ ಸಜ್ಜಾಗಿದ್ದ ಚುನಾವಣಾ ಸಿಬ್ಬಂದಿ ಬುಧವಾರ ಉತ್ಸಾಹದಿಂದ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ಅಭ್ಯರ್ಥಿ ಆಯ್ಕೆಗೆ ಮತದಾರರು ನೀಡುವ ಆದೇಶ ಹೊತ್ತು ಗುರುವಾರ ರಾತ್ರಿ ಮರಳಲಿದ್ದಾರೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.

ತುಮಕೂರು ಜಿಲ್ಲೆಯ ಶಿರಾ, ಪಾವಗಡ ಸೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಇದು 17ನೇ ಸಾರ್ವತ್ರಿಕ ಚುನಾವಣೆ. ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ, ಬಿಜೆಪಿ, ಬಿಎಸ್‌ಪಿ ಅಭ್ಯರ್ಥಿಗಳು ಸೇರಿ 19 ಉಮೇದುವಾರರು ಕಣದಲ್ಲಿ ಇದ್ದಾರೆ. ಮತದಾನದ ಮುನ್ನಾದಿನ ಅಭ್ಯರ್ಥಿಗಳು ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.

ಮಸ್ಟರಿಂಗ್‌ ಅಚ್ಚುಕಟ್ಟು:ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮುರು, ಹೊಸದುರ್ಗ ಹಾಗೂ ಹೊಳಲ್ಕೆರೆಯಲ್ಲಿ ಮಸ್ಟರಿಂಗ್‌ ಹಾಗೂ ಡಿಮಸ್ಟರಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತಯಂತ್ರಗಳ ವಿತರಣೆ ಪ್ರಕ್ರಿಯೆ ಬುಧವಾರ ಬೆಳಿಗ್ಗೆ 8ರಿಂದ ಮಧ್ಯಾಹ್ನದವರೆಗೂ ನಡೆಯಿತು.

ಚಿತ್ರದುರ್ಗದ ಕಲಾ ಕಾಲೇಜು ಆವರಣದಲ್ಲಿ ತೆರೆದಿದ್ದ ಮಸ್ಟರಿಂಗ್‌ ಕೇಂದ್ರಕ್ಕೆ ಬಂದ ಸಿಬ್ಬಂದಿಗೆ ಬೆಳಗಿನ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 283 ಮತಗಟ್ಟೆಗೆ ಅಗತ್ಯವಿರುವ ಪರಿಕರ ವಿತರಣೆ ಅಚ್ಚುಕಟ್ಟಾಗಿ ನಡೆಯಿತು. ಮತಗಟ್ಟೆಗೆ ಅನುಗುಣವಾಗಿ ನಿಗದಿಪಡಿಸಿದ್ದ ಕೊಠಡಿಯಲ್ಲಿ ಕುಳಿತ ಸಿಬ್ಬಂದಿಗೆ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರ, ಮತಖಾತರಿ ಯಂತ್ರ (ವಿ.ವಿ.ಪ್ಯಾಟ್‌) ಹಾಗೂ ಮತಗಟ್ಟೆಗೆ ಅಗತ್ಯವಿರುವ ಪರಿಕರಗಳನ್ನು ವಿತರಿಸಿದರು.

ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಇಬ್ಬರು ಸಹಾಯಕರನ್ನು ಪ್ರತಿ ಮತಗಟ್ಟೆಗೂ ನಿಯೋಜಿಸಲಾಗಿದೆ. ಭದ್ರತೆಗೆ ಪೊಲೀಸ್‌ ಸಿಬ್ಬಂದಿ ಕೂಡ ಇರಲಿದ್ದಾರೆ. ಮತಯಂತ್ರ ಹಾಗೂ ಪರಿಕರಗಳನ್ನು ಸ್ವೀಕರಿಸಿದ ಸಿಬ್ಬಂದಿಯ ಮೊಗದಲ್ಲಿ ಮಂದಹಾಸ ಮೂಡಿತ್ತು. ಮತಯಂತ್ರ ಜೋಡಣೆ, ನಿರ್ವಹಣೆ ಹಾಗೂ ಸಾಗಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತರಬೇತಿ ನೀಡಿದರು. ಮಧ್ಯಾಹ್ನದ ಊಟ ಮುಗಿಸಿಕೊಂಡು ಮತಗಟ್ಟೆಗೆ ಹೊರಟರು.

ಪರಿಸರಸ್ನೇಹಿ ಪರಿಕರ:ಮತಗಟ್ಟೆಗೆ ಇದೇ ಮೊದಲ ಬಾರಿಗೆ ಪರಿಸರಸ್ನೇಹಿ ಪರಿಕರಗಳನ್ನು ಒದಗಿಸಲಾಗಿದೆ. ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲಾಗಿದೆ. ಬಟ್ಟೆಯಿಂದ ತಯಾರಿಸಿದ ಚೀಲಗಳಲ್ಲಿ ಮತದಾನದ ಸಾಮಗ್ರಿಗಳನ್ನು ನೀಡಲಾಗಿದೆ. ಮತಗಟ್ಟೆಯಲ್ಲಿ ಪರಸರ ಸ್ನೇಹಿ ವಾತಾವರಣ ನಿರ್ಮಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಸೂಚನೆ ನೀಡಿದ್ದಾರೆ.

ತಾಪಮಾನ ಏರಿಕೆಯಿಂದ ಬಿಸಿಲಿನ ಧಗೆ ಹೆಚ್ಚಾಗಿದೆ. ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಪ್ರತಿ ಮತಗಟ್ಟೆಗೆ ಕಿಟ್‌ ವಿತರಿಸಲಾಗಿದೆ. ಇದರಲ್ಲಿ ಕೆಲ ಮಾತ್ರೆಗಳು ಹಾಗೂ ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳು ಇವೆ. ಊಟ, ವಸತಿ, ಶೌಚಾಲಯ ಸೇರಿ ಮೂಲ ಸೌಕರ್ಯ ಒದಗಿಸಲಾಗಿದೆ.

‘‍ಪ್ರತಿ ಸಿಬ್ಬಂದಿಗೆ ಊಟದ ಭತ್ಯೆ ₹ 150 ನೀಡಲಾಗುತ್ತಿದೆ. ಊಟದ ವ್ಯವಸ್ಥೆಯನ್ನು ಸಿಬ್ಬಂದಿಯೇ ಮಾಡಿಕೊಳ್ಳಬೇಕು. ಅಗತ್ಯ ಸಹಕಾರವನ್ನು ಮಾತ್ರ ನೀಡಲು ಸಾಧ್ಯವಿದೆ. ಬಿಸಿಯೂಟದ ಸಿಬ್ಬಂದಿಯ ಸೇವೆ ಪಡೆದು ಊಟ ತಯಾರಿಸಿಕೊಳ್ಳಲು ಅವಕಾಶವಿದೆ. ಆದರೆ, ಬಿಸಿಯೂಟದ ಸಾಮಗ್ರಿಗಳನ್ನು ಬಳಸಿಕೊಳ್ಳುವಂತಿಲ್ಲ’ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

50 ಅಣಕು ಮತ:ಕಣದಲ್ಲಿ 19 ಅಭ್ಯರ್ಥಿಗಳು ಇರುವುದರಿಂದ ಎರಡು ಬ್ಯಾಲೆಟ್‌ ಯುನಿಟ್‌ (ಬಿಯು) ಉಪಯೋಗಿಸಲಾಗುತ್ತಿದೆ. ಇವುಗಳನ್ನು ಕ್ರಮಬದ್ಧವಾಗಿ ಜೋಡಿಸುವಂತೆ ಸೂಚಿಸಲಾಗಿದೆ. ಜೋಡಣೆ ಹಾಗೂ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಭಿತ್ತಿಪತ್ರವನ್ನು ಸಿಬ್ಬಂದಿಗೆ ನೀಡಲಾಗಿದೆ. ಮತಗಟ್ಟೆಯಲ್ಲಿ ಇವುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.

ಮತಗಟ್ಟೆಯಲ್ಲಿ ಗುರುವಾರ ನಸುಕಿನಿಂದಲೇ ಮತದಾನದ ಪ್ರಕ್ರಿಯೆ ಆರಂಭವಾಗಲಿದೆ. ಬೆಳಿಗ್ಗೆ 6ರಿಂದ ಅಣಕು ಮತದಾನ ನಡೆಯಲಿದೆ. ಎಲ್ಲ ಅಭ್ಯರ್ಥಿಗಳ ಏಜಂಟರ ಸಮ್ಮುಖದಲ್ಲಿ ಅಣಕು ಮತದಾನ ನಡೆಯಲಿದೆ. ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೆ ಕನಿಷ್ಠ ಒಂದೊಂದು ಮತಹಾಕಿ ಪರಿಶೀಲನೆ ಮಾಡಬಹುದಾಗಿದೆ. ಅಣಕು ಮತದಾನಕ್ಕೆ ಗರಿಷ್ಠ 50 ಮತಗಳನ್ನು ಹಾಕಲು ಅವಕಾಶವಿದೆ. ಎಲ್ಲವೂ ಸರಿಯಾಗಿದ್ದರೆ 7ಕ್ಕೆ ಸರಿಯಾಗಿ ಮತದಾನ ಶುರುವಾಗಲಿದೆ.

ವಿ.ವಿ.ಪ್ಯಾಟ್‌ ಸಂರಕ್ಷಣೆ:ಬಿಸಿಲ ಧಗೆಯಿಂದ ಮತ ಖಾತರಿ ಯಂತ್ರ (ವಿ.ವಿ.ಪ್ಯಾಟ್‌) ಸಂರಕ್ಷಣೆ ಮಾಡುವುದು ಸವಾಲಾಗಿದೆ. ತಾಪಮಾನ ಹೆಚ್ಚಾಗಿರುವ ಮೊಳಕಾಲ್ಮುರು, ಚಳ್ಳಕೆರೆ, ಶಿರಾ ಹಾಗೂ ಪಾವಗಡ ಕ್ಷೇತ್ರಗಳಲ್ಲಿ ಪ್ರಾತ್ಯಕ್ಷಿಕೆ ನೀಡುವಾಗಲೇ ಹಲವು ವಿ.ವಿ.ಪ್ಯಾಟ್‌ಗಳು ಕೈಕೊಟ್ಟಿವೆ.

ಸೆನ್ಸಾರ್‌ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ವಿ.ವಿ.ಪ್ಯಾಟ್‌ಗಳನ್ನು ತಂಪಾದ ಸ್ಥಳದಲ್ಲಿ ಇಡಬೇಕು. ಬಿಸಿಲು ತಾಗಿದರೆ, ಉಷ್ಣಾಂಶ ಹೆಚ್ಚಾದರೆ ಇದು ಕಾರ್ಯನಿರ್ವಹಸುವುದಿಲ್ಲ. ಹೀಗಾಗಿ, ಕಿಟಕಿಯ ಪಕ್ಕದಲ್ಲಿ ಮತಯಂತ್ರ ಇಡದಂತೆ ತಿಳಿವಳಿಕೆ ನೀಡಲಾಗಿದೆ. ಬೆಳಕು ನೇರವಾಗಿ ಯಂತ್ರದ ಮೇಲೆ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸಿಬ್ಬಂದಿಯ ಮೇಲಿದೆ.

‘ಹೆಚ್ಚುವರಿ ಮತಯಂತ್ರ, ವಿ.ವಿ.ಪ್ಯಾಟ್‌ ಇಟ್ಟುಕೊಳ್ಳಲಾಗಿದೆ. ಬಿಸಿಲು ಹೆಚ್ಚಾಗಿರುವ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಈ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಯಂತ್ರ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಖಚಿತವಾದ ತಕ್ಷಣ ಮತ್ತೊಂದು ಯಂತ್ರವನ್ನು ಮತಗಟ್ಟೆಗೆ ಸಾಗಿಸಲಾಗುತ್ತದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ವಿನೋತ್‌ ಪ್ರಿಯಾ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT