ಸೋಮವಾರ, ಸೆಪ್ಟೆಂಬರ್ 28, 2020
28 °C
ನಾಗರಕಟ್ಟೆಗಳಿಗೆ ತೆರಳಿ ಭಕ್ತಿ ಸಮರ್ಪಿಸಿದ ಭಕ್ತಸಮೂಹ

ಶ್ರದ್ಧಾಭಕ್ತಿಯ ನಾಗರಪಂಚಮಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ನಾಗರಪಂಚಮಿ ಹಬ್ಬದ ಅಂಗವಾಗಿ ನಗರದ ವಿವಿಧೆಡೆ ಶುಚಿಗೊಳಿಸಲಾಗಿದ್ದ ನಾಗರಕಟ್ಟೆಗಳತ್ತ ಸೋಮವಾರ ಮನೆಮಂದಿಯಲ್ಲ ಜತೆಗೂಡಿ ಮುಖ ಮಾಡಿದರು. ನಾಗರದೇವರ ವಿಗ್ರಹಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಮರ್ಪಿಸಿದರು.

ಮಹಿಳೆಯರು ಮನೆಯಲ್ಲಿಯೇ ಮಡಿಯಿಂದ ತಯಾರಿಸಿದ ಚಿಗಳಿ, ತಮಟ, ಅಳಿಟ್ಟು, ತಂಬಿಟ್ಟು, ಅಳ್ಳು, ಕಡಲೆಕಾಳು, ಗೆಜ್ಜೆವಸ್ತ್ರ ಹಾಗೂ ತೆಂಗಿನಕಾಯಿ, ಬಾಳೆಹಣ್ಣು ಸೇರಿ ಇತರೆ ಪೂಜಾ ಸಾಮಗ್ರಿಗಳೊಂದಿಗೆ ನಾಗರಕಟ್ಟೆಗಳಿಗೆ ಸಂಭ್ರಮದಿಂದ ಬಂದು ಇಷ್ಟಾರ್ಥ ಈಡೇರಿಸುವಂತೆ ನಾಗದೇವರನ್ನು ಪ್ರಾರ್ಥಿಸಿಕೊಂಡರು.

ಶ್ರಾವಣ ಮಾಸದಲ್ಲಿ ಬರುವ ಅನೇಕ ಹಬ್ಬಗಳು ಸ್ತ್ರೀಯರು ಸಂಭ್ರಮಿಸುವಂಥ ಹಬ್ಬಗಳಾಗಿವೆ. ಭಕ್ತಿ, ಶ್ರದ್ಧೆಯಿಂದ ಆಚರಿಸುವ ಈ ಹಬ್ಬದಲ್ಲಿ ಕೆಲವರು ಬೆಳ್ಳಿ ನಾಗರ ಮತ್ತು ಚಿನ್ನದ ನಾಗರವನ್ನು ನಾಗದೇವತೆಗೆ ಅರ್ಪಿಸುವ ಸಂಪ್ರದಾಯ ಕೂಡ ಇದೆ.

ಹಬ್ಬಕ್ಕಾಗಿ ಮನೆಯಲ್ಲಿ ವಿಶೇಷವಾಗಿ ಎಳ್ಳು ಉಂಡೆ, ಶೇಂಗಾ, ಕಡಲೆ ಸೇರಿ ಇತರೆ ಉಂಡೆಗಳನ್ನು ತಯಾರಿಸಿ ಇಟ್ಟುಕೊಂಡಿದ್ದರು. ಮಳೆ-ಚಳಿಗಾಲದಲ್ಲಿ ಈ ಆಹಾರ ಪದಾರ್ಥಗಳು ಮನುಷ್ಯರನ್ನು ಒಂದಿಷ್ಟು ಬೆಚ್ಚಗಿಡುತ್ತವೆ. ಪೂಜೆ ನೆರವೇರಿಸಿದ ಬಳಿಕ ಮನೆಗೆ ಬಂದು ಕೆಲವರು ಉಂಡೆಗಳ ರುಚಿಯನ್ನೂ ಆಸ್ವಾದಿಸಿದರು.

ಬರಗೇರಮ್ಮ ದೇಗುಲ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲ, ಉಚ್ಚಂಗಿಯಲ್ಲಮ್ಮ ದೇಗುಲ, ಜೋಗಿಮಟ್ಟಿ ರಸ್ತೆ, ರಂಗಯ್ಯನ ಬಾಗಿಲು, ಕಾಮನಬಾವಿ ಬಡಾವಣೆ ಸೇರಿ ವಿವಿಧ ಬಡಾವಣೆಗಳಲ್ಲಿರುವ ನಾಗರಕಟ್ಟೆಗಳಿಗೆ, ನಾಗರ ಹುತ್ತಗಳಿಗೆ ಭಕ್ತರು ಬೆಳಿಗ್ಗೆಯಿಂದಲೇ ಬಂದು ಹಾಲು ಎರೆದರು.

ನಾಗರಚೌತಿ ದಿನ ಸಹ ನಾಗಗಳಿಗೆ ವಿಶೇಷ ದಿನವಾದ್ದರಿಂದ ಭಾನುವಾರ ಕೂಡ ಭಕ್ತರು ಕುಟುಂಬದ ಒಳಿತಿಗಾಗಿ ನಾಗದೇವರಿಗೆ ಪೂಜೆ ನೆರವೇರಿಸಿದರು. ಚೌತಿ ದಿನ ಹಾಲನ್ನು ಎರೆದ ನಂತರ ಕೆಲವರು ಹುತ್ತದ ಮಣ್ಣನ್ನು ಮನೆಗೆ ತಂದು ಅದರಿಂದ ನಾಗದೇವತೆ ನಿರ್ಮಿಸಿ, ಮರುದಿನ ಪಂಚಮಿ ದಿನದಂದು ಮನೆಯಲ್ಲಿ ಮಣ್ಣಿನ ನಾಗದೇವರಿಗೆ ಹಾಲನ್ನು ಎರೆಯುತ್ತಾರೆ. ಈ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ.

ಚೌತಿ ಮತ್ತು ಪಂಚಮಿ ದಿನ ಹಬ್ಬ ಆಚರಿಸದ ಕೆಲವರು ಶ್ರಾವಣ ಮಾಸ ಮುಗಿಯುವುದರೊಳಗೆ ಯಾವುದಾದರೊಂದು ದಿನ ನಾಗದೇವರಿಗೆ ಹಾಲನ್ನು ಎರೆಯುವ ಮೂಲಕ ಭಕ್ತಿಸಮರ್ಪಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು