ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆಯಾಗದ ವಾಹನ; ಸಂಚಾರ ಸಮಸ್ಯೆಗೆ ಸಿಗದ ಪರಿಹಾರ

Last Updated 21 ಏಪ್ರಿಲ್ 2019, 19:31 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾರ್ಕಿಂಗ್‌ ವ್ಯವಸ್ಥೆ ಸರಿಪಡಿಸಲು ಮುಂದಾಗಿದ್ದ ಪೊಲೀಸರು ಮತ್ತೆ ಕೈಚೆಲ್ಲಿದ್ದಾರೆ. ಬಿ.ಡಿ.ರಸ್ತೆಯಲ್ಲಿ ವಾಹನ ನಿಲುಗಡೆ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ.

ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆರು ತಿಂಗಳ ಹಿಂದೆ ಪೊಲೀಸರು ಶ್ರಮಿಸಿದ್ದರು. ವಾಹನ ನಿಲುಗಡೆಗೆ ಸ್ಥಳ ನಿಗದಿಪಡಿಸಿ, ಪಾರ್ಕಿಂಗ್‌ ವ್ಯವಸ್ಥೆಯಲ್ಲಿ ಶಿಸ್ತು ಬೆಳೆಸಲು ಪ್ರಯತ್ನಿಸಿದ್ದರು. ಆದರೆ, ಕಳೆದ ಎರಡು ತಿಂಗಳಿಂದ ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡುತ್ತಿಲ್ಲ. ಇದರಿಂದ ಬಿ.ಡಿ.ರಸ್ತೆಯಲ್ಲಿ ಮತ್ತೆ ಸಂಚಾರ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಸುಮಾರು 65 ಅಡಿ ವಿಸ್ತೀರ್ಣ ಹೊಂದಿದ ರಸ್ತೆಯ ನಡುವೆ ವಿಭಜಕವಿದೆ. ಎರಡು ಬದಿಯಲ್ಲಿ ಪಾದಚಾರಿ ಮಾರ್ಗವಿದೆ. ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದವರೆಗಿನ ರಸ್ತೆ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಬಹುತೇಕ ವಾಣಿಜ್ಯ ಮಳಿಗೆಗಳು ಇದೇ ಮಾರ್ಗದಲ್ಲಿರುವುದರಿಂದ ಜನಜಂಗುಳಿ ಉಂಟಾಗುತ್ತಿದೆ. ಅಂಗಡಿಗಳಿಗೆ ಬರುವ ಗ್ರಾಹಕರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದು ಸಂಚಾರ ಸಮಸ್ಯೆಯನ್ನು ಸೃಷ್ಟಿಸುತ್ತಿದೆ.

ಬಿ.ಡಿ.ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ. ಕಾರು, ದ್ವಿಚಕ್ರ ವಾಹನ ಹಾಗೂ ಅಂಗವಿಕಲರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ. ಆರಂಭದ ಕೆಲ ದಿನ ಇದು ಕಟ್ಟುನಿಟ್ಟಾಗಿ ಜಾರಿಯಾಗಿತ್ತು. ನಿಗದಿತ ಸ್ಥಳ ಬಿಟ್ಟು ಬೇರೆಡೆ ಪಾರ್ಕಿಂಗ್ ಮಾಡಿದರೆ, ಸಂಚಾರ ಪೊಲೀಸರು ಹಾಜರಾಗುತ್ತಿದ್ದರು. ಚಕ್ರಕ್ಕೆ ಲಾಕ್‌ ಜಡಿದು ದಂಡ ವಸೂಲಿ ಮಾಡುತ್ತಿದ್ದರು. ಇದು ಸಾರ್ವಜನಿಕರಲ್ಲಿ ಕೊಂಚ ಅಸಮಾಧಾನ ಮೂಡಿಸಿದರೂ, ಸಂಚಾರ ಸಮಸ್ಯೆಗೆ ಪರಿಹಾರ ನೀಡಿತ್ತು.

ಎರಡು ತಿಂಗಳಿಂದ ಇಂತಹ ಶಿಸ್ತು ಕಾಣುತ್ತಿಲ್ಲ. ನಿಗದಿತ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್‌ ಮಾಡುವುದರಿಂದ ಸಂಚಾರ ಸಮಸ್ಯೆ ಮತ್ತೆ ಬಿಗಡಾಯಿಸುತ್ತಿದೆ. ಬೆಂಗಳೂರು, ಹಿರಿಯೂರು, ಚಳ್ಳಕೆರೆ ಹಾಗೂ ಬಳ್ಳಾರಿ ಮಾರ್ಗದ ಬಸ್ಸುಗಳು ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಬೆಳಿಗ್ಗೆ 9ರಿಂದ ರಾತ್ರಿ 8 ಗಂಟೆಯವರೆಗೂ ಈ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ದೌಡಾಯಿಸುತ್ತಿದ್ದ ಪೊಲೀಸರು ಈಗ ಕಾಣುತ್ತಿಲ್ಲ. ಸಂಚಾರ ನಿಯಮಗಳನ್ನು ವಾಹನ ಸವಾರರು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡದವರ ವಿರುದ್ಧ ದಂಡ ಹಾಕುತ್ತಿಲ್ಲ. ಇದು ಸಮಸ್ಯೆಯ ಸ್ವರೂಪ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿದೆ.

ಸಂಚಾರ ಸಮಸ್ಯೆ ನಿವಾರಣೆಗಾಗಿ ಎಸ್‌ಬಿಎಂ ವೃತ್ತ ಹಾಗೂ ಗಾಂಧಿ ವೃತ್ತದಲ್ಲಿ ಸಿಗ್ನಲ್‌ ದೀಪಗಳನ್ನು ಅಳವಡಿಸಲಾಗಿದೆ. ಇತ್ತೀಚಿನ ಕೆಲ ತಿಂಗಳಿಂದ ಇವು ಕೂಡ ಕಾರ್ಯನಿರ್ವಹಿಸುತ್ತಿಲ್ಲ. ವೇಗವಾಗಿ ಸಂಚರಿಸುವ ಭರದಲ್ಲಿ ವಾಹನಗಳು ಮುನ್ನುಗ್ಗುತ್ತಿವೆ. ಇದರಿಂದ ಪದಚಾರಿಗಳು, ದ್ವಿಚಕ್ರ ವಾಹನ ಸವಾರರು ಸಮಸ್ಯೆಗೆ ಸಿಲುಕುತ್ತಿದ್ದಾರೆ.

ಸಿಗ್ನಲ್‌ ದೀಪ ಇರುವ ಕಡೆ ಜೀಬ್ರಾ ಕ್ರಾಸಿಂಗ್‌ ವ್ಯವಸ್ಥೆ ಕಡ್ಡಾಯ. ಆದರೆ, ಈ ಎರಡೂ ವೃತ್ತದಲ್ಲಿ ಜೀಬ್ರಾ ಕ್ರಾಸಿಂಗ್‌ಗೆ ಬಳಿದ ಬಣ್ಣವೂ ಮಾಸಿಹೋಗಿದೆ. ರಸ್ತೆ ದಾಟಲು ಪದಚಾರಿಗಳು ಕಷ್ಟಪಡಬೇಕಿದೆ.

‘ಚುನಾವಣೆಯಲ್ಲಿ ಸಿಬ್ಬಂದಿ ಸಕ್ರಿಯರಾಗಿದ್ದರಿಂದ ಸಂಚಾರದ ಕಡೆ ಗಮನ ಹರಿಸಲು ಸಾಧ್ಯವಾಗಿಲ್ಲ. ಚುನಾವಣೆ ಭದ್ರತೆಗೆ ಪೊಲೀಸರು ಬೇರೆ ಜಿಲ್ಲೆಗಳಿಗೆ ತೆರಳಿದ್ದಾರೆ. ಮುಂದಿನ 20 ದಿನಗಳಲ್ಲಿ ಈ ಸಮಸ್ಯೆ ಪರಿಹರಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ಅರುಣ್‌ ಆಶ್ವಾಸನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT