ಸೋಮವಾರ, ನವೆಂಬರ್ 18, 2019
29 °C

ಸಿದ್ದರಾಮಯ್ಯ ವಿಲನ್‌, ಎಚ್‌ಡಿಕೆ ಸೈಡ್‌ ಆ್ಯಕ್ಟರ್‌: ಮಾಜಿ ಸಿಎಂ ಕಾಲೆಳೆದ ನಳೀನ್‌

Published:
Updated:
Prajavani

ಚಿತ್ರದುರ್ಗ: ರಾಜ್ಯದಲ್ಲಿ 2013ರಿಂದ ಐದು ವರ್ಷ ‘ವಿಲನ್‌’ ಸರ್ಕಾರವಿತ್ತು. ‘ವಿಲನ್‌’ ಪಾತ್ರಧಾರಿ (ಸಿದ್ದರಾಮಯ್ಯ) ಮುಖ್ಯಮಂತ್ರಿಯಾಗಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ‘ಸೈಡ್‌ ಆ್ಯಕ್ಟರ್‌’ (ಎಚ್‌.ಡಿ. ಕುಮಾರಸ್ವಾಮಿ) ಮುಖ್ಯಮಂತ್ರಿ ಆಗಿದ್ದರು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರ ಕಾಲೆಳೆದರು.

ಬಿಜೆಪಿ ಕಾರ್ಯಕರ್ತರು ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ರಾಜ್ಯದಲ್ಲೀಗ ಹೀರೊ ಸರ್ಕಾರವಿದೆ. ಬಿ.ಎಸ್‌.ಯಡಿಯೂರಪ್ಪ ನಿಜವಾದ ಹೀರೊ. ನೆರೆ ಸಂತ್ರಸ್ತರ ಕಣ್ಣೀರು ಒರೆಸಿದ ಏಕೈಕ ಮುಖ್ಯಮಂತ್ರಿ. ರಾಜ್ಯದ ಜನರು ಕೇಳಿದ್ದನ್ನು ಕೊಡುವ ಕಾಮಧೇನು’ ಎಂದು ವ್ಯಾಖ್ಯಾನಿಸಿದರು.

‘ಕಾಂಗ್ರೆಸ್‌ ನಾಯಕ ಜನಾರ್ದನ ಪೂಜಾರಿ ನನ್ನ ರಾಜಕೀಯ ಗುರು. ಭ್ರಷ್ಟಾಚಾರದ ಲವಲೇಷವನ್ನು ಅಂಟಿಸಿಕೊಳ್ಳದ ಪ್ರಾಮಾಣಿಕರು. ಅವರ ಬಗ್ಗೆ ಈಗಲೂ ಗೌರವವಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಮಹಾತ್ಮ ಗಾಂಧಿ ರಾಮ ರಾಜ್ಯದ ಪರಿಕಲ್ಪನೆ ಮುಂದಿಟ್ಟದ್ದರು. ಜ್ಯಾತ್ಯತೀತ ರಾಷ್ಟ್ರದ ಬಗ್ಗೆ ಎಲ್ಲಿಯೂ ಹೇಳಿಲ್ಲ. ಜಾತ್ಯತೀತ ರಾಷ್ಟ್ರದ ಪರಿಕಲ್ಪನೆ ಜವಾಹರಲಾಲ್‌ ನೆಹರೂ ಅವರದು’ ಎಂದರು.

ನೆರೆ ಪರಿಹಾರಕ್ಕೆ ಶಾಸಕ ಮೊರೆ

ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರದ ಮನವೊಲಿಸುವಂತೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಬಹಿರಂಗ ಸಭೆಯಲ್ಲಿ ಕೋರಿಕೆ ಸಲ್ಲಿಸಿದರು.

‘ಭೀಕರ ಪ್ರವಾಹ ಪರಿಸ್ಥಿತಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೃಹ ಸಚಿವ ಅಮಿತ್‌ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾಮನ್‌ ನರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರದ ನರೆ ಪರಿಹಾರದ ನಿರೀಕ್ಷೆಯಲ್ಲಿ ಜನರಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸೋಣ’ ಎಂದು ಚಂದ್ರಪ್ಪ ಸಲಹೆ ನೀಡಿದರು.

‘ಕೇಂದ್ರ ನೆರೆ ಪರಿಹಾರ ನೀಡುತ್ತಿಲ್ಲವೆಂದು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಆರೋಪ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕಟೀಲು ಅವರು ಕೇಂದ್ರ ಸರ್ಕಾರದ ಮನವೊಲಿಸಲು ಶ್ರಮಿಸಬೇಕು’ ಎಂದು ಮನವಿ ಮಾಡಿದರು.

 

ಪ್ರತಿಕ್ರಿಯಿಸಿ (+)