ಮಂಗಳವಾರ, ನವೆಂಬರ್ 19, 2019
27 °C
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷಗೆ ಅಭಿನಂದನೆ

ಚುನಾವಣೆಗೆ ಸಜ್ಜಾಗಲು ಕಾರ್ಯಕರ್ತರಿಗೆ ನಳೀನ್‌ ಕುಮಾರ್‌ ಕಟೀಲ್‌ ಕರೆ

Published:
Updated:
Prajavani

ಚಿತ್ರದುರ್ಗ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಿ, ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಧ್ವಜ ಹಾರಿಸಿದರೆ ಸರ್ಕಾರಿ ವೈದ್ಯಕೀಯ ಕಾಲೇಜು ಸೇರಿ ಜಿಲ್ಲೆಯ ಎಲ್ಲ ಬೇಡಿಕೆ ಈಡೇರಿಸಲು ಬಿಜೆಪಿ ಬದ್ಧವಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ವಾಗ್ದಾನ ನೀಡಿದರು.

ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿರುವುದರಿಂದ ಬಿಜೆಪಿ ಜಿಲ್ಲಾ ಘಟಕ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಿಜೆಪಿಯ ಸುವರ್ಣಯುಗದಲ್ಲಿ ರಾಜ್ಯ ಘಟಕದ ಅಧ್ಯಕ್ಷರಾಗಿರುವುದಕ್ಕೆ ಹೆಮ್ಮೆ ಇದೆ. ಜನರು ಕೇಳಿದ್ದನ್ನು ಕೊಡುವ ಕಾಮಧೇನು ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಜಿಲ್ಲೆಯ ಜನರ ಸಂಕಷ್ಟದ ಬಗ್ಗೆ ಅರಿವಿದೆ. ಪಕ್ಷಕ್ಕೂ ಕೆಲ ನಿರೀಕ್ಷೆಗಳಿವೆ. ಅವುಗಳನ್ನು ಪೂರೈಸಿದರೆ ಎಲ್ಲ ಬೇಡಿಕೆಗಳೂ ಈಡೇರಲಿವೆ’ ಎಂದು ಹೇಳಿದರು.

‘ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಐದರಲ್ಲಿ ಬಿಜೆಪಿ ಇದೆ. ಇನ್ನೂ ಒಂದು ಕ್ಷೇತ್ರ ನಮ್ಮ ಕೈತಪ್ಪಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆ ಕ್ಷೇತ್ರವೂ ಪಕ್ಷದ ತೆಕ್ಕೆಗೆ ಬರಬೇಕು. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷ ಅಧಿಕಾರ ಹಿಡಿಯಬೇಕು. ಪ್ರತಿ ಮನೆಯಲ್ಲಿ ತಾವರೆ ಅರಳಬೇಕು’ ಎಂದು ಕರೆ ನೀಡಿದರು.

‘ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನ. ಸಾಮಾನ್ಯ ಕಾರ್ಯಕರ್ತನೊಬ್ಬ ಪಕ್ಷದ ಅಧ್ಯಕ್ಷ ಆಗಬಹುದು ಎಂಬುದಕ್ಕೆ ನಾನೇ ನಿದರ್ಶನ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಚಾರಕನಾಗಿದ್ದ ನಾನು 2004ರಲ್ಲಿ ಬಿಜೆಪಿ ಸೇರಿದೆ. ಸೋನಿಯಾ ಗಾಂಧಿ ಆಗ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದರು. ವೆಂಕಯ್ಯನಾಯ್ಡು ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್‌ ಪಕ್ಷ ಈಗಲೂ ಒಂದೇ ಕುಟುಂಬದ ಹಿಡಿತದಲ್ಲಿದೆ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷವಾಗಿ ಬೆಳೆದಿದೆ. ಆರಂಭದಿಂದ ಈವರೆಗೆ ವಿಚಾರಧಾರೆ ಹಾಗೂ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ಕಾರ್ಯಕರ್ತರ ಪರಿಶ್ರಮದಲ್ಲಿ ಪಕ್ಷ ಹೆಮ್ಮರವಾಗಿ ಬೆಳೆಯುತ್ತಿದೆ. ಕೇಳಿದ್ದನ್ನು ಪಕ್ಷ ಕೊಡುವುದಿಲ್ಲ. ಜವಾಬ್ದಾರಿಯನ್ನು ನೀಡುತ್ತದೆ’ ಎಂದು ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮಾತನಾಡಿ, ‘ಹಿಂದುಳಿದ ಜಿಲ್ಲೆಗಳ ಜನರು ಬಿಜೆಪಿಯ ಕೈಹಿಡಿದಿದ್ದಾರೆ. ಅವರ ಬೇಡಿಕೆಗಳಿಗೆ ಸ್ಪಂದಿಸುವ ಜವಾಬ್ದಾರಿ ಬಿಜೆಪಿ ಮೇಲಿದೆ. ಕುಡಿಯುವ ನೀರು ಹಾಗೂ ನೀರಾವರಿಗೆ ಸಮಗ್ರ ಯೋಜನೆಯೊಂದನ್ನು ರಾಜ್ಯ ಸರ್ಕಾರ ಸಿದ್ಧಪಡಿಸುತ್ತಿದೆ’ ಎಂದು ಆಸ್ವಾಸನೆ ನೀಡಿದರು.

ಶಾಸಕರಾದ ಗೂಳಿಹಟ್ಟಿ ಶೇಖರ್‌, ಎಂ.ಚಂದ್ರಪ್ಪ, ಪಕ್ಷದ ಮುಖಂಡರಾದ ಜಿ.ಎಂ.ಸುರೇಶ್‌, ಟಿ.ಜಿ.ನರೇಂದ್ರ, ರಾಮಯ್ಯ, ಲಿಂಗಮೂರ್ತಿ, ತಿಪ್ಪೇಸ್ವಾಮಿ ಇದ್ದರು.

 

ಪ್ರತಿಕ್ರಿಯಿಸಿ (+)