ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಮೇಲೆ ಏಕಾಏಕಿ ಎರಗುವ ನಾಯಿಗಳು

ಬೀದಿ ನಾಯಿಗಳ ಹಾವಳಿ; ಪುಟಾಣಿಗಳೇ ಹೆಚ್ಚು ಗುರಿ
Last Updated 10 ನವೆಂಬರ್ 2019, 11:03 IST
ಅಕ್ಷರ ಗಾತ್ರ

ಚಿತ್ರದುರ್ಗ: ಮನೆಯ ಮುಂಭಾಗದಲ್ಲಿ ಪುಟಾಣಿಗಳು ಆಟವಾಡುತ್ತಿದ್ದರೆ ಸಾಕು, ಇದ್ದಕ್ಕಿದಂತೆ ಗುಂಪು ಕಟ್ಟಿಕೊಂಡು ಬರುವ ನಾಯಿಗಳು ಏಕಾಏಕಿ ದಾಳಿ ನಡೆಸುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಈಚೆಗೆ ಆಜಾದ್ ನಗರದ ನಾಲ್ಕು ವರ್ಷದ ಬಾಲಕಿಯನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ತೀವ್ರ ಆತಂಕ ಉಂಟು ಮಾಡಿದೆ.

ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಬಾಲಕನ ಮೇಲೆ ದಾಳಿ ನಡೆಸಿ ನಾಯಿಗಳು ಕಚ್ಚಿವೆ. ಅವು ಕೇವಲ ಒಂದೆಡೆ ಮಾತ್ರ ಕಚ್ಚುತ್ತಿಲ್ಲ. ಮುಖ, ಬೆನ್ನು, ಕೈ-ಕಾಲು, ಭುಜ ಸೇರಿ ದೇಹದ ಹಲವು ಭಾಗಗಳಲ್ಲಿ ಕಚ್ಚಿ ತೀವ್ರಸ್ವರೂಪದಲ್ಲಿ ಗಾಯಗೊಳಿಸುತ್ತಿವೆ. ಹುಚ್ಚುನಾಯಿ ಕಡಿತದಿಂದಲೂ ಕೆಲ ನಾಗರಿಕರು ನೋವು ಅನುಭವಿಸಿ, ಚಿಕಿತ್ಸೆ ಪಡೆದಿದ್ದಾರೆ.

ಆಜಾದ್‌ ನಗರದಲ್ಲಿ ಇತ್ತೀಚಿನ ಎರಡ್ಮೂರು ತಿಂಗಳಿನಿಂದಲೂ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಮಕ್ಕಳು ಇಲ್ಲಿ ನಿರಂತರವಾಗಿ ಬೀದಿ ನಾಯಿಗಳ ದಾಳಿಗೆ ತುತ್ತಾಗುತ್ತಿದ್ದಾರೆ. ಇಂತಹ ಘಟನೆಗಳು ಇಲ್ಲಿನ ಜನರನ್ನು ಆತಂಕಕ್ಕೆ ದೂಡಿವೆ.

ಇದು ಕೇವಲ ಒಂದು ಬಡಾವಣೆಯ ಕಥೆಯಲ್ಲ. ನಗರದ ಎಲ್ಲ ಬಡಾವಣೆಗಳಲ್ಲೂ ಬೀದಿ ನಾಯಿಗಳದ್ದೇ ಕಾರುಬಾರು. ಒಂದೆರಡು ವರ್ಷಗಳಲ್ಲಿ ನೂರಾರು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿವೆ. ಬೀದಿಗಳಲ್ಲಿ, ಮನೆಯ ಮುಂಭಾಗ ಸದಾ ಇರುತ್ತವೆ. 4 ರಿಂದ 6 ವರ್ಷದೊಳಗಿನ ಮಕ್ಕಳು ಆಟವಾಡಲು ಸಾಧ್ಯವಾಗದಂಥ ಪರಿಸ್ಥಿತಿ ಹಲವೆಡೆ ನಿರ್ಮಾಣವಾಗಿದೆ.

ಮನೆ ಸಮೀಪದಲ್ಲಿ ಆಟವಾಡುವ ಸಂದರ್ಭ ಮಕ್ಕಳನ್ನು ನಾಯಿಗಳು ಎಳೆದೊಯ್ದು ಕಚ್ಚಿ ಗಾಯಗೊಳಿಸಿರುವ ಉದಾಹರಣೆ ಸಾಕಷ್ಟಿವೆ. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ನಾಯಿಗಳನ್ನು ಓಡಿಸಿ ಪುಟಾಣಿಗಳನ್ನು ರಕ್ಷಿಸಿದ್ದಾರೆ. ಕೆಲವೊಮ್ಮೆ ನಾಗರಿಕರ ಆಕ್ರೋಶ ಕಟ್ಟೆಯೊಡೆದು ನಾಯಿಗಳನ್ನು ಕೊಂದೇ ಬಿಡಬೇಕು ಎಂಬ ಹಂತವೂ ತಲುಪಿದೆ.

ಹಳೆ ಧರ್ಮಶಾಲಾ ರಸ್ತೆ, ಗೋಪಾಲಪುರ ರಸ್ತೆ, ಜೋಗಿಮಟ್ಟಿ ರಸ್ತೆ, ಹೊಳಲ್ಕೆರೆ ರಸ್ತೆ, ಪ್ರಶಾಂತ ನಗರ, ಕೆಳಗೋಟೆ, ಬುದ್ಧನಗರ, ಮುನ್ಸಿಪಲ್ ಕಾಲೊನಿ, ಫಿಲ್ಟರ್ ಹೌಸ್ ರಸ್ತೆ, ಕೋಟೆ ರಸ್ತೆ, ಸಿ.ಕೆ. ಪುರ ಬಡಾವಣೆ, ಐಯುಡಿಪಿ ಬಡಾವಣೆ ಸೇರಿ ಕೊಳಚೆ ಪ್ರದೇಶ, ಖಾಲಿ ನಿವೇಶನ ಹಾಗೂ ಮೋರಿಗಳು ಹೆಚ್ಚಾಗಿರುವ ಪ್ರದೇಶದ ನಿವಾಸಿಗಳ ನಿದ್ದೆಗೆಡಿಸಿವೆ. ಗುಂಪಾಗಿ ಓಡಾಡುವ ನಾಯಿಗಳು ಹೆಚ್ಚಾಗಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಮೇಲೆ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸುತ್ತಿವೆ.

ಗುಂಪು ನಾಯಿಗಳು ಮಧ್ಯರಾತ್ರಿ ಸಮಯದಲ್ಲಿ ಕರ್ಕಶವಾಗಿ ಬೊಗಳುವ ಕಾರಣ ಅನೇಕ ನಾಗರಿಕರು ನೆಮ್ಮದಿಯಿಂದ ನಿದ್ದೆ ಮಾಡದಂಥ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಹಲವರ ಮನೆಯ ಕಾಂಪೌಂಡ್‌ ಮುಂಭಾಗವೇ ಮಲಗಿರುತ್ತವೆ. ಒಮ್ಮೊಮ್ಮೆ ಗೋಡೆ ಹಾರಿ ಕಾಂಪೌಂಡ್‌ ಒಳಗೆ ಮಲ, ಮೂತ್ರ ವಿಸರ್ಜಿಸಿ ಗಲೀಜು ಮಾಡಿರುವ ಉದಾಹರಣೆ ಇವೆ.

ರಾತ್ರಿ ವೇಳೆ ಒಂದು ಬೀದಿಯಿಂದ ಮತ್ತೊಂದು ಬೀದಿಗೆ ಬರುವಂಥ ನಾಯಿ, ಹಂದಿ, ಜಾನುವಾರುಗಳನ್ನು ಗುಂಪು ನಾಯಿಗಳು ಅಟ್ಟಾಡಿಸಿ, ಓಡಿಸಿಕೊಂಡು ಹೋಗಿವೆ. ಈ ಸಂದರ್ಭದಲ್ಲೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ನಾಗರಿಕರನ್ನು ಕೆಲವೊಮ್ಮೆ ಕಚ್ಚಿವೆ. ಆಹಾರ ಹುಡುಕಿಕೊಂಡು ನಗರಕ್ಕೆ ಬರುವ ಮಂಗಗಳ ಮೇಲೂ ದಾಳಿ ನಡೆಸಿವೆ.

ಇನ್ನೂ ಇಲ್ಲಿನ ಕೆಲ ರಸ್ತೆಗಳಲ್ಲಿರುವ ಪಾಳು ಕಟ್ಟಡಗಳು ಬೀದಿ ನಾಯಿಗಳಿಗೆ ಆಶ್ರಯ ತಾಣಗಳಾಗಿವೆ. ಗುಂಪು ಗುಂಪಾಗಿ ಸಾಗುವುದರಿಂದ ವಾಹನ ಸವಾರರಿಗೂ ಕಿರಿಕಿರಿಯಾಗುತ್ತಿದೆ. ಇದರಿಂದ ನಗರದಲ್ಲಿ ಸಂಚರಿಸುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಾಹನಕ್ಕೆ ಅಡ್ಡವಾದಾಗ ತಪ್ಪಿಸಲು ಹೋಗಿ ಸವಾರರು ಕೈಕಾಲು ಪೆಟ್ಟು ಮಾಡಿಕೊಂಡಿದ್ದಾರೆ.

ಗೋಪಾಲಪುರ ರಸ್ತೆ ಮಾರ್ಗದಲ್ಲಿ ನಿತ್ಯ ಸಂಚರಿಸುವ ದ್ವಿಚಕ್ರ ವಾಹನ ಸವಾರರನ್ನು ನಾಯಿಗಳು ಅಟ್ಟಿಸಿಕೊಂಡು ಹೋದ ಪರಿಣಾಮ ಹಂಪ್ ಎಗರಿಸಲು ಪ್ರಯತ್ನಿಸಿ, ಸವಾರನ್ನೊಬ್ಬ ಈಚೆಗೆ ಬಿದ್ದು ಗಾಯಗೊಂಡಿರುವ ಘಟನೆಯೂ ನಡೆದಿದೆ.

ನಾಯಿಗಳನ್ನು ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಬೇರೆಡೆಗೆ ಸಾಗಿಸುವಂತೆ ಆಜಾದ್ ನಗರ, ಗೋಪಾಲಪುರ ಬಡಾವಣೆ, ದವಳಗಿರಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ನಗರಸಭೆ ಆಗ್ರಹಿಸಿದೆ. ಆದರೆ, ಅಧಿಕಾರಿಗಳು ಮಾತ್ರ ಈ ವಿಷಯದಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಒಂಟಿಯಾಗಿ ಸಂಚರಿಸಲು ಭಯಪಡುವ ವಾತಾವರಣ ನಿರ್ಮಾಣವಾಗುತ್ತಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ, ಜನರ ಮೇಲೆ ದಾಳಿ ನಡೆಸುತ್ತಿವೆ. ಕೂಡಲೇ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು. ಇಲ್ಲವಾದರೆ, ಇನ್ನಷ್ಟು ಜನ ನಾಯಿಗಳ ದಾಳಿಗೆ ತುತ್ತಾಗಬೇಕಾಗುತ್ತದೆ ಎಂದು ನಾಗರಿಕರು ಕಳವಳ ಹೊರಹಾಕಿದ್ದಾರೆ.

ಅಂಕಿ – ಅಂಶ

*1,335 ಜನರಿಗೆ

ಕಳೆದ ವರ್ಷ ನಗರದಲ್ಲಿ ನಾಯಿ ಕಚ್ಚಿದೆ

*871 ಜನರಿಗೆ

ಪ್ರಸಕ್ತ ವರ್ಷ ನಾಯಿಗಳು ಕಚ್ಚಿವೆ

* 1,555

ಪುರುಷರಿಗೆ ಒಂದೂವರೆ ವರ್ಷದಲ್ಲಿ ನಾಯಿ ಕಚ್ಚಿದೆ

* 651

ಮಹಿಳೆಯರು ನಾಯಿ ಕಚ್ಚಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT