ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮಾಣಪತ್ರ ಉದ್ಯೋಗದ ಗ್ಯಾರಂಟಿ ಕಾರ್ಡ್‌ ಅಲ್ಲ: ಎ.ನಾರಾಯಣಸ್ವಾಮಿ ಅಭಿಮತ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಅಭಿಮತ
Last Updated 28 ಅಕ್ಟೋಬರ್ 2021, 15:07 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿಶ್ವವಿದ್ಯಾಲಯ ಪ್ರದಾನ ಮಾಡುವ ಪದವಿ ಪ್ರಮಾಣ ಪತ್ರಗಳು ಉದ್ಯೋಗ ನೀಡುವ ಗ್ಯಾರಂಟಿ ಕಾರ್ಡ್‌ ಅಲ್ಲ. ಶಿಕ್ಷಣ ಪಡೆದಿರುವುದಕ್ಕೆ ಸಿಗುವ ಅರ್ಹತಾ ಪತ್ರ. ಕೌಶಲ ಬೆಳೆಸಿಕೊಳ್ಳದೇ ಉದ್ಯೋಗ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಜಿ.ಆರ್‌.ಹಳ್ಳಿಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಂ ಉಪನ್ಯಾಸ ಹಾಗೂ ಮಹಿಳಾ ವಿದ್ಯಾರ್ಥಿನಿಲಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಪ್ರತಿ ವರ್ಷ ಒಂದೂವರೆ ಕೋಟಿ ಜನರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ಆದರೆ, ಇದರಲ್ಲಿ ಉದ್ಯೋಗ ಪಡೆಯುವವರ ಪ್ರಮಾಣ ತೀರಾ ಕಡಿಮೆ ಇದೆ. ಕರ್ನಾಟಕದಲ್ಲಿ ಕೌಶಲ ತರಬೇತಿಗೆ ₹ 52 ಕೋಟಿ ನೀಡಲಾಗುತ್ತಿದೆ. ಕೌಶಲ ತರಬೇತಿ ನೀಡುವ ಹೆಸರಿನಲ್ಲಿಯೂ ಮೋಸ, ವಂಚನೆ ನಡೆಯುತ್ತಿದೆ. ಇನ್ನು ಮುಂದೆಯೂ ಹೀಗೆ ಆಗಲು ಬಿಡುವುದಿಲ್ಲ. ವಿಶ್ವವಿದ್ಯಾಲಯಗಳು ಕೌಶಲ ತರಬೇತಿಗೆ ಒಲವು ತೋರಬೇಕು’ ಎಂದು ಹೇಳಿದರು.

‘ದೇಶದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಹಾಗೂ ಡಾ.ಬಾಬು ಜಗಜೀವನರಾಮ್‌ ಅಧ್ಯಯನ ಪೀಠಗಳಿವೆ. ಸಮುದಾಯದ ಏಳಿಗೆಗೆ, ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಅಗತ್ಯವಾಗಿರುವ ಸಂಶೋಧನೆಗಳೇ ನಡೆದಿಲ್ಲ. ಸಂಶೋಧನೆಯ ಪ್ರತಿಫಲ ಸಮಾಜಕ್ಕೆ ಸಿಗದೇ ಹೋದರೆ ಸಮಾಜದ ಪುನರ್‌ ನಿರ್ಮಾಣ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಶೋಷಿತ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವುದಕ್ಕೆ ಇರುವ ಕಾರಣಗಳನ್ನು ಇನ್ನೂ ಸರಿಯಾಗಿ ಪತ್ತೆ ಮಾಡಿಲ್ಲ. ಅಂತರ್ಜಾತಿ ವಿವಾಹಿತರಿಗೆ ನೀಡುವ ಪ್ರೋತ್ಸಾಹ ಧನ ವಿತರಣೆ, ಅಪಘಾತ ಸಂಭವಿಸಿದಾಗ ಒದಗಿಸುವ ಸಹಾಯಧನ ಬಹುತೇಕರಿಗೆ ಸಿಗುತ್ತಿಲ್ಲ. ಎಸ್‌ಇಪಿ, ಟಿಎಸ್‌ಪಿ ಅನುದಾನದ ಸದ್ಬಳಕೆ ಬಗ್ಗೆ ಬೆಳಕು ಚೆಲ್ಲುವಂತಹ ಯಾವ ಸಂಶೋಧನೆಗಳು ನಡೆದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಸಿವು, ಅಸ್ಪೃಶ್ಯತೆಯ ನೋವನ್ನು ಸ್ವತಃ ಅನುಭವಿಸಿದ್ದೇನೆ. ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗದೇ ಬೆಂಚ್‌ ಮೇಲೆ ನಿಂತಿದ್ದ ನೆನಪು ಇನ್ನೂ ಹಾಗೇ ಇದೆ. ಶಾಲಾ ಸಮವಸ್ತ್ರ ತರಲು ಹಣವಿಲ್ಲದೇ ಶಿಕ್ಷೆ ಅನುಭವಿಸಿದ್ದು ಗೊತ್ತಿದೆ. ಈ ಅನುಭವ ಶೋಷಿತರ ಏಳಿಗೆಗಾಗಿ ದುಡಿಯುವ ಬದ್ಧತೆಯನ್ನು ಕಲಿಸಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರ ಕನಸನ್ನು ಈಡೇರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಗಂಗಾಧರ್, ‘ಬಾಬು ಜಗಜೀವನರಾಮ್‌ ದೇಶ ನಿಷ್ಠೆ ಹೊಂದಿದ್ದರೆ ಹೊರತು ವ್ಯಕ್ತಿ ನಿಷ್ಠೆಯಲ್ಲ. ದೇಶ, ಸಮಾಜ, ಧರ್ಮದ ಬಗ್ಗೆ ಅಪರೂಪದ ದೃಷ್ಟಿಕೋನ ಹೊಂದಿದ್ದರು. ಇಂತಹ ನಾಯಕನ್ನು ದೇಶ ಓರೆಗಣ್ಣಿನಿಂದ ನೋಡಿತು. ಸಮಾಜವೂ ಮನಬಂದಂತೆ ನಡೆಸಿಕೊಂಡಿತು’ ಎಂದು ಬೇಸರ ಹೊರಹಾಕಿದರು.

‘ಚಿಕ್ಕವರಾಗಿದ್ದಾಗ ಅಸ್ಪೃಶ್ಯತೆಯ ನೋವು ಅನುಭವಿಸದ ಬಾಬೂಜಿ, ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಇದರ ಕರಾಳತೆಗೆ ಸಿಲುಕಿದರು. ಹಿಂದೂ ಧರ್ಮದಲ್ಲಿರುವ ಕಲ್ಲು ಹೃದಯಗಳನ್ನು ಪರಿವರ್ತನೆ ಆಗುವವರೆಗೆ ಕಾಯುವ ವ್ಯವಧಾನ ಅವರಲ್ಲಿತ್ತು. ಹೀಗಾಗಿ, ಅವರು ಮತಾಂತರವನ್ನು ವಿರೋಧಿಸುತ್ತಿದ್ದರು. ಧರ್ಮಕ್ಕಿಂತ ಸಾಮಾಜಿಕ ಪರಿವರ್ತನೆ ಮುಖ್ಯ ಎಂಬುದನ್ನು ಬಾಬೂಜಿ ಅರಿತಿದ್ದರು’ ಎಂದರು.

‘ವಿದ್ವಾಂಸರು ನಿರ್ವಹಿಸಬೇಕು’

ವಿದ್ವಾಂಸರು ಮಾತ್ರ ವಿಶ್ವವಿದ್ಯಾಲಯಗಳನ್ನು ನಿರ್ವಹಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಎಂ.ಚಿದಾನಂದಗೌಡ ಅಭಿಪ್ರಾಯಪಟ್ಟರು.

‘ಹಲವು ದೇಶಗಳಲ್ಲಿ ಶಿಕ್ಷಣಕ್ಕೆ ಅಮುಲ್ಯ ಸ್ಥಾನವಿದೆ. ವಿಶ್ವವಿದ್ಯಾಲಯದ ವಿದ್ವಾಂಸರ ಆಧಾರದ ಮೇಲೆ ದೇಶವನ್ನು ಗುರುತಿಸಲಾಗುತ್ತಿದೆ. ಹೀಗೆ ಭಾರತವನ್ನು ಗುರುತಿಸುವ ಕಾಲ ಸೃಷ್ಟಿಯಾಗಬೇಕು. ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

‘ವಿಶ್ವವಿದ್ಯಾಲಯ ಪದವಿ ನೀಡಿದರೂ ಇಂಗ್ಲಿಷ್‌ ಹಾಗೂ ವಿಜ್ಞಾನ ಬೋಧಕರ ಕೊರತೆ ಇದೆ. ಈ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆಯಾಗಿದೆ. ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪಿಸುವ ಸರ್ಕಾರದ ಆಶಯದಂತೆ ವಿಶ್ವವಿದ್ಯಾಲಯಗಳೂ ನಿರ್ಮಾಣವಾಗಬೇಕು. ಸ್ನಾತಕೋತ್ತರ ಕೇಂದ್ರ ಸ್ವತಂತ್ರ ವಿಶ್ವವಿದ್ಯಾಲಯ ಆಗಬೇಕು’ ಎಂದು ಹೇಳಿದರು.

ಕುಲಪತಿ ಡಾ.ಶರಣಪ್ಪ ವಿ.ಹಲಸೆ, ಕುಲಸಚಿವೆ ಪ್ರೊ.ಗಾಯತ್ರಿ, ಪರೀಕ್ಷಾಂಗ ಕುಲಸಚಿವೆ ಎಚ್.ಎಸ್.ಅನಿತಾ, ಹಣಕಾಸು ಅಧಿಕಾರಿ ಪ್ರಿಯಾಂಕಾ, ಜಿ.ಆರ್‌.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊನ್ನೂರಪ್ಪ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಚ್.ವಿಶ್ವನಾಥ್, ಸಿಂಡಿಕೇಟ್ ಸದಸ್ಯರಾದ ಭಾರ್ಗವಿ, ಸರೋಜಮ್ಮ, ಡಾ.ಜೆ.ಪಿ.ರಾಮನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT