ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ದಡ ಸೇರಿಸಿದ ಮೋದಿ ಸುನಾಮಿ: ಸಂಸದ ಎ.ನಾರಾಯಣಸ್ವಾಮಿ

Last Updated 24 ಮೇ 2019, 19:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದಸಂಸದ ಎ.ನಾರಾಯಣಸ್ವಾಮಿ ಅವರಸಂದರ್ಶನ.

* ಅನಿರೀಕ್ಷಿತವಾಗಿ ಕ್ಷೇತ್ರ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಸಂಸದರಾಗಿ ಆಯ್ಕೆಯಾಗಿದ್ದೀರಿ. ಕ್ಷೇತ್ರಕ್ಕೆ ಬರುವುದಕ್ಕೂ ಮೊದಲೇ ಗೆಲ್ಲುವ ವಿಶ್ವಾಸ ಇತ್ತೆ?

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂಬ ಹಂಬಲ ಇರಲಿಲ್ಲ. ಸ್ಪರ್ಧೆಗೆ ಪಕ್ಷ ಅವಕಾಶ ನೀಡಿದಾಗ ಗೆಲುವಿನ ಮನ್ಸೂಚನೆ ಸಿಕ್ಕಿತ್ತು. ಈ ಚುನಾವಣೆಯಲ್ಲಿ ಮತದಾರರು ಬಿಜೆಪಿ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿತ್ತು.

ನನ್ನಲ್ಲಿದ್ದ ಸಾಮಾಜಿಕ ಕಳಕಳಿ ಹಾಗೂ ಪಕ್ಷದ ಸಿದ್ಧಾಂತಕ್ಕೆ ತೋರಿದ ಬದ್ಧತೆಯನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಗೊತ್ತಿತ್ತು. ನನ್ನ ನಡತೆ, ಭಾವನೆಗಳನ್ನು ನೋಡಿ ಮತದಾರರು ಕೈಹಿಡಿಯುತ್ತಾರೆ ಎಂಬ ನಂಬಿಕೆಯಿಂದಲೇ ಅಖಾಡಕ್ಕೆ ಇಳಿದೆ.

* ಕ್ಷೇತ್ರದ ಮತದಾರರು ಮತ್ತೆ ಕಮಲ ಬೆಂಬಲಿಸಿದ್ದಾರೆ. ಗೆಲುವಿಗೆ ಕಾರಣವಾದ ಅಂಶಗಳೇನು ಎಂಬುದನ್ನು ಹೇಳುತ್ತೀರಾ?

ಪ್ರಧಾನಿ ನರೇಂದ್ರ ಮೋದಿ ಐದು ವರ್ಷಗಳಿಂದ ದೇಶದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳು ಕೈಹಿಡಿದಿವೆ. ರಾಷ್ಟ್ರದ ಬಗ್ಗೆ ಅವರಿಗೆ ಇರುವ ಭಾವನೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ಅವರ ಅಪ್ರತಿಮ ದೇಶಭಕ್ತಿ ಎಲ್ಲರಿಗೂ ಇಷ್ಟವಾಗಿದೆ. ಇವು ಮತಗಳಾಗಿ ಪರಿವರ್ತನೆಯಾಗಿವೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಪಕ್ಷದ ಸಂಘಟನೆಯೂ ಬಲವಾಗಿದೆ. ಎಲ್ಲರೂ ಒಗ್ಗೂಡಿ ಶ್ರಮಿಸಿದ್ದೇವೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮಕ್ಕೆ ಗೆಲುವಿನ ಪ್ರತಿಫಲ ಸಿಕ್ಕಿದೆ.

* ದೇಶ ವ್ಯಾಪಿ ಬೀಸಿದ ಮೋದಿ ಅಲೆ ನಿಮ್ಮನ್ನು ದಡ ಸೇರಿಸಿತು ಎನ್ನಲಾಗುತ್ತಿದೆ. ಇದನ್ನು ನೀವು ಒಪ್ಪುತ್ತೀರಾ?

ದೇಶದಲ್ಲಿ ಎದ್ದಿರುವುದು ಮೋದಿ ಅಲ್ಲೆಯಲ್ಲ, ಅದು ಸುನಾಮಿ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಈ ಸುನಾಮಿ ನೆರವಾಗಿದೆ. ನಾನೂ ಸೇರಿದಂತೆ ಬಿಜೆಪಿಯ ಬಹುತೇಕರನ್ನು ಇದು ದಡ ಸೇರಿಸಿತು ಎಂಬುದನ್ನು ಮನಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ.

* ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಯ ಕೆಲ ಸಮುದಾಯಗಳು ಬಿಜೆಪಿ ಮೇಲೆ ಮುನಿಸಿಕೊಂಡಿದ್ದವು. ಇದು ಚುನಾವಣೆಯ ಮೇಲೆ ಪ್ರಭಾವ ಬೀರಲಿಲ್ಲವೇ?

ಪ್ರಭಾವ ಬೀರಿದೆ. ಆದರೆ, ಇದರಿಂದ ಬಿಜೆಪಿಗೆ ನಕಾರಾತ್ಮಕ ಪರಿಣಾಮಗಳು ಉಂಟಾಗಲಿಲ್ಲ. ಯಾರೊ ಕೆಲವರು ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸಿದರು. ಅದೇ ಸಮುದಾಯದ ಪ್ರಜ್ಞಾವಂತ ಯುವಕರು ಹಾಗೂ ನಾಯಕರು ಈ ಆರೋಪಗಳಿಗೆ ಕಿವಿಗೊಟ್ಟಿಲ್ಲ. ಹಾಗಂತ ದ್ವೇಷದ ರಾಜಕಾರಣವನ್ನು ನಾನು ಮಾಡುವುದಿಲ್ಲ.

ಒಳಮೀಸಲಾತಿಗೆ ಸಂಬಂಧಿಸಿದಂತೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತೇನೆ. ನ್ಯಾಯಮೂರ್ತಿ ಸದಾಶಿವ ಆಯೋಗದ ಬಗ್ಗೆ ತಿಳಿಹೇಳಿ ಅವರ ಮನಸನ್ನು ಗೆಲ್ಲುತ್ತೇನೆ.

* ಮತಯಾಚನೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಹೇಗೆ ಕೆಲಸ ಮಾಡುವಿರಿ?

ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆ ಹಾಗೂ ತುಂಗ–ಭದ್ರಾ ಜಲಾಶಯದ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ವಿವರವಾದ ವರದಿ ಪಡೆಯುತ್ತೇನೆ. ಯಾವ ಹಂತದಲ್ಲಿ ನನೆಗುದಿಗೆ ಬಿದ್ದಿವೆ, ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಕುರಿತು ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ.

ಜಿಲ್ಲೆಯಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಗಾರ್ಮೆಂಟ್ಸ್‌ ಉದ್ಯಮವನ್ನು ಚಿತ್ರದುರ್ಗಕ್ಕೆ ತರುವ ಬಗ್ಗೆ ಖಾಸಗಿ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತೇನೆ. ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗದ ಯೋಜನೆಯನ್ನು ಪರಿಶೀಲಿಸಿ, ತ್ವರಿತ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಮನವೊಲಿಸುತ್ತೇನೆ.

* ಜೆಡಿಎಸ್‌ ಪ್ರಭಾವ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿಗೆ ನಿರೀಕ್ಷೆ ಮೀರಿ ಮತಗಳು ಸಿಕ್ಕಿವೆ. ಇದರ ಬಗ್ಗೆ ಏನು ಹೇಳುತ್ತೀರಿ?

ಇದು ಪವಾಡವಲ್ಲ. ದೇಶದಲ್ಲಿ ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ. ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದಾರೆ. ಮತದಾರ ಮನವೊಲಿಸಿದ್ದಾರೆ. ಶಿರಾ ಮತ್ತು ಪಾವಗಡದಲ್ಲಿ ಬಿಜೆಪಿ ಸಂಘಟಿತವಾಗಿ ಮುನ್ನುಗ್ಗಿತು. ರಾಷ್ಟ್ರದ ಹಿತ ದೃಷ್ಟಿಯಿಂದ ಮತದಾರರು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

* ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು ಬಿಜೆಪಿ ಗೆಲುವಿಗೆ ನೆರವಾಯಿತೇ?

ಹೌದು, ಎರಡೂ ಪಕ್ಷಗಳ ನಡುವಿನ ಹೊಂದಾಣಿಕೆ ಬಿಜೆಪಿಯ ಗೆಲುವನ್ನು ಸುಲಭವಾಗಿಸಿತು. ಅಧಿಕಾರದ ಆಸೆಗಾಗಿ ಎರಡೂ ಪಕ್ಷಗಳ ನಾಯಕರು ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದ ತಳಮಟ್ಟದ ಕಾರ್ಯಕರ್ತರಿಗೆ ಇದು ಇಷ್ಟವಿಲ್ಲ. ಪಕ್ಷದ ಸಿದ್ಧಂತಕ್ಕೆ ಕಟ್ಟುಬಿದ್ದ ಕಾರ್ಯಕರ್ತರಿಗೆ ಇದು ನಿರಾಶೆಯುಂಟು ಮಾಡಿದೆ. ಅಲ್ಲದೇ, ಎರಡೂ ಪಕ್ಷಗಳ ನಾಯಕರ ಕಚ್ಚಾಟವೂ ಬಿಜೆಪಿಗೆ ಸಹಕಾರಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT