ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಒತ್ತಾಯ

ಜಿಲ್ಲಾ ನಾಯಕ ಸಮಾಜದಿಂದ ಪ್ರತಿಭಟನೆ
Last Updated 6 ಜೂನ್ 2019, 14:14 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ (ಎಸ್‌.ಟಿ) ನಿಗಧಿಪಡಿಸಿರುವ ಮೀಸಲಾತಿ ಪ್ರಮಾಣವನ್ನು ಶೇ 3 ರಿಂದ ಶೇ 7.5ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ನಾಯಕ ಸಮಾಜದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಮದಕರಿ ವೃತ್ತದಲ್ಲಿರುವ ಮದಕರಿನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜಿಲ್ಲಾಧಿಕಾರಿ ಕಚೇರಿಗೆಮೆರವಣೆಗೆಯಲ್ಲಿ ಬಂದರು. ನಾಯಕ ಸಮಾಜದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

2011ರ ಜನಗಣತಿ ಪ್ರಕಾರ ಪರಿಶಿಷ್ಟ ಪಂಗಡದ ಜನಸಂಖ್ಯೆ 42 ಲಕ್ಷ ಇದೆ. ಇದು ರಾಜ್ಯದ ಜನಸಂಖ್ಯೆಯ ಶೇ 6.95 ಆಗಿದೆ. ಈಗಾಗಲೇ ಜನಗಣತಿ ನಡೆದು ಎಂಟು ವರ್ಷ ಕಳೆದಿರುವುದರಿಂದ ಜನಸಂಖ್ಯೆ ಶೇ 7 ಕ್ಕೂ ಅಧಿಕವಾಗಿದೆ. ಹೀಗಿದ್ದರೂ ರಾಜ್ಯದಲ್ಲಿ ಶೈಕ್ಷಣಿಕ ಪ್ರವೇಶ ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಶೇ 3 ಮೀಸಲಾತಿ ನೀಡಲಾಗುತ್ತಿದೆ. ಇದರಿಂದ ಪರಿಶಿಷ್ಟ ವರ್ಗದವರಿಗೆ ಅನೇಕ ದಶಕಗಳಿಂದ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾನಿರತರು ಅಕ್ರೋಶ ವ್ಯಕ್ತಪಡಿಸಿದರು.

ಮುಂದುವರಿದ ವರ್ಗದ ಕೆಲವರು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಜಾತಿ ಪ್ರಮಾಣ ಪತ್ರ ನೀಡುವ ಪ್ರಾಧಿಕಾರವಾದ ತಹಶೀಲ್ದಾರ್‌ಗಳಿಂದ ಜಾತಿ ಪ್ರಮಾಣ ಪತ್ರವನ್ನು ಅಸಂವಿಧಾನಿಕವಾಗಿ ಪಡೆದಿದ್ದಾರೆ. ಪರಿಶಿಷ್ಟ ವರ್ಗದವರಿಗೆ ಮೀಸಲಿರುವ ಸೌಲಭ್ಯಗಳನ್ನು ಕಬಳಿಸುತ್ತಿರುವುದು ನಾಯಕ ಸಮುದಾಯದ ಗಮನಕ್ಕೆ ಬಂದಿದೆ. ಕೂಡಲೇ ರಾಜ್ಯ ಸರ್ಕಾರ ಗಮನಹರಿಸಿ ಅರ್ಹರಲ್ಲದವರಿಗೆ ಪರಿಶಿಷ್ಟ ವರ್ಗದ ಪ್ರಮಾಣಪತ್ರ ನೀಡುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ಮೇಲೆ ಕಾನೂನಾತ್ಮಕ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ50 ಬುಡಕಟ್ಟುಗಳಿವೆ. ಪ್ರತಿ ಬುಡಕಟ್ಟು ತನ್ನದೇ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ರೂಢಿಸಿಕೊಂಡಿದೆ. ಸಮುದಾಯವು ವಸತಿ ಸಮಸ್ಯೆ, ಕೃಷಿ, ಭೂಮಿ, ಶಿಕ್ಷಣ, ಆರೋಗ್ಯ, ಉದ್ಯೋಗದಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ. ಪರಿಶಿಷ್ಟ ವರ್ಗದ ಜನರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ, ಪರಿಶಿಷ್ಟ ವರ್ಗದ ಸಚಿವಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ನಾಯಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜೆ. ಕೃಷ್ಣಮೂರ್ತಿ, ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸದಾನಂದ, ನಗರಸಭೆ ಸದಸ್ಯ ದೀಪಕ್, ಮುಖಂಡರಾದ ಸರ್ವೆ ಬೋರಯ್ಯ, ಅಶೋಕ್‌ ಬೆಳಗಟ್ಟ, ಸೋಮೇಂದ್ರ, ಎಚ್.ಅಂಜಿನಪ್ಪ, ಕಾಟಿಹಳ್ಳಿ ಕರಿಯಪ್ಪ, ಹುಣಸೇಕಟ್ಟೆ ಮಹಂತೇಶ್, ಬಚ್ಚಬೋರನಹಟ್ಟಿಯ ಬಿ.ಬೋರಯ್ಯ, ಎನ್.ನಟರಾಜ, ವಿಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT