ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಹೊಳಲ್ಕೆರೆಗೆ ಬೇಕಿದೆ ಶುದ್ಧ ಕುಡಿಯುವ ನೀರು

ಗ್ರಾಮೀಣ ಭಾಗದಲ್ಲಿ ಕೊಳವೆಬಾವಿ ಕೊರೆಸಲು ಒತ್ತಡ, ಕೆಲವೆಡೆ ಫ್ಲೋರೈಡ್ ನೀರು
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣ ಸೇರಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ.

ತಾಲ್ಲೂಕಿನಲ್ಲಿ 145 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ 130 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 15ರಿಂದ 20 ಘಟಕಗಳು ದುರಸ್ತಿ ಸ್ಥಿತಿಯಲ್ಲಿವೆ. ಖನಿಜ ನಿಗಮದಿಂದ 18 ಶುದ್ಧ ನೀರಿನ ಘಟಕಗಳು ಮಂಜೂರಾಗಿದ್ದು, ಅದರಲ್ಲಿ 12 ಘಟಕಗಳನ್ನು ನಿರ್ಮಿಸಲಾಗಿದೆ. ಉಳಿದ 6 ಘಟಕಗಳು ನಿರ್ಮಾಣ ಹಂತದಲ್ಲಿವೆ.

ಪಟ್ಟಣದಲ್ಲಿ ಹೆಚ್ಚು ಸಮಸ್ಯೆ: ಪಟ್ಟಣದಲ್ಲಿ ಆರೇಳು ಘಟಕಗಳಿದ್ದರೂ ಎರಡು, ಮೂರು ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಎಂಎಂ ಕಾಲೇಜು ಮುಂಭಾಗ, ಸಿದ್ದರಾಮಪ್ಪ ಬಡಾವಣೆಯ ಅವಳಿಹಟ್ಟಿ ರಸ್ತೆ ಹಾಗೂ ಚಿತ್ರದುರ್ಗ ರಸ್ತೆಯ ತಹಶೀಲ್ದಾರ್ ಕಚೇರಿ ಪಕ್ಕದಲ್ಲಿರುವ ಶುದ್ಧ ನೀರಿನ ಘಟಕಗಳು ಶಾಶ್ವತವಾಗಿ ಬಂದ್ ಆಗಿವೆ. ಪುರಸಭೆ ಕಚೇರಿ ಎದುರಿನ ಶುದ್ಧ ನೀರಿನ ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಯಾವಾಗಲೂ ಸರದಿ ಸಾಲಿನಲ್ಲಿ ನಿಂತು ನೀರು ಪಡೆಯುವ ಪರಿಸ್ಥಿತಿ ಇದೆ.

ಶುದ್ಧ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಪಟ್ಟಣದಲ್ಲಿ ಖಾಸಗಿ ಶುದ್ಧ ನೀರಿನ ಘಟಕಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಸರ್ಕಾರದ ಘಟಕಗಳಲ್ಲಿ ₹ 5ಕ್ಕೆ 20 ಲೀಟರ್ ಶುದ್ಧ ನೀರು ಸಿಕ್ಕಿದರೆ ಖಾಸಗಿಯವರು ₹ 10ಕ್ಕೆ 20 ಲೀಟರ್ ನೀರು ಮಾರಾಟ ಮಾಡುತ್ತಾರೆ. ಆದರೆ ಖಾಸಗಿಯವರುಮನೆ ಬಾಗಿಲಿಗೇ ನೀರು ತಂದು ಕೊಡುತ್ತಾರೆ. ಇದರಿಂದ ₹ 5 ಹೆಚ್ಚಾದರೂ ಪರವಾಗಿಲ್ಲ. ಅಲ್ಲಿ ಹೋಗಿ ಸರದಿಯಲ್ಲಿ ನಿಂತು ನೀರು ತರುವುದಕ್ಕಿಂತ ಖಾಸಗಿಯವರಿಂದ ಪಡೆಯುವುದೇ ಉತ್ತಮ ಎಂದು ಅವರಿಂದಲೇ ಖರೀದಿಸುತ್ತಾರೆ. ಹೊಟೇಲ್ ಮಾಲೀಕರೂ ಖಾಸಗಿಯವರಿಂದ ನೀರು ಖರೀದಿಸುತ್ತಾರೆ.

‘ಕಳೆದ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಿಲ್ಲ. ಕಾಲ್ಕೆರೆ ಹಾಗೂ ಚಿತ್ರಹಳ್ಳಿಯಲ್ಲಿ ಕೊಳವೆಬಾವಿ ಕೊರೆಸುವಂತೆ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು ಬೇಡಿಕೆ ಸಲ್ಲಿಸಿದ್ದಾರೆ. ಎಲ್ಲಾ ಕಡೆ ನೀರಿನ ಪರೀಕ್ಷೆ ನಡೆಸಲಾಗುತ್ತಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಫ್ಲೋರೈಡ್, ನೈಟ್ರೇಟ್ ಪರೀಕ್ಷೆ ಮಾಡುವ ಕಿಟ್ ಕೊಟ್ಟಿದ್ದೇವೆ. ತಾಳ್ಯ ಹೋಬಳಿಯ ಕೆಲವೆಡೆ ಮಾತ್ರ ಫ್ಲೋರೈಡ್ಅಂಶ ಇದೆ. ಅಂತಹ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿದ್ದೇವೆ’ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಎಇಇ ನೀಲಕಂಠಪ್ಪ.

***

ಪಟ್ಟಣಕ್ಕೆ 2 ಶುದ್ಧ ಕುಡಿಯುವ ನೀರು ಸರಬರಾಜು ವಾಹನ ಕೊಡಿಸುವುದಾಗಿ ಶಾಸಕ ಎಂ.ಚಂದ್ರಪ್ಪ ಹೇಳಿದ್ದಾರೆ. ಆ ವಾಹನಗಳು ಬಂದರೆ ನಾಗರಿಕರ ಮನೆ ಬಾಗಿಲಿಗೆ ₹ 5ಕ್ಕೆ 20 ಲೀಟರ್ ಶುದ್ಧ ನೀರು ಕೊಡುತ್ತೇವೆ.
–ಆರ್.ಎ. ಅಶೋಕ್, ಪುರಸಭೆ ಅಧ್ಯಕ್ಷ

*

ಗ್ರಾಮೀಣ ಭಾಗದಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಇಲ್ಲ. ಕೆಲವು ಕಡೆ ಮಾತ್ರ ಹೆಚ್ಚುವರಿಯಾಗಿ ಕೊಳವೆಬಾವಿ ಕೊರೆಸುವಂತೆ ಬೇಡಿಕೆ ಬರುತ್ತಿದೆ.
–ನೀಲಕಂಠಪ್ಪ, ಎಇಇ,ನೀರು ಸರಬರಾಜು ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT