ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಲ್‌ಎ, ಎಂಪಿ ಚುನಾವಣೆಗೂ ಮೀಸಲು ಅಗತ್ಯ: ಸಿದ್ದರಾಮಯ್ಯ

ಉಪ್ಪಾರರ ರಾಜ್ಯ ಮಟ್ಟದ ಸಮಾವೇಶ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಮತ
Last Updated 5 ಜೂನ್ 2022, 3:08 IST
ಅಕ್ಷರ ಗಾತ್ರ

ಮಧುರೆ (ಚಿತ್ರದುರ್ಗ): ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಹಾಗೂ ಶೋಷಿತ ಜಾತಿಗಳಿಗೆ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ವಿಧಾನಸಭೆ ಹಾಗೂ ಲೋಕಸಭೆಯಲ್ಲಿಯೂ ಮೀಸಲಾತಿ ಕಲ್ಪಿಸುವ ಅಗತ್ಯವಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರದಲ್ಲಿ ಭಗೀರಥ ಗುರುಪೀಠದ ವತಿಯಿಂದ ಶನಿವಾರ ಏರ್ಪಡಿಸಿದ್ದ ಉಪ್ಪಾರರ ರಾಜ್ಯ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ಕಲ್ಪಿಸಿದ್ದು ಕಾಂಗ್ರೆಸ್‌. ಸಣ್ಣ ಜಾತಿಯ ನಾಯಕರು ಕೂಡ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದಾರೆ. ಆದರೆ, ವಿಧಾನಸಭೆ ಹಾಗೂ ಸಂಸತ್ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಅವಕಾಶ ಮೀಸಲಾತಿ ಮೂಲಕ ಸಿಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಪ್ರತಿಪಾದಿಸಿದರು.

‘ಕೆಲ ರಾಜಕೀಯ ಪಕ್ಷಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವವರು ರಾಷ್ಟ್ರಪ್ರೇಮಿಗಳಾಗಲು ಸಾಧ್ಯವಿಲ್ಲ. ಅವರನ್ನು ದೇಶದ್ರೋಹಿಗಳು ಎಂದು ಕರೆಯಬೇಕಾಗುತ್ತದೆ. ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವವರನ್ನು ಮಾತ್ರ ಬೆಂಬಲಿಸಿ. ಚುನಾವಣೆಯಲ್ಲಿ ನಿಷ್ಠುರ ನಿಲುವು ತಳೆಯಿರಿ’ ಎಂದು ಸಲಹೆ ನೀಡಿದರು.

‘ಶತಮಾನಗಳಿಂದ ಅನ್ಯಾಯ, ಜಾತಿ ಶೋಷಣೆಗೆ ಉಪ್ಪಾರರು ಒಳಗಾಗಿದ್ದಾರೆ. ಅಂತಹ ಜನರಿಗೆ ನ್ಯಾಯ ಕೊಡಬೇಕಾಗಿರುವುದು ಪ್ರತಿಯೊಂದು ರಾಜಕೀಯ ಪಕ್ಷ ಹಾಗೂ ಸರ್ಕಾರದ ಕರ್ತವ್ಯ. ಹೀಗಾಗಿ ಕೋಟ್ಯಂತರ ರೂಪಾಯಿ ಮೀಸಲಿಟ್ಟು ಜಾತಿ ಸಮೀಕ್ಷೆ ನಡೆಸಲಾಯಿತು. ಆದರೆ, ಈ ವರದಿಯನ್ನು ಈಗಿರುವ ಸರ್ಕಾರ ಸ್ವೀಕರಿಸಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾತಿ ಸಮೀಕ್ಷೆ ವರದಿ ಬಹಿರಂಗಪಡಿಸಲಾಗುವುದು. ಕುಲಶಾಸ್ತ್ರೀಯ ಅಧ್ಯಯದ ವರದಿಯ ಶಿಫಾರಸು ಆಧರಿಸಿ ಉಪ್ಪಾರರ ಮೀಸಲಾತಿಗೆ ಶಿಫಾರಸು ಮಾಡಲಾಗುವುದು’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಉಪ್ಪಾರ ಸಮುದಾಯಕ್ಕೆ ಪರಶುರಾಮನ ಕಾಲದಿಂದಲೂ ಇತಿಹಾಸವಿದೆ. ಶ್ರಮ ಸಂಸ್ಕೃತಿಯ ಬದುಕು ಉಪ್ಪಾರರದು. ಬೇರೆಯವರಿಗೂ ಉದ್ಯೋಗ ನೀಡಿದ ಸಮುದಾಯವಿದು. ಉಪ್ಪಿಗೂ ಸಮುದಾಯಕ್ಕೂ ಅವಿನಾಭಾವ ಸಂಬಂಧವಿದೆ. ಉಪ್ಪು ಸತ್ಯದ ಪ್ರತೀಕ. ಇಂತಹ ಸಮುದಾಯದೊಂದಿಗೆ ಕಾಂಗ್ರೆಸ್‌ ಎಂದಿಗೂ ನಿಲ್ಲುತ್ತದೆ’ ಎಂದು ಆಶ್ವಾಸನೆ ನೀಡಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಎಲ್ಲ ಸಮುದಾಯಕ್ಕೂ ಸ್ಪಂದಿಸಿದೆ. ಚುನಾವಣೆ ಸಂದರ್ಭದಲ್ಲಿ ಪ್ರಕಟಿಸಿದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ 170 ವಾಗ್ದಾನಗಳಲ್ಲಿ 165 ಈಡೇರಿಸಿದ್ದೇವೆ. ಕುವೆಂಪು, ಬಸವಣ್ಣ, ಕನಕದಾಸಕರ ಕರ್ನಾಟಕ ಆಗಬೇಕೆಂದು ನಾವು ಬಯಸುತ್ತಿದ್ದೇವೆ. ಆದರೆ, ಇಂದು ಬಸವಣ್ಣ, ಟಿಪ್ಪು ಸುಲ್ತಾನ್‌, ಕುವೆಂಪು, ನಾರಾಯಣಗುರು, ಭಗತ್‌ಸಿಂಗ್‌ ಹೆಸರಿನಲ್ಲಿ ವಿವಾದ ಸೃಷ್ಟಿಸಲಾಗಿದೆ. ಅಶಾಂತಿ ಬಿತ್ತುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ’ ಎಂದು ಕಿಡಿಕಾರಿದರು.

‘ಇತಿಹಾಸದ ಬದಲಾವಣೆ ಮಾಡುವ ಪ್ರಯತ್ನದ ವಿರುದ್ಧ ಮಠಾಧೀಶರು ಧ್ವನಿಯತ್ತಿರುವುದು ಸ್ವಾಗತಾರ್ಹ. ಧರ್ಮ, ನ್ಯಾಯಕ್ಕಾಗಿ ನೀವೂ (ಭಗೀರಥ ಶ್ರೀ) ಕೂಗು ಹಾಕುವ ಅಗತ್ಯವಿದೆ. ರಾಜ್ಯ ಉಳಿಯಬೇಕಾದರೆ ಎಲ್ಲರಲ್ಲೂ ಪ್ರೀತಿ ಮೂಡಬೇಕು. ಉಪ್ಪಾರ ಸಮುದಾಯದ ಕಷ್ಟದ ಬಗ್ಗೆ ಕಾಂಗ್ರೆಸ್‌ಗೆ ಅರಿವಿದೆ. ಸಮುದಾಯದ ಮುಖಂಡರನ್ನು ಗುರುತಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡಲಿದೆ’ ಎಂದು ಹೇಳಿದರು.

ಛಲವಾದಿ ಗುರುಪೀಠದ ಬಸವನಾಗೀದೇವ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಎಚ್.ಆಂಜನೇಯ, ಶಾಸಕ ಪುಟ್ಟರಂಗಶೆಟ್ಟಿ, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌, ಶಾಸಕ ಟಿ. ರಘುಮೂರ್ತಿ, ಭೀಮಾ ನಾಯ್ಕ್‌, ರಾಘವೇಂದ್ರ ಇಟ್ನಾಳ್‌, ಮಾಜಿ ಶಾಸಕ ಗೋವಿಂದಪ್ಪ, ಮಾಜಿ ಸಚಿವ ಶಿವಶಂಕರ್ ರೆಡ್ಡಿ, ಶ್ರೀನಿವಾಸ್‌ ಇದ್ದರು. ಹಂಪಿ ವಿಶ್ವವಿದ್ಯಾಲಯದ ಕೆ. ಮೇತ್ರಿ ಅವರ ‘ಉಪ್ಪಾರರು’ ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ಮೀಸಲಾತಿಗೆ ಸಹಕರಿಸಲು ಕೋರಿಕೆ

ಸಿದ್ದರಾಮ್ಯಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉಪ್ಪಾರ ಸಮುದಾಯದ ಹಲವು ಬೇಡಿಕೆಗಳನ್ನು ಈಡೇರಿಸಿದರು. ಸಮುದಾಯದ ಮೀಸಲಾತಿ ಬೇಡಿಕೆಗೂ ಅವರು ಸಹಕರಿಸಬೇಕು ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಕೋರಿದರು.

‘ಉಪ್ಪಾರ ಸಮುದಾಯ ಕಾಯಕ ಸಮಾಜ. ಒಂದು ಕಾಲದಲ್ಲಿ ಉಪ್ಪು ತಯಾರಿಸುತ್ತಿದ್ದರು. ಸೂರ್ಯವಂಶದ ಕ್ಷತ್ರಿಯ ಹಿನ್ನೆಲೆ ಹೊಂದಿದ್ದರು. ಕಾಲಚಕ್ರದ ಗತಿಯಲ್ಲಿ ಉಪ್ಪು ತಯಾರಿಕೆ ವೃತ್ತಿ ಶುರು ಮಾಡಿದರು. ಬ್ರಿಟಿಷರು ಗುಡಿ ಕೈಗಾರಿಕೆ ಸರ್ವನಾಶ ಮಾಡಿದಾಗ ಸಮುದಾಯ ವೃತ್ತಿ ಕಳೆದುಕೊಂಡು ಬೀದಿಗೆ ಬಿದ್ದಿತು. ಸ್ವಾತಂತ್ರ್ಯ ಹೋರಾಟದಲ್ಲಿ ಉಪ್ಪಾರರ ಕೊಡುಗೆ ಅಪಾರ’ ಎಂದು ನೆನಪಿಸಿಕೊಂಡರು.

‘ನಿಗಮದ ಅನುದಾನ ಹೆಚ್ಚಿಸಿ’

ಮೀಸಲಾತಿ ರದ್ದುಪಡಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಉಳಿಯಬೇಕಿದೆ. ದೇವರಾಜ ಅರಸು ನಿಗಮ ಒಡೆದು ಛಿದ್ರ ಮಾಡಿದ್ದು ಸರಿಯಲ್ಲ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು.

‘ಉಪ್ಪಾರ ನಿಗಮಕ್ಕೆ ಮೀಸಲಿಟ್ಟ ಅನುದಾನ ತೀರ ಕಡಿಮೆ. ಇದರಿಂದ ಅನ್ಯಾಯ ಆಗುತ್ತಿದ್ದು, ಕೊಳವೆ ಬಾವಿ ಸಂಖ್ಯೆ ಇಳಿಕೆ ಮಾಡಲಾಗಿದೆ. ಈ ಸಮುದಾಯಕ್ಕೆ ಆರ್ಥಿಕ ಚೈತನ್ಯ ತುಂಬುವ ಪ್ರಯತ್ನ ಆಗಬೇಕು. ಹೆಚ್ಚಿನ ಅನುದಾನ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

..

ಉಪ್ಪಾರ ಸಮುದಾಯ ದೇಶದ ಎಲ್ಲ ರಾಜ್ಯಗಳಲ್ಲಿದೆ. ಆದರೆ, ಬೇರೆ ಬೇರೆ ಹೆಸರುಗಳಿಂದ ಚದುರಿ ಹೋಗಿದ್ದೇವೆ. ನಾವೆಲ್ಲರೂ ಒಗ್ಗೂಡಿ ರಾಜಕೀಯ ಶಕ್ತಿ ಪಡೆಯುವ ಅಗತ್ಯವಿದೆ.

-ಶ್ರೀರಾಮುಲು ಸಗರ, ಅಧ್ಯಕ್ಷ, ಅಖಿಲ ಭಾರತ ಉಪ್ಪಾರ ಸಮಾಜ ಒಕ್ಕೂಟ

....

1931ರಿಂದ ಜಾತಿ ಆಧಾರಿತ ಸಮೀಕ್ಷೆ ನಡೆದಿಲ್ಲ. ಈ ಸಮೀಕ್ಷೆಗೆ ಸರ್ಕಾರವನ್ನು ಒತ್ತಾಯ ಮಾಡಬೇಕು. ನಾವೇ ಸಮೀಕ್ಷೆ ಕೂಡ ಮಾಡುತ್ತಿದ್ದೇವೆ. ಇದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.

-ವೆಂಕಟರಾವ್, ಅಧ್ಯಕ್ಷ, ತೆಲಂಗಾಣ ಉಪ್ಪು ತಯಾರಕರ ಸಂಘದ ಅಧ್ಯಕ್ಷ

...

ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಬೇಡಿಕೆ ಮುಂದಿಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ಕುಲಶಾಸ್ತ್ರೀಯ ಅಧ್ಯಯನ ನಡೆದಿದೆ. ಇದನ್ನು ಕೇಂದ್ರಕ್ಕೆ ಶಿಫಾರಸು ಮಾಡಿ ಮೀಸಲಾತಿ ಬೇಡಿಕೆಗೆ ಸ್ಪಂದಿಸಬೇಕು.

-ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT