ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ; ದೇವರು ಕೊಟ್ಟ ಶಿಕ್ಷೆಯೇ ಉತ್ಸವ ಆಚರಣೆ

ಲಕ್ಷ್ಮೀ ನರಸಿಂಹಸ್ವಾಮಿಯ ಗುಂಡಿನ ಸೇವೆ, ಅನ್ನದ ಕೋಟೆ ಉತ್ಸವ
Last Updated 4 ಫೆಬ್ರುವರಿ 2023, 5:16 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಹೊರಕೆರೆ ದೇವರಪುರದ ಲಕ್ಷ್ಮೀ ನರಸಿಂಹಸ್ವಾಮಿಯ ಗುಂಡಿನ ಸೇವೆ ಹಾಗೂ ಅನ್ನದ ಕೋಟೆ ಉತ್ಸವ ಫೆ.6 ಮತ್ತು 7ರಂದು ವಿಜೃಂಭಣೆಯಿಂದ ನಡೆಯಲಿದೆ. 12 ವರ್ಷಗಳಿಗೆ ಒಮ್ಮೆ ಅದ್ಧೂರಿಯಾಗಿ ನಡೆಯುವ ಈ ಉತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ರಂಗಪ್ಪನ ಲಕ್ಷಾಂತರ ಭಕ್ತರು ಆಗಮಿಸಿತ್ತಾರೆ.

ದೇವರು ನೀಡಿದ ಶಿಕ್ಷೆಯನ್ನೇ ಇಲ್ಲಿ ಉತ್ಸವವಾಗಿ ಆಚರಿಸಲಾಗುತ್ತದೆ. ನಂದರಾಜ ಪಟ್ಟಣ (ಈಗಿನ ನಂದನಹೊಸೂರು) ಬೆಂಕಿಯಿಂದ ಭಸ್ಮವಾದಾಗ ಕೃಷ್ಣಾಚಲ ಬೆಟ್ಟದಲ್ಲಿ ದನ ಕಾಯುತ್ತಿದ್ದ ಹುಡುಗರು ಭಯಭೀತರಾಗಿ ಮುಂದೇನಾಗುವುದೋ ಎಂದು ಕಂಗಾಲಾಗಿರುತ್ತಾರೆ. ಆಗ ಸ್ವಾಮಿಯು ಸಾಧು ವೇಷದಲ್ಲಿ ಬಂದು ದನ ಕಾಯುವ ಹುಡುಗರಲ್ಲಿ ಒಬ್ಬನನ್ನು ಕರೆದು ‘ನಿಮ್ಮ ಪಟ್ಟಣವು ಸುಟ್ಟು ಹೋಗಿದೆ. ಈಗ ನೀವು ಎಲ್ಲಿಗೆ ಹೋಗುತ್ತೀರಿ? ಊಟಕ್ಕೆ ಏನು ಮಾಡುತ್ತೀರಿ? ನಿಮ್ಮ ಜತೆ ನನಗೂ ಊಟ ಸಿಗಬಹುದೇ?’ ಎಂದು ಕೇಳುತ್ತದೆ.

ಆಗ ಆ ಹುಡುಗನಿಗೆ ಸಿಟ್ಟು ಬಂದು ‘ಇದೇ ಬೆಟ್ಟದ ಹಿಂದೆ ಇರುವ ತಾಳ್ಯದ ಆಂಜನೇಯಸ್ವಾಮಿ ದೇವರಿಗೆ ನೂರೊಂದೆಡೆ ಹಾಕಿದ್ದಾರೆ. ನೀನು ಅಲ್ಲಿಗೆ ಹೋದರೆ ಊಟ ಸಿಗುತ್ತದೆ’ ಎಂದು ಹೇಳುತ್ತಾನೆ. ಆಗ ಸ್ವಾಮಿಗೆ ಈ ಹುಡುಗ ಸುಳ್ಳು ಹೇಳುತ್ತಿದ್ದಾನೆ ಹಾಗೂ ಮುಗ್ದನಿದ್ದಾನೆ ಎಂದು ಗೊತ್ತಾಗುತ್ತದೆ.

‘ಹಸಿವಿನ ವಿಚಾರದಲ್ಲಿ ಸುಳ್ಳು ಹೇಳಬಾರದು. ನಿನ್ನ ಸುಳ್ಳಿಗೆ ಶಿಕ್ಷೆ ಆಗಲೇಬೇಕು. ನೀನು ಹೇಳಿದ ಜಾಗದಲ್ಲೇ ನಾನು ನೂರೊಂದೆಡೆ ಹಾಕಿಸಿಕೊಳ್ಳುತ್ತೇನೆ. ನಿನ್ನ ಸುಳ್ಳಿಗೆ ಶಿಕ್ಷೆಯಾಗಿ ನಿನ್ನ ಎದೆಯ ಮೇಲೆ ಮೂರು ಗುಂಡುಗಳನ್ನು ಇರಿಸಿ ತಾಳ್ಯದ ಆಂಜನೇಯ ಸ್ವಾಮಿಯ ಎದುರಿನಲ್ಲಿ ಚಮಟಿಗೆಯಿಂದ ನಿಮ್ಮವರಿಂದಲೇ ಹೊಡೆಸಿ, ನಿನ್ನನ್ನು ನನ್ನ ದಾಸಯ್ಯನನ್ನಾಗಿ ಮಾಡಿಕೊಳ್ಳುತ್ತೇನೆ. ಸುತ್ತಲಿನ ಹತ್ತಾರು ಗ್ರಾಮಗಳ ದೇವರುಗಳ ಸಮ್ಮುಖದಲ್ಲಿ ಅನ್ನದ ಕೋಟೆ ಮಾಡಿಸಿ ಅನ್ನ ಹಾಕಿಸುತ್ತೇನೆ’ ಎಂದು ಹೇಳುತ್ತದೆ. ಇದರಂತೆ ಪ್ರತಿ 12 ವರ್ಷಗಳಿಗೆ ಒಮ್ಮೆ ಗುಂಡಿನ ಸೇವೆ ಹಾಗೂ ಅನ್ನ ಕೋಟೆ ಉತ್ಸವ ನಡೆಯುತ್ತದೆ’ ಎನ್ನುತ್ತಾರೆ ಸ್ವಾಗತ ಸಮಿತಿಯ ಅಧ್ಯಕ್ಷ ಎಚ್.ಡಿ.ರಂಗಯ್ಯ.

ಹಿಂದಿನಿಂದಲೂ ನಂದನಹೊಸೂರಿನ ದಾಸಯ್ಯನ ವಂಶಸ್ಥರು ಗುಂಡಿನ ದಾಸಯ್ಯನಾಗಿ ಆಚರಣೆಯಲ್ಲಿ ಭಾಗವಹಹಿಸುತ್ತಾರೆ. ಗುಂಡಿನ ಸೇವೆ ಧಾರ್ಮಿಕ ಕಾರ್ಯಕ್ಕೆ ನೇಮಿಸುವ ದಾಸಯ್ಯನು ತಮ್ಮ ಮನೆದೈವ ಆಂಜನೇಯಸ್ವಾಮಿಗೆ ಮೊದಲ ಪೂಜೆ ಸಲ್ಲಿಸಿ 9 ದಿನ ಹಾಲು, ಹಣ್ಣು ಸೇವನೆ ಮಾಡಿ ನೇಮದಿಂದ ಇದ್ದು ಗುಂಡಿನ ಸೇವೆ ಆಚರಣೆಯಲ್ಲಿ ತೊಡಗುತ್ತಾರೆ ಎನ್ನುತ್ತಾರೆ ಅವರು.

ಗುಂಡಿನ ಸೇವೆ ಉತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.7ರಂದು ರಾತ್ರಿ 8ಕ್ಕೆ ಸುಧಾ ಬರಗೂರು ಅವರಿಂದ ನಗೆಹಬ್ಬ ಕಾರ್ಯಕ್ರಮ ನಡೆಯಲಿದೆ. ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಚಿತ್ರದುರ್ಗ, ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿಯ ಸದಸ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT